ADVERTISEMENT

‘ಮಾಲಿನ್ಯ ನಿಯಂತ್ರಣಕ್ಕೆ ಅಗತ್ಯ ಕ್ರಮ’

ಯಾಂತ್ರೀಕೃತ ಕಲ್ಲಿದ್ದಲು ನಿರ್ವಹಣಾ ವ್ಯವಸ್ಥೆ ಜೂನ್‌ನಿಂದ ಆರಂಭ

​ಪ್ರಜಾವಾಣಿ ವಾರ್ತೆ
Published 22 ಮೇ 2019, 15:28 IST
Last Updated 22 ಮೇ 2019, 15:28 IST
ಮಂಗಳೂರಿನ ಎನ್‌ಎಂಪಿಟಿಯಲ್ಲಿ ಯಾಂತ್ರೀಕೃತ ಕಲ್ಲಿದ್ದಲು ಟರ್ಮಿನಲ್‌ ಅನ್ನು ಹಡಗು ಸಚಿವಾಲಯದ ಕಾರ್ಯದರ್ಶಿ ಗೋಪಾಲಕೃಷ್ಣ ಬುಧವಾರ ಉದ್ಘಾಟಿಸಿದರು.
ಮಂಗಳೂರಿನ ಎನ್‌ಎಂಪಿಟಿಯಲ್ಲಿ ಯಾಂತ್ರೀಕೃತ ಕಲ್ಲಿದ್ದಲು ಟರ್ಮಿನಲ್‌ ಅನ್ನು ಹಡಗು ಸಚಿವಾಲಯದ ಕಾರ್ಯದರ್ಶಿ ಗೋಪಾಲಕೃಷ್ಣ ಬುಧವಾರ ಉದ್ಘಾಟಿಸಿದರು.   

ಮಂಗಳೂರು: ನಗರದ ಎನ್‌ಎಂಪಿಟಿಯಲ್ಲಿ ಚೆಟ್ಟಿನಾಡ್ ಮಂಗಳೂರು ಕೋಲ್‌ ಟರ್ಮಿನಲ್‌ ಕಂಪನಿಯಿಂದ ಯಾಂತ್ರೀಕೃತ ಕಲ್ಲಿದ್ದಲು ನಿರ್ವಹಣಾ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದ್ದು, ಮಾಲಿನ್ಯ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಕಂಪನಿಯ ಸಮೂಹ ನಿರ್ದೇಶಕ ಚಂದ್ರಮೌಳೀಶ್ವರನ್‌ ವಿ. ತಿಳಿಸಿದರು.

ನಗರದ ಎನ್‌ಎಂಪಿಟಿಯಲ್ಲಿ ನೂತನ ಕಲ್ಲಿದ್ದಲು ನಿರ್ವಹಣಾ ವ್ಯವಸ್ಥೆ ಉದ್ಘಾಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಲಿದ್ದಲು ಸಾಗಣೆಯನ್ನು ಕೊಳವೆ ಮೂಲಕ ಮಾಡಲಾಗುವುದು. ಅಲ್ಲದೇ ದಾಸ್ತಾನು ಮಾಡುವ ಪ್ರದೇಶದಲ್ಲಿ ಒಣ ಹವೆ ಹಾಗೂ ನೀರು ಸಿಂಪಡಿಸುವ ಮೂಲಕ ದೂಳು ಹರಡದಂತೆ ತಡೆಯಲಾಗುವುದು. 14 ಮೀಟರ್ ಎತ್ತರದ ಗಾಳಿ ನಿರೋಧಕ ಕಾಂಪೌಂಡ್‌ ನಿರ್ಮಿಸುವ ಮೂಲಕ ದೂಳು ರಸ್ತೆಗೆ ಬರದಂತೆ ನೋಡಿಕೊಳ್ಳಲಾಗುವುದು ಎಂದರು.

ಈ ಸ್ಥಳದಲ್ಲಿ 140 ಟನ್ ವೇ ಬ್ರಿಡ್ಜ್ ಅನ್ನು ದಕ್ಷಿಣ ರೈಲ್ವೆಯಿಂದ ನಿರ್ವಹಿಸಲಾಗುತ್ತಿದ್ದು, ಟರ್ಮಿನಲ್‌ನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಇದರಿಂದ ಇಡೀ ಟರ್ಮಿನಲ್‌ನ ಕಾರ್ಯ ಚಟುವಟಿಕೆಗಳ ಮೇಲೆ ನಿಗಾ ವಹಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ಸದ್ಯಕ್ಕೆ ಎನ್‌ಎಂಪಿಟಿಯಲ್ಲಿ ವಾರ್ಷಿಕ 40 ಲಕ್ಷ ಟನ್‌ ಕಲ್ಲಿದ್ದಲನ್ನು ನಿರ್ವಹಿಸಲಾಗುತ್ತಿದೆ. ಹೊಸ ಯಾಂತ್ರೀಕೃತ ಟರ್ಮಿನಲ್‌ನಿಂದ ವಾರ್ಷಿಕ 67.5 ಲಕ್ಷ ಟನ್‌ ಕಲ್ಲಿದ್ದಲು ನಿರ್ವಹಿಸಲು ಸಾಧ್ಯವಿದೆ ಎಂದರು.

ಚೆಟ್ಟಿನಾಡ್ ಗ್ರೂಪ್ ಕಂಪನಿಯು ಎನ್ನೋರ್ ಬಂದರಿನಲ್ಲಿ ಯಾಂತ್ರಿಕೃತ ಕಲ್ಲಿದ್ದಲು ನಿರ್ವಹಣಾ ವ್ಯವಸ್ಥೆಯನ್ನು ನಡೆಸಿಕೊಂಡು ಬರುತ್ತಿದೆ. ಎನ್‌ಎಂಪಿಟಿಯ ಯಾಂತ್ರೀಕೃತ ವ್ಯವಸ್ಥೆಯು ಜೂನ್‌ ಮೊದಲ ವಾರದಿಂದ ಕಾರ್ಯಾಚರಣೆ ಆರಂಭಿಸಲಿದೆ ಎಂದು ತಿಳಿಸಿದರು.

ಎನ್‌ಎಂಪಿಟಿ ದಾಸ್ತಾನು ಸ್ಥಳಗಳಲ್ಲಿ ಟ್ರಕ್‌ಗಳನ್ನು ಸ್ವಚ್ಛಗೊಳಿಸಲಾಗುತ್ತಿದ್ದು, ಇದರಿಂದ ಮಾಲಿನ್ಯ ಉಂಟಾಗುತ್ತಿದೆ. ಇದನ್ನು ತಡೆಯಲು ಟ್ರಕ್‌ಗಳನ್ನು ಸ್ವಚ್ಛಗೊಳಿಸಲು ಟರ್ಮಿನಲ್‌ನಲ್ಲಿಯೇ ವ್ಯವಸ್ಥೆ ಮಾಡುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚಿಸಿದ್ದು, ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಎನ್‌ಎಂಪಿಟಿ ನೂತನ ಅಧ್ಯಕ್ಷೆ ಎಂ. ಬೀನಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.