ADVERTISEMENT

ಹೊಂದಾಣಿಕೆ ಬಹಿರಂಗಗೊಳ್ಳುವ ಭಯವೇ; ಕ್ಯಾ. ಬ್ರಿಜೇಶ್ ಚೌಟ

ಕೊಲೆ ಪ್ರಕರಣವನ್ನು ಎನ್‌ಐಎಗೆ ಒಪ್ಪಿಸಿ: ಕ್ಯಾ. ಚೌಟ

​ಪ್ರಜಾವಾಣಿ ವಾರ್ತೆ
Published 6 ಮೇ 2025, 5:08 IST
Last Updated 6 ಮೇ 2025, 5:08 IST
ಬ್ರಿಜೇಶ್ ಚೌಟ
ಬ್ರಿಜೇಶ್ ಚೌಟ   

ಮಂಗಳೂರು: ‘ರಾಜ್ಯದ ಗೃಹ ಸಚಿವರು, ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಎನ್‌ಐಎಗೆ (ರಾಷ್ಟ್ರೀಯ ತನಿಖಾ ಸಂಸ್ಥೆ) ಹಸ್ತಾಂತರಿಲು ಸಾಧ್ಯವಿಲ್ಲ ಎಂದಿದ್ದಾರೆ. ಎನ್‌ಐಎಗೆ ಒಪ್ಪಿಸಿದರೆ, ಕಾಂಗ್ರೆಸ್ ಮತ್ತು ನಿಷೇಧಿತ ಪಿಎಫ್‌ಐ ಸಂಘಟನೆ ನಡುವಿನ ಹೊಂದಾಣಿಕೆ ಬಹಿರಂಗಗೊಳ್ಳಬಹುದೆಂಬ ಭಯವೇ’ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಪ್ರಶ್ನಿಸಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಲೆ ಪ್ರಕರಣದ ತನಿಖೆ ಪ್ರಾರಂಭವಾಗುವ ಪೂರ್ವದಲ್ಲೇ ಗೃಹ ಸಚಿವರು, ‘ಸುಹಾಸ್ ಶೆಟ್ಟಿ ರೌಡಿಶೀಟರ್, ಅವನ ಮೇಲೆ ಪ್ರಕರಣಗಳು ಇವೆ, ಆತ ಅಪರಾಧ ಚಟುವಟಿಕೆಯಲ್ಲಿ ಇರುವ ಕಾರಣಕ್ಕೆ ಕೊಲೆ ಆಗಿದೆ’ ಎಂಬ ಹೇಳಿಕೆ ಕೊಟ್ಟಿದ್ದಾರೆ. ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಲು ಕಾಂಗ್ರೆಸ್‌ ಹಿಂದೇಟು ಹಾಕುತ್ತಿರುವುದು, ಇದನ್ನು ಸಾಮಾನ್ಯ ಅಪರಾಧ ಪ್ರಕರಣದಂತೆ ಹಗುರವಾಗಿ ಪರಿಗಣಿಸಿರುವುದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇದು ಆಡಳತಾತ್ಮಕ ವಿಳಂಬ ಅಲ್ಲ, ರಾಜ್ಯ ಸರ್ಕಾರದ ಆಶ್ರಯದಲ್ಲಿ ಬೆಳೆಯುತ್ತಿರುವ ಇಸ್ಲಾಮಿಕ್ ಮೂಲಭೂತವಾದಿ ಶಕ್ತಿಗಳ ಜೊತೆಗಿನ ಮೈತ್ರಿ ರಕ್ಷಿಸಲು ದುರುದ್ದೇಶಪೂರ್ವಕವಾಗಿ ತನಿಖೆ ದಿಕ್ಕು ತಪ್ಪಿಸುವ ಪ್ರಯತ್ನ ನಡೆಯುತ್ತಿದೆ ಎಂದರು.

ನಿಷೇಧಿತ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರು ತಮ್ಮ ಗುರುತು ಮರೆಮಾಚಿ, ಕಾನೂನಿನಿಂದ ತಪ್ಪಿಸಿಕೊಳ್ಳುತ್ತಿದ್ದು, ಇವರಿಗೆ ಬೇರೆ ಬೇರೆ ಕಡೆಗಳಿಂದ ಆರ್ಥಿಕ ಮತ್ತು ಲಾಜಿಸ್ಟಿಕಲ್ ವ್ಯವಸ್ಥೆಯ ಸಹಾಯ ಸಿಗುತ್ತಿದೆ. ಇದು ಅವರ ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ಬಲಪಡಿಸಿದೆ ಎಂದು ವರದಿಯೊಂದು ಹೇಳಿದೆ ಎಂದು ಚೌಟ ಹೇಳಿದರು.

ADVERTISEMENT

ಸುಳ್ಯದ ಪ್ರವೀಣ್ ನೆಟ್ಟಾರು ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದು ಎನ್‌ಐಎಯೇ ವಿನಾ ರಾಜ್ಯ ಪೊಲೀಸರು ಅಲ್ಲ. ಕಾಂಗ್ರೆಸ್ ಆಡಳಿತದಲ್ಲಿ ಪಿಎಫ್‌ಐ ಚಟುವಟಿಕೆಗಳಿಗೆ ಕರ್ನಾಟಕವು ಸುರಕ್ಷಿತ ತಾಣವಾಗಿದೆ ಎಂಬುದು ಪುರಾವೆಗಳಿಂದ ದೃಢಪಟ್ಟಿದೆ. ಫಾಝಿಲ್ ಕುಟುಂಬಕ್ಕೆ ಕ್ಲೀನ್‌ ಚಿಟ್ ನೀಡಲು ಉತ್ಸಾಹ ತೋರಿದ ನಾಯಕರು, ಸುಹಾಸ್‌ಗೆ ರೌಡಿ ಶೀಟರ್‌ ಹಣೆಪಟ್ಟಿ ಕಟ್ಟಿ, ವಾಸ್ತವ ಮರೆಮಾಡಲು ಯತ್ನಿಸಿದರು. ಸುಳ್ಳು ಆರೋಪ ಬಿಟ್ಟು, ತನಿಖೆ ದಾರಿ ತಪ್ಪಿಸುವ ಮತ್ತು ಸತ್ಯ ಮರೆಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ಪ್ರೇಮಾನಂದ ಶೆಟ್ಟಿ, ಪ್ರಶಾಂತ್, ಅರುಣ್ ಶೇಟ್, ವಸಂತ ಪೂಜಾರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.