ಮಂಗಳೂರು: ಬಂಟ್ವಾಳ ತಾಲ್ಲೂಕಿನ ಕುರಿಯಾಳ ಗ್ರಾಮದ ಇರಾ ಕೋಡಿಯಲ್ಲಿ ನಡೆದ ಅಬ್ದುಲ್ ರಹಿಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಬ್ಬ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಪುದು ಗ್ರಾಮದ ಸಚಿನ್ ಯಾನೆ ಸಚ್ಚು ರೊಟ್ಟಿಗುಡ್ಡೆ ಬಂಧಿತ ಆರೋಪಿ.
ಬಡಗಬೆಳ್ಳೂರು ಗ್ರಾಮದ ಕೊಳತ್ತಮಜಲು ನಿವಾಸಿ, 32 ವರ್ಷ ವಯಸ್ಸಿನ ಚಾಲಕ ಮತ್ತು ಜುಮಾ ಮಸೀದಿಯ ಕಾರ್ಯದರ್ಶಿಯಾಗಿದ್ದ ರಹಿಮಾನ್ ಮತ್ತು ಸಹವರ್ತಿ ಕಲಂದರ್ ಶಾಫಿ ಮೇಲೆ ಮೇ 27ರಂದು ಮಾರಕಾಸ್ತ್ರಗಳಿಂದ ದಾಳಿ ಮಾಡಲಾಗಿತ್ತು. ಕಲಂದರ್ ಶಾಫಿ ಬದುಕಿ ಉಳಿದಿದ್ದಾರೆ. 11 ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿತ್ತು.
ಕೃಷ್ಣ ರಾವ್‌ಗೆ ಜಾಮೀನು ನಿರಾಕರಣೆ
ಪುತ್ತೂರು: ಸಹಪಾಠಿ ಯುವತಿಯೊಂದಿಗೆ ಸ್ನೇಹ ಬೆಳೆಸಿ, ಆಕೆ ತಾಯಿಯಾಗುವಂತೆ ಮಾಡಿ, ವಂಚಿಸಿದ ಆರೋಪಿ ಪುತ್ತೂರು ನಗರದ ಬಪ್ಪಳಿಗೆ ನಿವಾಸಿ ಕೃಷ್ಣ ಜೆ. ರಾವ್‌ಗೆ ನ್ಯಾಯಾಲಯ ಜಾಮೀನು ನಿರಾಕರಿಸಿದೆ ಎಂದು ಪುತ್ತೂರು ಮಹಿಳಾ ಠಾಣೆಯ ಇನ್‌ಸ್ಪೆಕ್ಟರ್ ತಿಳಿಸಿದ್ದಾರೆ.
'ಮದುವೆ ಆಗುವುದಾಗಿ ನಂಬಿಸಿ, ದೈಹಿಕ ಸಂಪರ್ಕ ಬೆಳೆಸಿದ್ದ ಸಹಪಾಠಿ ಯುವಕ, ನಾನು ಗರ್ಭಿಣಿ ಎಂದು ಗೊತ್ತಾದ ಮೇಲೆ ಮದುವೆಯಾಗಲು ನಿರಾಕರಿಸಿದ್ದು ನ್ಯಾಯ ಒದಗಿಸಬೇಕು' ಎಂದು ಸಂತ್ರಸ್ತ ಯುವತಿ ಮಹಿಳಾ ಠಾಣೆಗೆ ಜೂನ್ 24ರಂದು ದೂರು ನೀಡಿದ್ದರು. ಜೂನ್ 27ರಂದು ಈ ಯುವತಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಎಫ್ಐಆರ್ ದಾಖಲಾದ ಬೆನ್ನಲ್ಲೇ ಆರೋಪಿ ನಾಪತ್ತೆಯಾಗಿದ್ದ. ಆತನನ್ನು ಮೈಸೂರು ಜಿಲ್ಲೆ ಟಿ.ನರಸೀಪುರದಲ್ಲಿ ಬಂಧಿಸಲಾಗಿತ್ತು. ಆತನ ತಂದೆ ಜಗನ್ನಿವಾಸ ರಾವ್ ಅದಕ್ಕೂ ಮೊದಲೇ ಬಂಧನಕ್ಕೆ ಒಳಗಾಗಿದ್ದು ಪ್ರಕರಣದ ವಿಚಾರಣೆ ಮಂಗಳೂರಿನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ಶುಕ್ರವಾರ ನಡೆದಿತ್ತು.
ಮಹಿಳೆಯ ನಿಂದನೆ: ಐವರಿಗೆ ದಂಡ
ಮಂಗಳೂರು: ವಾಯು ವಿಹಾರಕ್ಕೆ ಹೋಗುವಾಗ ನಾಯಿಯನ್ನು ಕರೆದುಕೊಂಡು ಹೋದ ಮಹಿಳೆಯನ್ನು ನಿಂದಿಸಿದ ಐವರು ಆರೋಪಿಗಳಿಗೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಒಟ್ಟು ₹ 30 ಸಾವಿರ ದಂಡ ವಿಧಿಸಿದ್ದಾರೆ.
ಕುಂಜತ್ತಬೈಲ್‌ನಲ್ಲಿ ಮೇ 16ರಂದು ರಾತ್ರಿ 10 ಗಂಟೆಗೆ ನಾಯಿಮರಿಯನ್ನು ಹಿಡಿದುಕೊಂಡು ಹೋಗುತ್ತಿದ್ದಾಗ ರಾಮಣ್ಣ, ನವೀನ, ಲೋಹಿತಾಶ್ವ, ಲಾವಣ್ಯ ಮತ್ತು ಮೋಹನ ‘ನಾಯಿಯನ್ನು ಮನೆಯ ಮುಂದೆ ಕರೆದುಕೊಂಡು ಬಂದರೆ ಗಲೀಜು ಮಾಡುತ್ತದೆ’ ಎಂದು ಹೇಳಿ ನಂತರ ಅವಾಚ್ಯ ಪದಗಳಿಂದ ನಿಂದಿಸಿ, ದಾಳಿ ನಡೆಸಿದ್ದಾರೆ ಎಂದು ದೂರಲಾಗಿತ್ತು.
ಈ ಕುರಿತು ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಾಧೀಶರು ದಂಡದಲ್ಲಿ ₹ 15 ಸಾವಿರವನ್ನು ತೊಂದರೆಗೆ ಒಳಗಾದವರಿಗೆ ನೀಡುವಂತೆ ಸೂಚಿಸಿದ್ದಾರೆ ಎಂದು ಸರ್ಕಾರಿ ಅಭಿಯೋಜಕಿ ಜ್ಯೋತಿ ಪ್ರಸಾದ್ ನಾಯಕ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.