ADVERTISEMENT

ಸ್ಕೂಟಿ ಕದ್ದು ಸಿಕ್ಕಿಬಿದ್ದ ಕೊಲೆ ಆರೋಪಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 5:08 IST
Last Updated 18 ಆಗಸ್ಟ್ 2022, 5:08 IST

ನೆಲ್ಯಾಡಿ (ಉಪ್ಪಿನಂಗಡಿ): ಕೊಲೆ ಪ್ರಕರಣವೊಂದರ ಆರೋಪಿಯಾಗಿದ್ದು ಕೇರಳದ ಕೋಯಿಕ್ಕೋಡ್ ಮಾನಸಿಕ ಚಿಕಿತ್ಸಾ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದು ನೆಲ್ಯಾಡಿ ಸಮೀಪ ಎಂಜಿರದಲ್ಲಿ ಮಹಿಳೆಯೊಬ್ಬರ ಸ್ಕೂಟಿ ಕದ್ದು ಪರಾರಿಯಾಗುತ್ತಿದ್ದ ವ್ಯಕ್ತಿ ಗುಂಡ್ಯ ಪೊಲೀಸರ ವಶವಾಗಿದ್ದಾನೆ.

ಕೇರಳದ ಮಲಪ್ಪುರಂ ಜಿಲ್ಲೆಯ ನಿವಾಸಿ ವಿನೀಶ್ (21) ಆರೋಪಿ. ರೆಖ್ಯ ಸಮೀಪದ ಎಂಜಿರ ಮಲ್ನಾಡ್ ಹೋಟೆಲ್ ಸಮೀಪ ಮಹಿಳೆ ಕೀಯನ್ನು ಸ್ಕೂಟಿಯಲ್ಲಿಯೇ ಬಿಟ್ಟು ಹೋಟೆಲಿಗೆ ಹೋಗಿದ್ದರು. ವಿನೀಶ್ ಸ್ಕೂಟಿಯನ್ನು ಕದ್ದು ಗುಂಡ್ಯ ಕಡೆಗೆ ಪರಾರಿಯಾಗಿದ್ದ. ಸ್ಥಳೀಯರು ಗುಂಡ್ಯ ಪೊಲೀಸ್ ಚೆಕ್‌ಪೋಸ್ಟ್‌ಗೆ ಮಾಹಿತಿ ನೀಡಿದ್ದರು. ಆರೋಪಿ ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಹೇಳಿದ್ದಾನೆ. ಧರ್ಮಸ್ಥಳ ಪೊಲೀಸರ ಮಾಹಿತಿ ಮೇರೆಗೆ ಕೇರಳ ಪೊಲೀಸರು ಬಂದು ವಶಕ್ಕೆ ಪಡೆದುಕೊಂಡಿದ್ದಾರೆ.

ಮನೆಯಿಂದ ಗಾಂಜಾ ವಶ

ADVERTISEMENT

ಕಾಸರಗೋಡು: ಮನೆಯಲ್ಲಿ 4 ಕೆಜಿ ಗಾಂಜಾ ಅವಿತಿಟ್ಟಿದ್ದ ಬಂದ್ಯೋಡು ಬಳಿಯ ಅಡ್ಕ ನಿವಾಸಿ ಸುಹರಾಬಿ ಎಂಬಾಕೆಯ ವಿರುದ್ಧ ಅಬಕಾರಿ ದಳ ಕೇಸು ದಾಖಲಿಸಿದೆ. ಮಿಂಚಿನ ದಾಳಿ ನಡೆಸಿದ ವೇಳೆ ಗಾಂಜಾ ಪತ್ತೆಯಾಗಿತ್ತು.

ಮಾದಕ ಪದಾರ್ಥ ಸಹಿತ ಬಂಧನ: ಕಾಸರಗೋಡು: ಕುಂಬಳೆ ಬಳಿಯ ಕಳತ್ತೂರು ಎಂಬಲ್ಲಿ ಬೈಕಿನಲ್ಲಿ ಸಾಗಿಸುತ್ತಿದ್ದ 27 ಗ್ರಾಂ ಮಾದಕ ಪದಾರ್ಥ ಸಹಿತ ಪೆರ್ಣೆ ನಿವಾಸಿ ಎ.ಕೃಷ್ಣ ಪ್ರಸಾದ್ (37) ಮತ್ತು ಪುತ್ತಿಗೆ ಎ.ಕೆ.ಜಿ.ನಗರ ನಿವಾಸಿ ಕೆ.ಎ.ಮುಹಮ್ಮದ್ ಹನೀಫ್ (33) ಎಂಬವರನ್ನು ಅಬಕಾರಿ ದಳ ಬಂಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.