ADVERTISEMENT

ಜನರ ರಕ್ತದಲ್ಲಿ ಕಾಂಗ್ರೆಸ್-ಬಿಜೆಪಿ ರಾಜಕಾರಣ: ಡಾ.ಸಿದ್ದನಗೌಡ ಪಾಟೀಲ ಆರೋಪ

ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಡಾ.ಸಿದ್ದನಗೌಡ ಪಾಟೀಲ ಆರೋಪ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 4:41 IST
Last Updated 23 ಜುಲೈ 2025, 4:41 IST
ವಿಟ್ಲದಲ್ಲಿ ಮಂಗಳವಾರ ಸಿಪಿಐ ಜಿಲ್ಲಾ ಸಮ್ಮೇಳನದ ಅಂಗವಾಗಿ ‍ಪಕ್ಷದ ಕಾರ್ಯಕರ್ತರು ರ‍್ಯಾಲಿ ನಡೆಸಿದರು
ವಿಟ್ಲದಲ್ಲಿ ಮಂಗಳವಾರ ಸಿಪಿಐ ಜಿಲ್ಲಾ ಸಮ್ಮೇಳನದ ಅಂಗವಾಗಿ ‍ಪಕ್ಷದ ಕಾರ್ಯಕರ್ತರು ರ‍್ಯಾಲಿ ನಡೆಸಿದರು   

ವಿಟ್ಲ: ‘ಒಂದು ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಇಡೀ ರಾಜ್ಯಕ್ಕೆ ಮಾದರಿ ಆಗಿತ್ತು.‌ ಆದರೆ ಇಂದು ಕೋಮುಸಂಘರ್ಷ, ಕೊಲೆ ವಿಚಾರದಿಂದ ಕುಖ್ಯಾತಿ ಗಳಿಸುತ್ತಿದೆ. ಕಾಂಗ್ರೆಸ್, ಬಿಜೆಪಿ ಜನರ ರಕ್ತದಲ್ಲಿ ರಾಜಕಾರಣ ಮಾಡುತ್ತಿದ್ದು, ಯುವ ಜನಾಂಗದ ದಿಕ್ಕನ್ನು ತಪ್ಪಿಸುವ ಮೂಲಕ ಅವರ ಜೀವನವನ್ನು ಹಾಳು ಮಾಡುತ್ತಿವೆ’ ಎಂದು ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಸಿದ್ದನಗೌಡ ಪಾಟೀಲ ಹೇಳಿದರು.

ವಿಟ್ಲದಲ್ಲಿ ಮಂಗಳವಾರ ನಡೆದ ಭಾರತ್ ಕಮ್ಯುನಿಸ್ಟ್ ಪಕ್ಷ (ಸಿಪಿಐ) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ 25ನೇ ಸಮ್ಮೇಳನ ಮತ್ತು ರ‍್ಯಾಲಿ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಕೋಮು ಸಂಘರ್ಷ ನಡೆಸಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ರೈತರಿಗೆ ಭೂಮಿ ಕೊಡುವ ಬದಲು ಶ್ರಿಮಂತರಿಗೆ ನೀಡುತ್ತಾ ಅವರಿಗೆ ಬೆಂಬಲವಾಗಿ ನಿಂತಿದೆ. ಮೋದಿ ಸರ್ಕಾರ ಕಾರ್ಮಿಕ ಪರ ಇರುವ ಸರ್ಕಾರವೂ ಅಲ್ಲ. ಹೂ ಮಾರುವವರುಗೂ ತೆರಿಗೆ ಹಾಕುತ್ತಿದೆ. ಇದೇ ಹಣದಿಂದ ಉದ್ಯಮಿಗಳ ಸಾಲ ಮನ್ನಾ ಮಾಡುತ್ತಿದೆ. ಈ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ಧ್ವನಿ ಎತ್ತುತ್ತಿಲ್ಲ’ ಎಂದು ದೂರಿದರು.

ADVERTISEMENT

ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದ ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, ಸಿಪಿಐ ಭ್ರಷ್ಟಾಚಾರ ಮುಕ್ತವಾಗಿ ಈ ದೇಶದಲ್ಲಿ ಆಡಳಿತ ನಡೆಸಿದೆ. ದಕ್ಷಿಣ ಕನ್ನಡ ಜಿಲ್ಲೆ ದೇಶದಲ್ಲಿಯೇ ಸುದ್ದಿಯಾಗುತ್ತಿದ್ದು, ಈ ನೆಲದಲ್ಲಿ ಧರ್ಮದ ಅಮಲಿನಲ್ಲಿ ಧರ್ಮದ ಹೆಸರಿನಲ್ಲಿ ಕೊಲೆ ನಡೆಯುತ್ತಿದೆ. ಇದಕ್ಕೆ ಕೋಮುಶಕ್ತಿ ಸಂಘಟನೆಗಳು ನೇರ ಹೊಣೆ.  ದ್ವೇಷ ರಾಜಕಾರಣ ಬದಲಿಸಿ, ಪ್ರೀತಿ ಬಿತ್ತುವ ಕೆಲಸ ಸಿಪಿಐನಿಂದ ಆಗಬೇಕಿದೆ’ ಎಂದರು.‌

