ADVERTISEMENT

ಕಾರ್ಮಿಕ ವರ್ಗದ ವಿನಾಶಕ್ಕೆ ಕೇಂದ್ರ ಸರ್ಕಾರ ಹುನ್ನಾರ: ವರಲಕ್ಷ್ಮಿ

ಸಿಐಟಿಯು: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 17ನೇ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2022, 16:24 IST
Last Updated 9 ಅಕ್ಟೋಬರ್ 2022, 16:24 IST
ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಮಾತನಾಡಿದರು
ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಮಾತನಾಡಿದರು   

ಮಂಗಳೂರು: ‘ದೇಶದ ಆರ್ಥಿಕತೆಯನ್ನು ಮುಂದಕ್ಕೊಯ್ಯುವಲ್ಲಿ ಕಾರ್ಮಿಕ ವರ್ಗ ಪ್ರಧಾನ ಪಾತ್ರ ವಹಿಸುತ್ತಿದೆ. ಆದರೆ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸರ್ಕಾರಿ ಸಂಸ್ಥೆಗಳನ್ನು ಮಾರಾಟ ಮಾಡುವ ಮೂಲಕ ಕಾರ್ಮಿಕ ವರ್ಗವನ್ನೇ ಇನ್ನಿಲ್ಲವಾಗಿಸಲು ವ್ಯವಸ್ಥಿತ ಹುನ್ನಾರ ನಡೆಸುತ್ತಿದೆ’ ಎಂದು ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷರಾದ ಎಸ್.ವರಲಕ್ಷ್ಮಿ ಹೇಳಿದರು.

ಸಿಐಟಿಯು ವತಿಯಿಂದ ಇಲ್ಲಿ ಭಾನುವಾರ ಏರ್ಪಡಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 17ನೇ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದ ಕಾರ್ಮಿಕ ವರ್ಗವನ್ನು ಪ್ರತಿನಿಧಿಸುವ ಕೇಂದ್ರ ಕಾರ್ಮಿಕ ಸಂಘಟನೆಗಳನ್ನು ಕೈಬಿಟ್ಟು ಭಾರತೀಯ ಕಾರ್ಮಿಕ ಸಮ್ಮೇಳನವನ್ನು ನಡೆಸುವ ಮೂಲಕ ಸರ್ಕಾರ ತನ್ನ ನಿಜ ಬಣ್ಣ ಏನೆಂಬುದನ್ನು ತೋರಿಸಿಕೊಟ್ಟಿದೆ’ ಎಂದರು.

ADVERTISEMENT

‘ಹೆಜ್ಜೆಹೆಜ್ಜೆಗೂ ಕಾರ್ಮಿಕರ ಬದುಕಿಗೆ ಮಾರಕ ಹೊಡೆತವನ್ನು ಕೇಂದ್ರ ಸರ್ಕಾರ ನೀಡುತ್ತಿದೆ.ಕಾರ್ಮಿಕ ವರ್ಗವನ್ನು ಕಡೆಗಣಿಸಿದ ಇಡೀ ಆರ್ಥಿಕ ವ್ಯವಸ್ಥೆಯನ್ನು ಕಾರ್ಪೊರೇಟ್ ಕಂಪನಿಗಳಿಗೆ ಧಾರೆ ಎರೆಯುತ್ತಿದೆ. ಕೇಂದ್ರವು ತನ್ನ ಆರ್ಥಿಕ ನೀತಿಗಳನ್ನು ಕೂಡಲೇ ಬದಲಿಸದಿದ್ದರೆ ಸರ್ಕಾರವನ್ನೇ ಬದಲಿಸಲು ಕಾರ್ಮಿಕ ವರ್ಗ ಸನ್ನದ್ಧವಾಗಬೇಕು’ ಎಂದರು.

ಸಿಐಟಿಯು ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ, ‘ದೇಶದಲ್ಲಿ ಸೌಹಾರ್ದ ಮರುಸ್ಥಾಪಿಸಲು ಹಾಗೂ ಭವ್ಯ ಭಾರತದ ನಿರ್ಮಿಸಲು ಕಾರ್ಮಿಕ ವರ್ಗದಿಂದ ಮಾತ್ರ ಸಾಧ್ಯ’ ಎಂದರು.

ರೈತ ಮುಖಂಡ ಕೆ.ಯಾದವ ಶೆಟ್ಟಿ, ಸಿಐಟಿಯು ರಾಜ್ಯ ಘಟಕದ ಉಪಾಧ್ಯಕ್ಷ ವಸಂತ ಆಚಾರಿ, ಪದ್ಮಾವತಿ ಶೆಟ್ಟಿ, ಕಾರ್ಮಿಕ ಚಳವಳಿಯ ಹಿರಿಯ ನಾಯಕರಾದ ಯು.ಬಿ.ಲೋಕಯ್ಯ,ಯೋಗೀಶ್ ಜಪ್ಪಿನಮೊಗರು ಇದ್ದರು.

ಸಿಐಟಿಯು ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.