ADVERTISEMENT

ವಿಶೇಷ ಮಕ್ಕಳನ್ನು ಮುಖ್ಯವಾಹಿನಿಗೆ ಕರೆತನ್ನಿ

ವಾರ್ಷಿಕೋತ್ಸವದಲ್ಲಿ ಎನ್‌ಎಂಪಿಟಿ ಅಧ್ಯಕ್ಷ ರಮಣ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 9:07 IST
Last Updated 14 ಫೆಬ್ರುವರಿ 2020, 9:07 IST
ಮಂಗಳೂರಿನ ಪುರಭವನದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿ ಚಂದ್ರಕಲಾ ಅವರನ್ನು ಸನ್ಮಾನಿಸಲಾಯಿತು.
ಮಂಗಳೂರಿನ ಪುರಭವನದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿ ಚಂದ್ರಕಲಾ ಅವರನ್ನು ಸನ್ಮಾನಿಸಲಾಯಿತು.   

ಮಂಗಳೂರು: ವಿಶೇಷ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಸಮಾಜ ಜತೆಯಾಗಿ ಶ್ರಮಿಸಬೇಕು ಎಂದು ನವಮಂಗಳೂರು ಬಂದರು ಮಂಡಳಿ ಅಧ್ಯಕ್ಷ ಎ.ವಿ.ರಮಣ ಸಲಹೆ ನೀಡಿದರು.

ನಗರದ ಪುರಭವನದಲ್ಲಿ ಗುರುವಾರ ಸೇವಾಭಾರತಿ ಟ್ರಸ್ಟ್‌ನ ಚೇತನಾ ಬಾಲ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮಾನವ ಸೇವೆಯೇ ಮಾಧವ ಸೇವೆ ಎನ್ನುವುದು ನಮ್ಮ ಸಂಸ್ಕೃತಿಯ ತಿರುಳು. ಅದರಲ್ಲೂ ಮುಖ್ಯವಾಗಿ ವಿಶೇಷ ಮಕ್ಕಳ ಸೇವೆಗೆ ವಿಶೇಷ ಮಹತ್ವವಿದೆ. ವಿಶೇಷ ಮಕ್ಕಳ ಪೈಕಿ ಎಷ್ಟೋ ಮಂದಿಯಲ್ಲಿ ಸುಪ್ತ ಪ್ರತಿಭೆಗಳು ಅಡಗಿದ್ದು, ಅವುಗಳನ್ನು ಗುರುತಿಸಿ, ಪೋಷಿಸುವ ಕಾರ್ಯ ಆಗಬೇಕಿದೆ. ಈ ನಿಟ್ಟಿನಲ್ಲಿ ಸೇವಾಭಾರತಿ ಸೇವೆ ಶ್ಲಾಘನೀಯ’ ಎಂದು ಬಣ್ಣಿಸಿದರು.

ADVERTISEMENT

ವಿಶೇಷ ಮಕ್ಕಳ ಪ್ರತಿಭೆಯನ್ನು ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಬಳಸಿಕೊಳ್ಳುವ ಕಾರ್ಯ ಆಗಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರದ ಜತೆಗೆ ಸ್ವಯಂ ಸೇವಾ ಸಂಸ್ಥೆಗಳು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಲ್ಯಾಂಡ್ ಟ್ರೇಡ್ಸ್ ಮಾಲೀಕ ಶ್ರೀನಾಥ್ ಹೆಬ್ಬಾರ್ ಮಾತನಾಡಿ, ವಿಶೇಷ ಮಕ್ಕಳಿಗೆ ಪ್ರೇಮ, ಸಹೃದಯತೆಯ ಅವಶ್ಯಕತೆ ಇದೆ. ಅವರ ಬಗ್ಗೆ ವಿಶೇಷ ಕಾಳಜಿ ವಹಿಸಿ, ಅವರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವ ಬಾಲವಿಕಾಸ ಕೇಂದ್ರದ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.

ವಿಶೇಷ ಮಕ್ಕಳ ಅಗತ್ಯತೆಗಳಿಗೆ ಮಾನವೀಯ ಸ್ಪಂದನೆ ನೀಡುವುದು ಸಮಾಜದ ಪ್ರತಿಯೊಬ್ಬರ ಹೊಣೆಗಾರಿಕೆ ಎಂದರು.

ಶಾಲೆಯ ನಿವೃತ್ತ ಶಿಕ್ಷಕಿ ಚಂದ್ರಕಲಾ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸೇವಾಭಾರತಿ ಅಧ್ಯಕ್ಷೆ ಸುಮತಿ ವಾಸುದೇವ ಶಣೈ ಅಧ್ಯಕ್ಷತೆ ವಹಿಸಿದ್ದರು. ಸವಿತಾ ವಂದಿಸಿದರು. ಶಾಲಾ ಮುಖ್ಯಶಿಕ್ಷಕಿ, ಟ್ರಸ್ಟಿಗಳು, ವಿಶೇಷ ಮಕ್ಕಳ ಪಾಲಕರು ಉಪಸ್ಥಿತರಿದ್ದರು. ಬಳಿಕ ವಿಶೇಷ ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.