ADVERTISEMENT

ಕೋವಿಡ್: ಮುಂದುವರಿದ ಸಾವಿನ ಸರಣಿ

ದ.ಕ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2230ಕ್ಕೆ ಏರಿಕೆ: ಐವರ ಸಾವು

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 6:01 IST
Last Updated 13 ಜುಲೈ 2020, 6:01 IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್–19 ನಿಂದ ಮೃತಪಟ್ಟವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಭಾನುವಾರ ಮತ್ತೆ ಐವರು ಮೃತಪಟ್ಟಿದ್ದು, ಮೃತರ ಸಂಖ್ಯೆ 46ಕ್ಕೆ ಏರಿಕೆಯಾಗಿದೆ. ಒಂದೇ ದಿನ ಗರಿಷ್ಠ 196 ಮಂದಿಗೆ ಕೋವಿಡ್–19 ಸೋಂಕು ದೃಢವಾಗಿದ್ದು, ಸೋಂಕಿತರ ಸಂಖ್ಯೆ 2,230ಕ್ಕೆ ಏರಿದೆ.

ಮಧುಮೇಹ, ಹೃದ್ರೋಗದಿಂದ ಬಳಲುತ್ತಿದ್ದ ನಗರದ ಉರ್ವಸ್ಟೋರ್‌ನ 72 ವರ್ಷದ ವೃದ್ಧ, ಮಧುಮೇಹ, ಹೃದ್ರೋಗದಿಂದ ಬಳ್ಳಾಲ್‌ಬಾಗ್ ನಿವಾಸಿ 58 ವರ್ಷದ ಮಹಿಳೆ, ಮಧುಮೇಹ, ಹೃದ್ರೋಗದಿಂದ ಬಳಲುತ್ತಿದ್ದ ಬಂದರು ನಿವಾಸಿ 68 ವರ್ಷದ ವೃದ್ಧೆ, ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದದ ಬೆಳ್ತಂಗಡಿಯ ಪಿಲಿಚಾಮುಂಡಿಕಲ್ಲು ನಿವಾಸಿ 55 ವರ್ಷದ ವ್ಯಕ್ತಿ, ಮಧುಮೇಹದಿಂದ ಬಳಲುತ್ತಿದ್ದ ಪುತ್ತೂರಿನ ಮೂಲಡ್ಕದ 50 ವರ್ಷದ ವ್ಯಕ್ತಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ.

ಮೃತಪಟ್ಟ ಐವರ ಪೈಕಿ ನಾಲ್ವರು ನಗರದ ಜಿಲ್ಲಾ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಪುತ್ತೂರು ತಾಲ್ಲೂಕಿನ ಸೋಂಕಿತ ವ್ಯಕ್ತಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.

ADVERTISEMENT

196 ಹೊಸ ಪ್ರಕರಣ: ಜಿಲ್ಲೆಯಲ್ಲಿ ಭಾನುವಾರ ಮತ್ತೆ 196 ಮಂದಿಯಲ್ಲಿ ಸೋಂಕು ತಗಲಿದ್ದು, ಈ ಪೈಕಿ ಪ್ರಾಥಮಿಕ ಸಂಪರ್ಕದಿಂದ 20 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

91 ಐಎಲ್‌ಐ ಪ್ರಕರಣ ಹಾಗೂ 16 ಎಸ್‌ಎಆರ್‌ಐ ಪ್ರಕರಣ ವರದಿಯಾಗಿವೆ. ವಿದೇಶದಿಂದ ಬಂದ 10 ಮಂದಿ ಸೋಂಕು ದೃಢವಾಗಿದೆ. 57 ಪ್ರಕರಣಗಳ ಸಂಪರ್ಕವನ್ನು ಪತ್ತೆ ಮಾಡಲಾಗುತ್ತಿದೆ. ಹೆರಿಗೆ ಪೂರ್ವ ಪರೀಕ್ಷೆಯಲ್ಲಿ ಇಬ್ಬರು ಮಹಿಳೆಯರಿಗೆ ಕೋವಿಡ್‌–19 ಇರುವುದು ಪತ್ತೆಯಾಗಿದೆ.

ಭಾನುವಾರ 94 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಆ ಮೂಲಕ 876 ಮಂದಿ ಗುಣಮುಖರಾದಂತಾಗಿದೆ. ಸದ್ಯ ಜಿಲ್ಲೆಯಲ್ಲಿ 1,308 ಸಕ್ರಿಯ ಪ್ರಕರಣಗಳಿವೆ.

ಪಾಲಿಕೆ ಆಯುಕ್ತರಿಗೂ ಸೋಂಕು: ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಭಾನುವಾರ ಕೋವಿಡ್-19 ಸೋಂಕು ದೃಢಪಟ್ಟಿದೆ.

