ADVERTISEMENT

ದಕ್ಷಿಣ ಕನ್ನಡ | ಕೊಳತ್ತಮಜಲಿನಲ್ಲಿ ಅಬ್ದುಲ್ ರಹೀಂ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 28 ಮೇ 2025, 9:51 IST
Last Updated 28 ಮೇ 2025, 9:51 IST
<div class="paragraphs"><p>ಕೊಳತ್ತಮಜಲಿನಲ್ಲಿ ಅಬ್ದುಲ್ ರಹೀಂ ಅಂತಿಮ ದರ್ಶನಕ್ಕಾಗಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು.</p></div>

ಕೊಳತ್ತಮಜಲಿನಲ್ಲಿ ಅಬ್ದುಲ್ ರಹೀಂ ಅಂತಿಮ ದರ್ಶನಕ್ಕಾಗಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು.

   

ಮಂಗಳೂರು: ಹತ್ಯೆಗೊಳಗಾದ ಅಬ್ದುಲ್ ರಹೀಂ ಅವರ ಅಂತ್ಯಕ್ರಿಯೆ ಅವರ ಊರಾದ ಕುರಿಯಾಳ ಗ್ರಾಮದ ಇರಾಕೋಡಿಯಲ್ಲಿ ಬುಧವಾರ ನೆರವೇರಿತು. ಭಾರಿ ಸಂಖ್ಯೆಯಲ್ಲಿ ಸೇರಿದ್ದ ಜನರು ಅವರ ಅಂತಿಮ ದರ್ಶನ ಪಡೆದರು.

ಪಾರ್ಥೀವ ಶರೀರವನ್ನು ಅವರ ಮನೆಗೆ ಕೊಂಡೊಯ್ಯಲಾಯಿತು. ರಹೀಂ ಅವರ ತಂದೆ, ತಾಯಿ, ಸಹೋದರಿ, ಪತ್ನಿ ಹಾಗೂ ಬಂಧುಗಳು ಅಂತಿಮ ದರ್ಶನ ಪಡೆದರು. ಅವರ ಪಾರ್ಥೀವ ಶರೀರವನ್ನು ಮನೆಗೆ ತರುತ್ತಿದ್ದಂತೆಯೇ ಬಂಧುಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಬಳಿಕ ಸ್ಥಳೀಯ ಜುಮ್ಮಾ ಮಸೀದಿಯಲ್ಲಿ ಧರ್ಮಗುರುಗಳು ಪ್ರಾರ್ಥನೆ ಸಲ್ಲಿಸಿ ಅಂತಿಮ ವಿಧಿಗಳನ್ನು ನೆರವೇರಿಸಿದರು.

ADVERTISEMENT

ಬಳಿಕ ಸ್ಥಳೀಯ ಜುಮ್ಮಾಮಸೀದಿಯಲ್ಲಿ ಮಯ್ಯತ್ ನಮಾಜ್‌ ನೆರವೇರಿಸಲಾಯಿತು. ಅಂತಿಮ ಪ್ರಾರ್ಥನೆ ಸಲ್ಲಿಕೆ ಬಳಿಕ ಸ್ಥಳೀಯ ಸ್ಮಶಾನದಲ್ಲಿ ಅವರನ್ನು ದಫನ ಮಾಡಲಾಯಿತು.

ಮಸೀದಿ ಅಧ್ಯಕ್ಷ ಅಬ್ದುಲ್ ಅಜೀಜ್, ಮುಖಂಡ ಸಬೂಕ್ ದಾರಿಮಿ, ಕಾಂಗ್ರೆರೆಸ್ ಮುಕಂಡ ಅಶ್ರಫ್ ಕೆ., ಎಸ್‌ಡಿಪಿಐ ಮುಖಂಡ ಅಥಾವುಲ್ಲ ಜೋಕಟ್ಟೆ ಹಾಗೂ ಜಿಲ್ಲೆಯ ಮುಸ್ಲಿಂ ಸಮುದಾಯದ ಮುಖಂಡರು ಭಾಗವಹಿಸಿದರು.

ಕಠಿಣ ಕ್ರಮಕ್ಕೆ ಆಗ್ರಹ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸಂಘರ್ಷ ಮುಂದುವರಿದಿದ್ದು ತಿಂಗಳುಗಳಿಂದ ಈಚೆಗೆ ಕೊಲೆ ಮತ್ತು ಚೂರಿ ಇರಿತದ ಅನೇಕ ಪ್ರಕರಣಗಳು ನಡೆದಿವೆ. ಕೆಲವು ಸಮಾಜಘಾತುಕ ಶಕ್ತಿಗಳು ಪ್ರಚೋದನಕಾರಿ ಹೇಳಿಕೆಗಳು ನಡೆಯುತ್ತಿದ್ದು, ಜಿಲ್ಲೆಯ ಜನರ ಶಾಂತಿ ಕದಡುತ್ತಿವೆ. ಇದನ್ನು ರಾಜ್ಯ ಸರ್ಕಾರ ಕೂಡಲೇ ಗಂಭೀರವಾಗಿ ಪರಿಗಣಿಸಿ ಕಾನೂನು ಚೌಕಟ್ಟಿನಲ್ಲೇ ಕಠಿಣ ಕ್ರಮಕೈಗೊಳ್ಳಬೇಕು. ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಸ್ವತಂತ್ರ, ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಒತ್ತಾಯಿಸಿದ್ದಾರೆ.

‘ಇಂತಹ ಘಟನೆಗಳು ಇಡೀ ಕರಾವಳಿ ಜಿಲ್ಲೆಗಳಿಗೆ ಕಪ್ಪು ಚುಕ್ಕೆಯಾಗಿದೆ. ಇವುಗಳಿಂದ ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆ ಆಗಲಿದೆ. ಇದನ್ನು ನಿಯಂತ್ರಣಕ್ಕೆ ತಾರದಿದ್ದಲ್ಲಿ ಮುಂದೊಂದು ದಿನ ಕೋಮುವಾದಿಗಳ ಈ ಮಾನಸಿಕತೆ ರಾಜ್ಯದ ಉಳಿದ ಜಿಲ್ಲೆಗೆ ಪಸರಿಸಿದರೂ ಅಚ್ಚರಿಯಿಲ್ಲ. ಇಂತಹ ಘಟನೆಗಳ ಹಿಂದೆ ಮತಾಂಧರ ಧರ್ಮದ ಅಮಲು ಒಂದು ಕಾರಣವಾದರೆ, ರಾಜಕೀಯ ಹುನ್ನಾರವೂ ಇದೆ ಎಂಬುವುದು ಅದೆಷ್ಟೋ ಬಾರಿ ಜಗಜ್ಜಾಹೀರಾಗಿದೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.