ADVERTISEMENT

ಮತದ ಆಸೆಗೆ ಕಾಂಗ್ರೆಸ್‌ನಿಂದ ವಿವಾದ

ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಆರೋಪ

​ಪ್ರಜಾವಾಣಿ ವಾರ್ತೆ
Published 21 ಮೇ 2022, 15:45 IST
Last Updated 21 ಮೇ 2022, 15:45 IST

ಮಂಗಳೂರು:ಮುಂಬರುವ ಚುನಾವಣೆಯ ಹಿತದೃಷ್ಟಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರನ್ನಿಟ್ಟುಕೊಂಡು ಕಾಂಗ್ರೆಸ್ ವಿವಾದ ಸೃಷ್ಟಿಸುತ್ತಿದೆ. ಆದರೆ, ಬಿಲ್ಲವ ಮತ ತಪ್ಪಿಯೂ ಕಾಂಗ್ರೆಸ್‌ಗೆ ಬರಲು ಸಾಧ್ಯವಿಲ್ಲ ಎಂದು ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಹೇಳಿದರು.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ಗೆ ಮಾತನಾಡಲು ಯಾವ ವಿಷಯ ಸಿಗುತ್ತಿಲ್ಲ. ಹೀಗಾಗಿ, ಎಸ್ಸೆಸ್ಸೆಲ್ಸಿ ಪಠ್ಯದಲ್ಲಿ ನಾರಾಯಣ ಗುರುಗಳ ವಿಷಯ ಕೈಬಿಡಲಾಗಿದೆ ಎಂದು ಸುಳ್ಳು ಪ್ರಚಾರ ಮಾಡುತ್ತಿದೆ. ಪಠ್ಯದಿಂದ ಗುರುಗಳ ಪಾಠ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಶಿಕ್ಷಣ ಸಚಿವರು ಸ್ಪಷ್ಟಪಡಿಸಿದ ಮೇಲೂ ಕಾಂಗ್ರೆಸ್ ವಿವಾದಿತ ಹೇಳಿಕೆಗಳನ್ನು ನಿಲ್ಲಿಸದಿರುವುದು ಹಾಸ್ಯಾಸ್ಪದವಾಗಿದೆ’ ಎಂದರು.

ಬಿಜೆಪಿಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಬಿಲ್ಲವ ಮತದಾರರಿದ್ದಾರೆ ಎಂಬ ಅಂಶ ಕಾಂಗ್ರೆಸ್ ನಾಯಕರಿಗೆ ಗೊತ್ತಿದೆ. ಆದ್ದರಿಂದ ಗುರುಗಳ ವಿಷಯದಲ್ಲಿ ವಿವಾದ ಸೃಷ್ಟಿಸಿದರೆ ಬಿಲ್ಲವ ಸಮುದಾಯದ ಮತ ತಮಗೆ ಸಿಗಬಹುದೆಂಬ ದುರಾಲೋಚನೆಯಿಂದ ವಿವಾದ ಸೃಷ್ಟಿಸುತ್ತಿದ್ದಾರೆ. ‘ಹಿಜಾಬ್ ಬೇಕು, ಕಿತಾಬ್ ಬೇಡ’ ಎನ್ನುವ ಕಾಂಗ್ರೆಸ್‌ಗೆ ಬಿಲ್ಲವ ಸಮುದಾಯದವರು ಮತ ಹಾಕುವುದಿಲ್ಲ ಎಂದು ಹೇಳಿದರು.

ADVERTISEMENT

ನಾರಾಯಣ ಗುರುಗಳ ಬಗ್ಗೆ ನಿಜವಾದ ಕಾಳಜಿ ಮತ್ತು ಗೌರವ ಇರುವುದು ಬಿಜೆಪಿಗೆ ವಿನಾ ಕಾಂಗ್ರೆಸ್‌ಗೆ ಅಲ್ಲ. ಬಿಜೆಪಿ ಆಡಳಿತದಲ್ಲಿ ಬಂಟ್ವಾಳ, ಉಡುಪಿ, ಶಿವಮೊಗ್ಗ ಮತ್ತು ಉತ್ತರ ಕನ್ನಡದಲ್ಲಿ ನಾರಾಯಣ ಗುರು ವಸತಿ ಶಾಲೆ ಆರಂಭಿಸಲಾಗುತ್ತಿದೆ. ಕಾಂಗ್ರೆಸ್ ಅವಧಿಯಲ್ಲಿ ಗುರುಗಳನ್ನು ಅವಮಾನಿಸುವ ಕೆಲಸವಷ್ಟೇ ಆಗಿತ್ತು. ಕಾಂಗ್ರೆಸ್‌ನಲ್ಲಿ ಹಿರಿಯ ನಾಯಕ ಬಿ.ಜನಾರ್ದನ ಪೂಜಾರಿ ಅವರನ್ನು ಬಿಟ್ಟರೆ ನಾರಾಯಣ ಗುರುಗಳ ಅನುಯಾಯಿಗಳು ಬೇರೆ ಯಾರೂ ಇಲ್ಲ. ಅವರನ್ನೂ ಕೂಡ ಕಾಂಗ್ರೆಸ್ ಕಣ್ಣೀರಿಡುವಂತೆ ಮಾಡಿತ್ತು ಎಂದು ಅವರು ಟೀಕಿಸಿದರು.

ಲೇಡಿಹಿಲ್ ವೃತ್ತಕ್ಕೆ ನಾರಾಯಣ ಗುರುಗಳ ಹೆಸರನ್ನಿಡಲು ಮುಂದಾಗ ಮೊದಲು ವಿರೋಧಿಸಿದ್ದೇ ಕಾಂಗ್ರೆಸ್‌ನ ಪದ್ಮರಾಜ್ ಆರ್ ಮತ್ತು ಮಾಜಿ ಶಾಸಕ ಜೆ.ಆರ್.ಲೋಬೊ. ಇವರೆಲ್ಲ ಯಾವ ನೈತಿಕತೆಯಿಂದ ಗುರುಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹರಿಕೃಷ್ಣ ಬಂಟ್ವಾಳ ಪ್ರಶ್ನಿಸಿದರು. ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದಶಿ ರಾಮದಾಸ್ ಬಂಟ್ವಾಳ, ಪ್ರಮುಖರಾದ ಕೊರಗಪ್ಪ, ರಾಧಾಕೃಷ್ಣ, ಜಯಶ್ರೀ ಕರ್ಕೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.