ಅವರಿಗೆ ಎರಡು ದಿನಗಳ ಹಿಂದೆ ಜ್ವರದ ಲಕ್ಷಣಗಳು ಕಂಡುಬಂದಿದ್ದವು. ಇದರಿಂದಾಗಿ ಅವರು ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ಭಾನುವಾರ ಗಂಟಲು ದ್ರವ ಪರೀಕ್ಷಾ ವರದಿ ಬಂದಿದ್ದು, ಕೋವಿಡ್ ತಗಲಿರುವುದು ದೃಢವಾಗಿದೆ. ಪಾಲಿಕೆ ಆಯುಕ್ತರಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ಮೂಲಗಳು ತಿಳಿಸಿವೆ.

ಪತ್ರಕರ್ತರಿಗೂ ಕೋವಿಡ್‌ ಕಾಟ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿರುವ ನಡುವೆಯೇ ನಗರದಲ್ಲಿ ಇಬ್ಬರು ಪತ್ರಕರ್ತರಲ್ಲಿ ಕೋವಿಡ್–19 ದೃಢಪಟ್ಟಿದೆ.

ಖಾಸಗಿ ವಾಹಿನಿ ಪ್ರತಿನಿಧಿಗಳಾಗಿ ನಗರದ ಕಾರ್ಯನಿರ್ವಹಿಸುತ್ತಿದ್ದ ಇವರಿಬ್ಬರೂ, ಈ ಹಿಂದೆ ಎಲ್ಲ ಪತ್ರಕರ್ತರ ಜತೆಗೆ ಪರೀಕ್ಷೆ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಎಲ್ಲರ ವರದಿ ನೆಗೆಟಿವ್‌ ಬಂದಿತ್ತು. ಇತ್ತೀಚೆಗೆ ಇಬ್ಬರಿಗೂ ಕೋವಿಡ್‌–19 ಲಕ್ಷಣಗಳು ಕಂಡು ಬಂದಿದ್ದರಿಂದ ಮತ್ತೊಮ್ಮೆ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆ ನಡೆಸಲಾಗಿದ್ದು, ಸೋಂಕು ಇರುವುದು ದೃಢಪಟ್ಟಿದೆ. ಸದ್ಯಕ್ಕೆ ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಮುಂದಿನ ದಿನಗಳಲ್ಲಿ ಮತ್ತಷ್ಟು ಕಠಿಣ ಪರಿಸ್ಥಿತಿ ಎದುರಾಗುವ ಸಾಧ್ಯತೆಯಿದ್ದು, ನಾವೆಲ್ಲರೂ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ ಕರ್ತವ್ಯ ನಿರ್ವಹಿಸಬೇಕು. ಕೋವಿಡ್ ಬಗ್ಗೆ ಯಾರೂ ಆತಂಕ ಪಡುವುದು ಬೇಡ, ಆದರೆ ಮುಂಜಾಗ್ರತೆ, ಸುರಕ್ಷತೆ ಅಗತ್ಯ’ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ತಿಳಿಸಿದ್ದಾರೆ.

ಕಾಸರಗೋಡು: 56 ಮಂದಿಗೆ ಸೋಂಕು

ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ 56 ಮಂದಿಗೆ ಕೋವಿಡ್–19 ದೃಢಪಟ್ಟಿದೆ. ಈ ಪೈಕಿ 41ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ.

ಮಧೂರು ಮತ್ತು ಮುಳಿಯಾರಿನ ತಲಾ 10, ಚೆಂಗಳದ 11, ಕುಂಬಳೆ ಮತ್ತು ಪುಲ್ಲೂರು ಪೆರಿಯದ ತಲಾ 5, ಮೊಗ್ರಾಲ್ ಪುತ್ತೂರು, ಕಾಸರಗೋಡು, ಚೆಮ್ನಾಡಿನ ತಲಾ ಇಬ್ಬರು, ಮಂಗಲ್ಪಾಡಿ, ಪನತ್ತಡಿ, ಮೀಂಜ, ಪಳ್ಳಿಕೆರೆಯಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

ಪಳ್ಳಿಕೆರೆಯಲ್ಲಿ ಆರೋಗ್ಯ ಕಾರ್ಯಕರ್ತೆಯೊಬ್ಬರಿಗೆ ಸೋಂಕು ದೃಢವಾಗಿದೆ. ಕಾಸರಗೋಡಿನಲ್ಲಿ ಚಪ್ಪಲಿ ಅಂಗಡಿ ಹಾಗೂ ಬುಕ್ ಸ್ಟಾಲ್‌ನ ಸಿಬ್ಬಂದಿಗೆ ಸೋಂಕು ದೃಢವಾಗಿದ್ದು, ಒಂದು ವಾರದಿಂದ ಸಂಪರ್ಕದಿಂದ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ.

ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 600 ದಾಟಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 641ಕ್ಕೆ ಏರಿದ್ದು, 434 ಮಂದಿ ಗುಣಮುಖರಾಗಿದ್ದಾರೆ. 207 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾನುವಾರ ಏಳು ಮಂದಿ ಗುಣಮುಖರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.