ADVERTISEMENT

ಹಿಂದುತ್ವ–ಸಂಘ ಪರಿವಾರದ ಹುಸಿ ಕಾರ್ಯಸೂಚಿ: CPM ಪ್ರತಿಭಟನೆಯಲ್ಲಿ ಪ್ರಕಾಶ್‌ ಆರೋಪ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 5:09 IST
Last Updated 24 ಜೂನ್ 2025, 5:09 IST
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕೋಮುದ್ವೇಷದ ಹತ್ಯೆಗಳ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಮಂಗಳೂರಿನಲ್ಲಿ ಸೋಮವಾರ ಸಿಪಿಎಂ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕೋಮುದ್ವೇಷದ ಹತ್ಯೆಗಳ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಮಂಗಳೂರಿನಲ್ಲಿ ಸೋಮವಾರ ಸಿಪಿಎಂ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು   

ಮಂಗಳೂರು: ‘ಹಿಂದೂ ಧರ್ಮಕ್ಕೂ ಹಿಂದುತ್ವಕ್ಕೂ ಸಂಬಂಧವಿಲ್ಲ. ಹಿಂದುತ್ವ ಎಂಬುದು ಸಂಘಪರಿವಾರದ ಹುಸಿ ಕಾರ್ಯಸೂಚಿ.  ರಾಜಕೀಯ ಉದ್ದೇಶ ಸಾಧನೆಗಾಗಿ ಮುಸ್ಲಿಮರ ಕುರಿತು ಹಿಂದೂಗಳಲ್ಲಿ ಭಯ ಮೂಡಿಸುವ ಕಾರ್ಯವನ್ನು ಸಂಘ ಪರಿವಾರ ಮಾಡುತ್ತಿದೆ‘ ಎಂದು ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿ ಕೆ.ಪ್ರಕಾಶ್ ಆರೋಪಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕೋಮುದ್ವೇಷದ ಕೊಲೆ, ಪ್ರತಿಕಾರದ ಹತ್ಯೆಗಳ ಸಮಗ್ರ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಬೇಕು ಹಾಗೂ ಮೂರು ದಶಕಗಳಲ್ಲಿ ನಡೆದ  ಇಮತಹ ಹತ್ಯೆಗಳನ್ನು ಹಾಲಿ ನ್ಯಾಯಾಧೀಶರಿಂದ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಸಿಪಿಎಂ ದ‌.ಕ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ದ್ವೇಷದ ಕೊಲೆಗಳ ಸರಣಿಗೆ ಪೊಲೀಸ್ ಅಧಿಕಾರಿಗಳ ಬೇಜವಾಬ್ದಾರಿತನ, ಕೋಮುವಾದಿ ಶಕ್ತಿಗಳ ಜೊತೆಗಿನ ಅವರ ನಂಟು ಕೂಡಾ ಕಾರಣ. ಈ ಕುರಿತು ಸಿಪಿಎಂ ಪದೇ ಪದೇ ಎಚ್ಚರಿಕೆ ನೀಡಿತ್ತು. ಆದರೆ ಅದನ್ನು  ಕಾಂಗ್ರೆಸ್ ಸರ್ಕಾರ ನಿರ್ಲಕ್ಷಿಸಿತು.  ಹಲವು ಆರೋಪಗಳನ್ನು ಎದುರಿಸಿದ್ದ ಹಿಂದಿನ ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್  ಅವರನ್ನು ಸರ್ಕಾರ ರಕ್ಷಿಸಿದ ಪರಿಣಾಮ ಜಿಲ್ಲೆಯ ಅಮಾಯಕರು ಕೊಲೆಯಾಗಬೇಕಾದ ಸ್ಥಿತಿ ನಿರ್ಮಾಣವಾಯಿತು’ ಎಂದರು. ‌

ADVERTISEMENT

‘ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಈಗಿನ ಪೊಲೀಸ್ ಅಧಿಕಾರಿಗಳು ಹಾಗೂ ಕೋಮು ಹಿಂಸೆ ನಿಗ್ರಹ ಕಾರ್ಯಪಡೆಗೆ  ಶಕ್ತಿ ತುಂಬಬೇಕು’ ಎಂದರು.

ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ‘ಹತ್ತು ವರ್ಷಗಳಲ್ಲಿ ಹತ್ತಕ್ಕೂ ಹೆಚ್ಚು, ಮೂರು ದಶಕದಲ್ಲಿ ಇಂತಹ ಕನಿಷ್ಠ 30ಕ್ಕೂ ಹೆಚ್ಚು ಕೊಲೆಗಳಿಗೆ ಜಿಲ್ಲೆ ಸಾಕ್ಷಿಯಾಗಿದೆ. ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳು  ಜಾಮೀನು ಪಡೆದು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ.  ಅವರಿಗೆ ರಾಜಕೀಯ ಆಶ್ರಯ ನೀಡಿದವರು ಯಾರು. ಈ ಕೊಲೆಗಳ  ಸಂಚು ರೂಪಿಸಿದವರು ಯಾರು, ರಾಜಕೀಯ ಫಲಾನುಭವಿಗಳು ಯಾರು ಎಂಬುದು ಬಯಲಾಗಬೇಕು’ ಎಂದರು.

ಪಕ್ಷದ ಪ್ರಮುಖರಾದ ಕೆ.ಯಾದವ ಶೆಟ್ಟಿ, ದೇವಿ ಮಂಡ್ಯ, ಸುನಿಲ್ ಕುಮಾರ್ ಬಜಾಲ್. ಕೃಷ್ಣಪ್ಪ ಕೊಂಚಾಡಿ, ಸುಕುಮಾರ್ ತೊಕ್ಕೊಟ್ಟು, ಬಿ.ಎಂ.ಭಟ್, ಸದಾಶಿವ ದಾಸ್, ಜಯಂತಿ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಪ್ರಮೋಳಾ ಶಕ್ತಿನಗರ, ರಮಣಿ ಮೂಡುಬಿದಿರೆ, ಸಂತೋಷ್ ಬಜಾಲ್, ಬಿ.ಕೆ ಇಮ್ತಿಯಾಜ್, ವಸಂತಿ ಕುಪ್ಪೆಪದವು, ಮನೋಜ್ ವಾಮಂಜೂರು, ರಫೀಕ್ ಹರೇಕಳ  ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.