ADVERTISEMENT

ಭಕ್ತಿ ಇದ್ದರೆ ಮುಕ್ತಿ, ಮೋಕ್ಷ ಪ್ರಾಪ್ತಿ: ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

ಧರ್ಮಸ್ಥಳದಲ್ಲಿ 26ನೇ ವರ್ಷದ ಭಜನಾ ತರಬೇತಿ ಕಮ್ಮಟ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2024, 13:48 IST
Last Updated 22 ಸೆಪ್ಟೆಂಬರ್ 2024, 13:48 IST
ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಭಜನಾ ತರಬೇತಿ ಕಮ್ಮಟ ಉದ್ಘಾಟಿಸಿದರು
ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಭಜನಾ ತರಬೇತಿ ಕಮ್ಮಟ ಉದ್ಘಾಟಿಸಿದರು   

ಉಜಿರೆ: ಅನ್ನದಾನ, ವಿದ್ಯಾದಾನ, ಅಭಯದಾನ ಮತ್ತು ಔಷಧಿ ದಾನದೊಂದಿಗೆ ಸರ್ವಧರ್ಮೀಯರ ಭಕ್ತಿಯ ಹಾಗೂ ಸಾಮಾಜಿಕ ಸಾಮರಸ್ಯದ ಶ್ರದ್ಧಾಕೇಂದ್ರವಾಗಿರುವ ಧರ್ಮಸ್ಥಳವು ಭಕ್ತರಿಗೆ ಕಲಿಯುಗದ ಕಲ್ಪವೃಕ್ಷವಾಗಿದೆ. ಧರ್ಮಸ್ಥಳವು ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಂಸ್ಕಾರದ ಪ್ರೇರಣೆ ಮತ್ತು ಸ್ಫೂರ್ತಿಯ ಕೇಂದ್ರವಾಗಿದೆ ಎಂದು ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ 26ನೇ ವರ್ಷದ ಭಜನಾ ತರಬೇತಿ ಕಮ್ಮಟವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ನೃತ್ಯಭಜನೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವರ್ಧನೆಯಾಗುತ್ತದೆ. ಚಂಚಲವಾದ ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ಪರಿಶುದ್ಧ ಮನಸ್ಸಿನಿಂದ ಭಜನೆ ಮಾಡಿದರೆ ಜನರೆಲ್ಲ ಜಿನರಾಗಬಹುದು. ಜನಾರ್ದನರೂ ಆಗಬಹುದು. ಭಜನೆಯಿಂದ ತೀರ್ಥಯಾತ್ರೆ ಮಾಡಿದಷ್ಟೆ ಪುಣ್ಯ ಸಂಚಯವಾಗುತ್ತದೆ. ಪ್ರತಿ ಮನೆಯಲ್ಲೂ ಭಜನೆ ಮಾಡಿದರೆ ಸತ್ಯ, ಧರ್ಮ, ನ್ಯಾಯ, ನೀತಿ, ಅಹಿಂಸೆಯ ನೆಲೆಯಲ್ಲಿ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ಭಜನಾ ತರಬೇತಿ ಪಡೆದವರು ನಾಯಕತ್ವ, ಶಿಸ್ತು, ಸಂಯಮ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಆಯಾ ಊರಿನಲ್ಲಿ ಸಾಮಾಜಿಕ ಪರಿವರ್ತನೆ ಹಾಗೂ ಪ್ರಗತಿಯ ರೂವಾರಿಗಳಾಗಬೇಕು. ಉತ್ತಮ ಸಂಘಟಕರಾಗಿ ಆರೋಗ್ಯಪೂರ್ಣ ಸಮಾಜ ರೂಪಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಮಾಣಿಲದ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿದರು.

ಹೇಮಾವತಿ ವೀ.ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಭಾಗವಹಿಸಿದ್ದರು.

ಭಜನಾ ಕಮ್ಮಟದ ಕಾರ್ಯದರ್ಶಿ ಎ.ವಿ.ಶೆಟ್ಟಿ, 25 ತರಬೇತಿ ಕಮ್ಮಟಗಳಲ್ಲಿ 2,725 ಭಜನಾ ಮಂಡಳಿಗಳ 5,450 ಮಂದಿಗೆ ತರಬೇತಿ ನೀಡಲಾಗಿದೆ. ರಾಜ್ಯದಲ್ಲಿ 5 ಸಾವಿತ ಭಜನಾ ಮಂಡಳಿಗಳಿದ್ದು, ಒಂದು ಲಕ್ಷಕ್ಕೂ ಅಧಿಕ ಮಂದಿ ಭಜನೆಯಲ್ಲಿ ಪರಿಣಿತರಾಗಿದ್ದಾರೆ. ಈ ಬಾರಿಯ ತರಬೇತಿ ಕಮ್ಮಟದಲ್ಲಿ 11 ಜಿಲ್ಲೆಗಳಿಂದ 98 ಪುರುಷರು ಮತ್ತು 71 ಮಹಿಳೆಯರು ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.

ವಿದುಷಿ ಚೈತ್ರಾಭಟ್ ಧರ್ಮಸ್ಥಳ ಮತ್ತು ಬಳಗದವರ ನೃತ್ಯರೂಪಕದ ಮೂಲಕ ಪ್ರಾರ್ಥನೆ ನಡೆಯಿತು.

ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯಪ್ರಸಾದ್ ಸ್ವಾಗತಿಸಿದರು. ಶ್ರೀನಿವಾಸ ರಾವ್ ಧರ್ಮಸ್ಥಳ ವಂದಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ರಾಮ್‌ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಭಜನಾ ತರಬೇತಿ ಕಮ್ಮಟ ಉದ್ಘಾಟಿಸಿ ಮಾತನಾಡಿದರು
ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಭಜನಾ ತರಬೇತಿ ಕಮ್ಮಟ ಉದ್ಘಾಟಿಸಿ ಮಾತನಾಡಿದರು
ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಭಜನಾ ತರಬೇತಿ ಕಮ್ಮಟ ಉದ್ಘಾಟಿಸಿ ಮಾತನಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.