ಡಿವೈಎಫ್‌ಐ ಮುಖಂಡ ಮುನೀರ್ ಕಾಟಿಪಳ್ಳ ಮಾತನಾಡಿ, ರೈತರು, ಬಡ ಜನರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ.  ಜಿಲ್ಲೆಯ ಹೆಸರು ಬದಲಾವಣೆ ಚರ್ಚೆ ಬಂದಾಗ ಬಲವಾಗಿ ಎದುರಿಸಿದ್ದು ನಾವು. ಅಮಾಯಕರ ಹತ್ಯೆ ನಡುವೆ ಹೆಸರಿನ ಚರ್ಚೆ ಅಗತ್ಯವಿಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದೇವೆ. ಜನರ ಧ್ವನಿ ಎತ್ತಲು ಅಡ್ಡಿಯಾಗುತ್ತಿದ್ದು, ಇದೀಗ ಸೋಶಿಯಲ್ ಮೀಡಿಯ ಮೂಲಕ ಬಡವರು ಧ್ವನಿ ಎತ್ತುವಂತಾಗಿದೆ ಎಂದರು.

ಜಿಲ್ಲಾ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಬಿ.ಎಂ ಹಸೈನಾರ್ ಮಾತನಾಡಿ, ಬೀಡಿ ಕಾರ್ಮಿಕ ಮಕ್ಕಳ ಸ್ಕಾಲರ್‌ಶಿಪ್ ನೀಡುವಂತೆ ಸಿಪಿಐ ನಿರಂತರವಾಗಿ ಹೋರಾಟ ನಡೆಸಿದೆ. ಕಟ್ಟಡ ಕಾರ್ಮಿಕ ಸಮಸ್ಯೆಗೆ ಸ್ಪಂದಿಸಿದೆ. ಕೋಮು ಗಲಭೆಯಲ್ಲಿ ಅಮಾಯಕರ ಮಕ್ಕಳು ಕೊಲೆಯಾಗುತ್ತಿದ್ದಾರೆ. ಶ್ರೀಮಂತರ ಮಕ್ಕಳು ಜೈಲಿಗೆ ಹೋಗುವುದಿಲ್ಲ. ಬಡವರ ಮಕ್ಕಳು ಜೈಲಿಗೆ ಹೋಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ವಿಟ್ಲದ ನಾಡ ಕಚೇರಿಯಿಂದ ವಿಟ್ಲ ಬ್ರೈಟ್ ಸಭಾಂಗಣದವರೆಗೆ ನೂರಾರು ಕಾರ್ಯಕರ್ತರು ರ‍್ಯಾಲಿ ನಡೆಸಿದರು. ಬಳಿಕ ಬಹಿರಂಗ ಸಭೆ ನಡೆಯಿತು.

ವೇದಿಕೆಯಲ್ಲಿ ಎಐಟಿಯುಸಿ ಜಿಲ್ಲಾಧ್ಯಕ್ಷ ಎಚ್.ವಿ.ರಾವ್, ಸಿಪಿಐ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಶಶಿಕಲ ಗಿರೀಶ್, ಎಐಟಿಯುಸಿ ರಾಜ್ಯ ಸಮಿತಿ ಉಪಾಧ್ಯಕ್ಷ ವಿ.ಎಸ್ ಬೇರಿಂಜ, ಸಿಪಿಐ ಉಡುಪಿ ತಾಲ್ಲೂಕು ಕಾರ್ಯದರ್ಶಿ ಶಿವಾನಂದ, ಎ ಪ್ರಭಾಕರ ರಾವ್,  ವಿಟ್ಲ ಪಡ್ನೂರು ಗ್ರಾ.ಪಂ ಸದಸ್ಯೆ ಸೆಲೀಕಾ ಹಸೈನಾರ್, ಶಮೀತಾ ಮೊದಲಾದವರು ಉಪಸ್ಥಿತರಿದ್ದರು. ಸುರೇಶ್ ಕುಮಾರ್ ಬಂಟ್ವಾಳ್ ನಿರೂಪಿಸಿದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ ಶೇಖರ್ ಸ್ವಾಗತಿಸಿದರು. ಸೀರಾಮ ಕಡಂಬ ವಂದಿಸಿದರು.

