ADVERTISEMENT

83 ಮಂದಿಗೆ ಕೋವಿಡ್‌ ಸೋಂಕು ದೃಢ

ಒಂದೇ ದಿನ 99 ಮಂದಿ ಆಸ್ಪತ್ರೆಯಿಂದ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2020, 9:08 IST
Last Updated 8 ಜುಲೈ 2020, 9:08 IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಗ್ರಹಿಸಿದ್ದ 1,111 ಜನರ ಗಂಟಲಿನ ದ್ರವದ ಮಾದರಿಗಳ ವರದಿಗಳು ಮಂಗಳವಾರ ಲಭಿಸಿದ್ದು, 83 ಜನರಿಗೆ ಕೋವಿಡ್‌–19 ಸೋಂಕು ತಗುಲಿರುವುದು ದೃಢಪಟ್ಟಿದೆ. 1,028 ಜನರ ವರದಿಗಳು ‘ನೆಗೆಟಿವ್‌’ ಆಗಿವೆ.

ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳ ಹತ್ತು ಜನರು ಸೇರಿದಂತೆ ಜಿಲ್ಲೆಯಲ್ಲಿ ಪತ್ತೆಯಾಗಿರುವ ಕೋವಿಡ್‌ ಸೋಂಕಿತರ ಸಂಖ್ಯೆ 1,359ಕ್ಕೇರಿದೆ. ಇನ್ನೂ 486 ಜನರ ಗಂಟಲಿನ ದ್ರವದ ಮಾದರಿಗಳ ಪರೀಕ್ಷಾ ವರದಿಗಳು ಬರಬೇಕಿದೆ.

‘ಕೋವಿಡ್‌ ಸೋಂಕಿತರ ಪ್ರಾಥಮಿಕ ಸಂಪರ್ಕಿತರಾಗಿದ್ದ 48 ಜನರು, ದ್ವಿತೀಯ ಸಂಪರ್ಕಿತರ ಪಟ್ಟಿಯಲ್ಲಿದ್ದ ಇಬ್ಬರು, ವಿಷಮ ಶೀತ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದ 20 ಮಂದಿ, ಉಸಿರಾಟದ ತೀವ್ರ ತೊಂದರೆ ಎದುರಿಸುತ್ತಿದ್ದ ಒಬ್ಬರು ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಪ್ರಯಾಣ ಮಾಡಿದ್ದ ಇಬ್ಬರಲ್ಲಿ ಕೋವಿಡ್‌ ಸೋಂಕು ದೃಢಪಟ್ಟಿದೆ’ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ತಿಳಿಸಿದ್ದಾರೆ.

ADVERTISEMENT

ರ‍್ಯಾಂಡಮ್‌ ಪರೀಕ್ಷೆಯಲ್ಲಿ ಗಂಟಲಿನ ದ್ರವದ ಮಾದರಿ ನೀಡಿದ್ದ ಮೂವರಲ್ಲಿ ಸೋಂಕು ಪತ್ತೆಯಾಗಿದೆ. ಶಸ್ತ್ರಚಿಕಿತ್ಸೆಗೂ ಮುನ್ನ ಮಾದರಿ ಸಂಗ್ರಹಿಸಿದ್ದ ಮೂವರಲ್ಲಿ ಹಾಗೂ ಹೆರಿಗೆಗೂ ಮುನ್ನ ಮಾದರಿ ಸಂಗ್ರಹಿಸಿದ್ದ ಒಂದು ಪ್ರಕರಣದಲ್ಲಿ ಸೋಂಕು ದೃಢಪಟ್ಟಿದೆ. ಮೂವರ ಸೋಂಕಿನ ಸಂಪರ್ಕದ ಮೂಲ ಪತ್ತೆಯಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.

11 ತಿಂಗಳ ಮಗು: ಮಂಗಳವಾರ ಸೋಂಕು ದೃಢಪಟ್ಟವರಲ್ಲಿ 11 ತಿಂಗಳ ಮಗು ಕೂಡ ಸೇರಿದೆ. 88 ವರ್ಷದ ವೃದ್ಧೆಗೂ ಸೋಂಕು ತಗುಲಿರುವುದು ಖಚಿತವಾಗಿದೆ. ಸೋಂಕು ದೃಢಪಟ್ಟಿರುವ 83 ಜನರಲ್ಲಿ 50 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಾದ 21 ಜನರಿದ್ದಾರೆ.

ಉಳ್ಳಾಲ ನಗರಸಭೆ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಮತ್ತಷ್ಟು ಹೊಸ ಪ್ರಕರಣಗಳು ಪತ್ತೆಯಾಗಿವೆ. ಮಂಗಳೂರು ನಗರದಲ್ಲೂ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ. ವಿಟ್ಲ, ಪುತ್ತೂರು ಭಾಗದಲ್ಲೂ ಹೊಸ ಪ್ರಕರಣಗಳು ಪತ್ತೆಯಾಗಿವೆ. ಎಲ್ಲ ಕಡೆಗಳಲ್ಲಿ ಸೋಂಕಿತರ ಮನೆಗಳನ್ನು ಸೀಲ್‌ಡೌನ್‌ ಮಾಡಿದ್ದು, ಸಂಪರ್ಕಿತರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.

99 ಜನರು ಗುಣಮುಖ: ವೆನ್ಲಾಕ್‌ ಕೋವಿಡ್‌ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 99 ಜನರು ಗುಣಮುಖರಾಗಿದ್ದಾರೆ. ಅವರನ್ನು ಮಂಗಳವಾರ ಆಸ್ಪತ್ರೆಗಳಿಂದ ಬಿಡುಗಡೆ ಮಾಡಿದ್ದು, ಮನೆಗಳಿಗೆ ಕಳುಹಿಸಲಾಗಿದೆ.

ಜಿಲ್ಲೆಯಲ್ಲಿ ಕೋವಿಡ್‌–19 ಸೋಂಕಿತರಾಗಿದ್ದ ಒಟ್ಟು 683 ಜನರು ಈವರೆಗೆ ಗುಣಮುಖರಾಗಿ, ಆಸ್ಪತ್ರೆಗಳಿಂದ ಮನೆಗಳಿಗೆ ಮರಳಿದ್ದಾರೆ. ಇನ್ನೂ 650 ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.