ADVERTISEMENT

ದಕ್ಷಿಣ ಕನ್ನಡದಲ್ಲಿ ಒಂದೇ ದಿನ 307 ಕೋವಿಡ್‌ ಪ್ರಕರಣಗಳು ವರದಿ

307 ಮಂದಿಗೆ ಸೋಂಕು ದೃಢ: 242ಜನ ಗುಣಮುಖ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2020, 5:14 IST
Last Updated 15 ಆಗಸ್ಟ್ 2020, 5:14 IST

ಮಂಗಳೂರು: ಕಳೆದ ಕೆಲ ದಿನಗಳಿಂದ ಇನ್ನೂರ ಗಡಿಯಲ್ಲಿದ್ದ ಕೋವಿಡ್–19 ಸೋಂಕಿತರ ಸಂಖ್ಯೆ ಶುಕ್ರವಾರ ತ್ರಿಶತಕ ದಾಟಿದ್ದು, ಜಿಲ್ಲೆಯಲ್ಲಿ 307 ಜನರಿಗೆ ಸೋಂಕು ದೃಢವಾಗಿದೆ. ಈ ಪೈಕಿ ಮಂಗಳೂರು ತಾಲ್ಲೂಕಿನಲ್ಲಿಯೇ ಗರಿಷ್ಠ 197 ಜನರಲ್ಲಿ ಸೋಂಕು ಖಚಿತವಾಗಿದೆ.

ಸೋಂಕಿತರ ಪೈಕಿ 93 ಪುರುಷರು, 52 ಮಹಿಳೆಯರು ಸೇರಿದಂತೆ 145 ಜನರಲ್ಲಿ ರೋಗ ಲಕ್ಷಣವಿದ್ದು, ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ. 75 ಪುರುಷರು ಹಾಗೂ 87 ಮಹಿಳೆಯರು ಸೇರಿದಂತೆ 162 ಜನರಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲ. ಇವರನ್ನು ಕೋವಿಡ್ ಕೇರ್ ಸೆಂಟರ್, ಹೋಂ ಐಸೋಲೇಷನ್‌ನಲ್ಲಿ ಇಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

ಪುತ್ತೂರು ತಾಲ್ಲೂಕಿನಲ್ಲಿ 14, ಬಂಟ್ವಾಳ ತಾಲ್ಲೂಕಿನಲ್ಲಿ 57, ಸುಳ್ಯ ತಾಲ್ಲೂಕಿನಲ್ಲಿ 17, ಬೆಳ್ತಂಗಡಿ ತಾಲ್ಲೂಕಿನಲ್ಲಿ 14 ಹಾಗೂ ಬೇರೆ ಜಿಲ್ಲೆಗಳ 8 ಜನರು ಸೋಂಕಿತರಲ್ಲಿ ಸೇರಿದ್ದಾರೆ. 130 ಮಂದಿಯಲ್ಲಿ ಐಎಲ್‌ಐ ಲಕ್ಷಣಗಳಿದ್ದರೆ, 124 ಜನರ ಸಂಪರ್ಕದ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. 44 ಜನರಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗಲಿದ್ದು, 9 ಜನರಲ್ಲಿ ತೀವ್ರ ಉಸಿರಾಟದ ಸಮಸ್ಯೆ (ಎಸ್‌ಎಆರ್‌ಐ) ಕಾಣಿಸಿಕೊಂಡಿದೆ.

ADVERTISEMENT

242 ಮಂದಿ ಗುಣಮುಖ: ಜಿಲ್ಲೆಯಲ್ಲಿ ಶುಕ್ರವಾರ 242 ಮಂದಿ ಗುಣಮುಖರಾಗಿದ್ದು, ಮನೆಗೆ ತೆರಳಿದ್ದಾರೆ. ಈ ಪೈಕಿ 175 ಮಂದಿ ಹೋಂ ಐಸೋಲೇಷನ್‌, 7 ಮಂದಿ ಕೋವಿಡ್ ಕೇರ್‌ ಸೆಂಟರ್‌ ಹಾಗೂ 60 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರ ಗಂಟಲು ದ್ರವದ ಮಾದರಿ ನೆಗೆಟಿವ್‌ ಬಂದಿದ್ದು, ಮನೆಗೆ ಕಳುಹಿಸಲಾಗಿದೆ. ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಏರಿದ್ದು, ಶುಕ್ರವಾರವೂ ಇದು ಮುಂದುವರಿದಿದೆ.

6 ಸಾವು: ಜಿಲ್ಲೆಯಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 6 ಮಂದಿ ಮೃತಪಟ್ಟಿದ್ದು, ಇವರಿಗೆ ಕೋವಿಡ್–19 ಇರುವುದು ಶುಕ್ರವಾರ ದೃಢವಾಗಿದೆ. ಮಂಗಳೂರು ತಾಲ್ಲೂಕಿನ ನಾಲ್ವರು, ಮೂಡುಬಿದಿರೆ ತಾಲ್ಲೂಕಿನ ಒಬ್ಬರು ಹಾಗೂ ಬೇರೆ ಜಿಲ್ಲೆಯ ಒಬ್ಬರು ಮೃತಪಟ್ಟಿದ್ದಾರೆ.

ಕಾಸರಗೋಡು ಎಸ್ಪಿ ಕ್ವಾರಂಟೈನ್‌

ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಪೊಲೀಸ್ ಸಿಬ್ಬಂದಿಗೆ ಕೋವಿಡ್–19 ದೃಢಪಟ್ಟಿದ್ದು, ಎಸ್ಪಿ ಡಿ. ಶಿಲ್ಪಾ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

ಕೋವಿಡ್–19 ಲಕ್ಷಣ ಕಂಡು ಬಂದಿದ್ದರಿಂದ ಪೊಲೀಸ್ ಸಿಬ್ಬಂದಿಯ ತಪಾಸಣೆ ಮಾಡಲಾಗಿದ್ದು, ಸೋಂಕು ಪತ್ತೆಯಾಗಿದೆ. ತಕ್ಷಣ ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪಾ ಹಾಗೂ ಇತರ ಇಬ್ಬರು ಪೊಲೀಸರು ಕ್ವಾರಂಟೈನ್‌ಗೆ ತೆರಳಿದ್ದಾರೆ. ಉಳಿದ ಇತರ ಪೊಲೀಸರ ತಪಾಸಣೆ ನಡೆಸಲು ತೀರ್ಮಾನಿಸಲಾಗಿದೆ.

ಜಿಲ್ಲೆಯಲ್ಲಿ ಶುಕ್ರವಾರ 49 ಜನರಿಗೆ ಕೋವಿಡ್– 19 ದೃಢಪಟ್ಟಿದೆ. 35 ಜನರಿಗೆ ಸಂಪರ್ಕದ ಸೋಂಕು ತಗಲಿದೆ. ಐದು ಜನ ಬೇರೆ ರಾಜ್ಯಗಳಿಂದ ಬಂದಿದ್ದು, ಒಂಬತ್ತು ಜನರು ವಿದೇಶದಿಂದ ಬಂದವರಾಗಿದ್ದಾರೆ. ಆಸ್ಪತ್ರೆಗಳು ಮತ್ತು ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 51 ಜನರು ಗುಣಮುಖರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.