ವಿಟ್ಲದಲ್ಲಿ ಮಂಗಳವಾರ ಸಿಪಿಐ ಜಿಲ್ಲಾ ಸಮ್ಮೇಳನದ ಹಾಗೂ ಬಹಿರಂಗ ಸಭೆಯಲ್ಲಿ ಸಭೆಯಲ್ಲಿ ಸಿದ್ದನಗೌಡ ಪಾಟೀಲ ಮಾತನಾಡಿದರು
ಕೋಮು ಗಲಭೆಯ ಕಾರಣಕ್ಕೆ ಜಿಲ್ಲೆಯಲ್ಲಿ ಕಲ್ಲು ಮರಳು ನಿಲ್ಲಿಸಲಾಗಿದೆ. ದ್ವೇಷ ಭಾಷಣ ಮಾಡುವವರನ್ನು ವೇದಿಕೆಯಿಂದಲೇ ಎಳೆದು ತಂದು ಬಂಧಿಸಬೇಕು.
ಬಿ.ಎಂ ಹಸೈನಾರ್ ಸಿಪಿಐ ಜಿಲ್ಲಾ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ

‘ದುರಾಡಳಿತ ಬಯಲಾಗದಂತೆ ಕೋಮುಗಲಭೆ ಸೃಷ್ಟಿ’

‘ಪ್ರಧಾನಿ ನರೇಂದ್ರ ಮೋದಿ ದುರಾಡಳಿತ ಹೊರಗೆ ಗೊತ್ತಾಗದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸಂಘರ್ಷವನ್ನು ಸೃಷ್ಟಿ ಮಾಡಲಾಗುತ್ತಿದೆ. ಕಾರ್ಮಿಕರ ಮಕ್ಕಳಿಗೆ ಗೋಡ್ಸೆ ಸಾವರ್ಕರ್ ಆದರ್ಶ ಅಗತ್ಯವಿಲ್ಲ. ಮೋದಿಯನ್ನು ಟೀಕೆ ಮಾಡಿದರೆ ದೇಶದ್ರೋಹ ಹಣೆಪಟ್ಟಿ ಕಟ್ಟಿ ಜೈಲಿಗೆ ಹಾಕುತ್ತಿದ್ದಾರೆ’. ಎಂದು ಸಿದ್ದನಗೌಡ ಪಾಟೀಲ ಹೇಳಿದರು.  ‘ಧರ್ಮಸ್ಥಳದ ಬಗ್ಗೆ ಮಾತನಾಡಿದರೆ ಕ್ಷೇತ್ರದ ಪಾವಿತ್ರ್ಯಕ್ಕೆ ಆಗುತ್ತದೆ ಎಂಬ ಅಪಪ್ರಚಾರ ನಡೆಸಿದಂತೆ ನರೇಂದ್ರ ಮೋದಿಯನ್ನು ಟೀಕಿಸಿದರೆ ದೇಶದ್ರೋಹ ಆದಂತೆ ಎಂದು ಬಿಂಬಿಸಲಾಗುತ್ತದೆ’ ಎಂದು ಹೇಳಿದರು.

‘ನಮ್ಮ ಹೋರಾಟ ಧರ್ಮಸ್ಥಳದ ಅನಾಚಾರ ವಿರುದ್ಧ

’ ನಮ್ಮ ಹೋರಾಟ ಧರ್ಮಸ್ಥಳದ ಕ್ಷೇತ್ರ ವಿರುದ್ಧದ ಹೋರಾಟ ಅಲ್ಲ. ಧರ್ಮಸ್ಥಳ ಎಂಬ ಊರಿನಲ್ಲಿ ಆಗುತ್ತಿರುವ ಘಟನೆ ವಿರುದ್ಧ ಹೋರಾಟವಾಗಿದ್ದು ಕ್ಷೇತ್ರದ ಪಾವಿತ್ರ್ಯತೆಯನ್ನು ಉಳಿಸುವ ಹೋರಾಟ ಎಂದು ಸಂಘಟಕರು ತಿಳಿಸಿದರು. ವಿಟ್ಲ ನಗರವನ್ನು ಅಭಿವೃದ್ಧಿಪಡಿಸಿ ಮೂಲ ಸೌಕರ್ಯ ಒದಗಿಸಬೇಕು. ವಿಟ್ಲ ವಿಧಾನಸಭಾ ಕ್ಷೇತ್ರ ವಿಟ್ಲ ತಾಲ್ಲೂಕು ಕೇಂದ್ರ ಮಾಡಬೇಕು. ಬೀಡಿ ಕಾರ್ಮಿಕ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು. ‌ಕಟ್ಟಡ ಕಾರ್ಮಿಕರಿಗೆ ಸರಿಯಾದ ಸೌಲಭ್ಯ ಸಿಗುತ್ತಿಲ್ಲ. ಸ್ಕಾಲರ್‌ಶಿಪ್ ಇದುವರೆಗೆ ಕಟ್ಟಡ ಕಾರ್ಮಿಕ ಮಕ್ಕಳಿಗೆ ಸಿಗುತ್ತಿಲ್ಲ. ರೇಷನ್ ಕಾರ್ಡ್ ಸಮಸ್ಯೆ ಜನಸಾಮಾನ್ಯ ತೊಂದರೆ ಅನುಭವಿಸುತ್ತಿದ್ದು ಇದರ ವಿರುದ್ಧ ಹೋರಾಟಕ್ಕೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.