ADVERTISEMENT

ಪೊಲೀಸ್‌ ಸರ್ಪಗಾವಲಿನಲ್ಲಿ ದಕ್ಷಿಣ ಕನ್ನಡ

ಅಯೋಧ್ಯೆ ಕುರಿತು ಸುಪ್ರೀಂಕೋರ್ಟ್‌ ತೀರ್ಪಿನ ಕಾರಣದಿಂದ ಕಟ್ಟೆಚ್ಚರ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 17:30 IST
Last Updated 9 ನವೆಂಬರ್ 2019, 17:30 IST
ಮಂಗಳೂರು ನಗರ ಪೊಲೀಸ್ ಕಮಿಷನರ್‌ ಡಾ.ಪಿ.ಎಸ್‌.ಹರ್ಷ ನೇತೃತ್ವದಲ್ಲಿ ಪೊಲೀಸರು ನಗರದಲ್ಲಿ ಶನಿವಾರ ಪಥಸಂಚಲನ ನಡೆಸಿದರು.– ಪ್ರಜಾವಾಣಿ ಚಿತ್ರ
ಮಂಗಳೂರು ನಗರ ಪೊಲೀಸ್ ಕಮಿಷನರ್‌ ಡಾ.ಪಿ.ಎಸ್‌.ಹರ್ಷ ನೇತೃತ್ವದಲ್ಲಿ ಪೊಲೀಸರು ನಗರದಲ್ಲಿ ಶನಿವಾರ ಪಥಸಂಚಲನ ನಡೆಸಿದರು.– ಪ್ರಜಾವಾಣಿ ಚಿತ್ರ   

ಮಂಗಳೂರು: ಅಯೋಧ್ಯೆಯ ರಾಮ ಜನ್ಮಭೂಮಿ– ಬಾಬರಿ ಮಸೀದಿ ವಿವಾದ ಕುರಿತು ಸುಪ್ರೀಂಕೋರ್ಟ್‌ ತೀರ್ಪು ಪ್ರಕಟಣೆಯ ಕಾರಣದಿಂದ ಶನಿವಾರ ಬೆಳಿಗ್ಗೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪೊಲೀಸ್‌ ಸರ್ಪಗಾವಲು ಹಾಕಲಾಗಿದೆ. ಭಾನುವಾರವೂ ಇದೇ ವ್ಯವಸ್ಥೆ ಮುಂದುವರಿಸಲು ಪೊಲೀಸರು ನಿರ್ಧರಿಸಿದ್ದಾರೆ.

ಸುಪ್ರೀಂಕೋರ್ಟ್‌ ಶನಿವಾರ ಬೆಳಿಗ್ಗೆ ತೀರ್ಪು ‍ಪ್ರಕಟಿಸಲಿದೆ ಎಂಬ ಮಾಹಿತಿ ಲಭಿಸುತ್ತಿದ್ದಂತೆಯೇ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದ ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಡಾ.‍ಪಿ.ಎಸ್‌.ಹರ್ಷ ಮತ್ತು ದಕ್ಷಿಣ ಕನ್ನಡ ಎಸ್‌ಪಿ ಬಿ.ಎಂ.ಲಕ್ಷ್ಮೀಪ್ರಸಾದ್, ಬಂದೋಬಸ್ತ್‌ ಯೋಜನೆ ಸಿದ್ಧಪಡಿಸಿದ್ದರು. ತಡರಾತ್ರಿಯೇ ಕಾರ್ಯಾಚರಣೆಗೆ ಇಳಿದ ಸಾವಿರಾರು ಪೊಲೀಸರು ಜಿಲ್ಲೆಯಾದ್ಯಂತ ತೀವ್ರ ನಿಗಾ ಇಟ್ಟಿದ್ದಾರೆ.

ಸಿವಿಲ್‌ ಪೊಲೀಸರೊಂದಿಗೆ ರಾಜ್ಯ ಮೀಸಲು ಪೊಲೀಸ್‌ ಪಡೆ, ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆ, ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕ್ಷಿಪ್ರ ಕಾರ್ಯಾಚರಣೆ ಪಡೆಯ (ಆರ್‌ಎಎಫ್‌) ಒಂದು ತುಕಡಿಯನ್ನು ಜಿಲ್ಲೆಗೆ ನಿಯೋಜಿಸಿದ್ದು, ತಂಡಗಳಾಗಿ ವಿಭಜಿಸಿ ಹಲವೆಡೆ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.

ADVERTISEMENT

ಶನಿವಾರ ರಾತ್ರಿಯಿಂದಲೇ ಗಸ್ತು ಮತ್ತು ನಾಕಾಬಂದಿ ಹೆಚ್ಚಿಸಲಾಗಿತ್ತು. ಭಾನುವಾರ ಬೆಳಿಗ್ಗೆ ಬಂದೋಬಸ್ತ್‌ ಮತ್ತಷ್ಟು ಹೆಚ್ಚಿಸಲಾಯಿತು. ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಪೊಲೀಸರು 110 ಕಿ.ಮೀ. ಉದ್ದದ ಪಥ ಸಂಚಲನ ನಡೆಸಿದರು. ಉಳ್ಳಾಲ, ತೊಕ್ಕೊಟ್ಟು, ಕೊಣಾಜೆ, ರಥಬೀದಿ, ಕಂಡತ್‌ಪಳ್ಳಿ, ಬಂದರು, ಸುರತ್ಕಲ್‌, ಕಾಟಿಪಳ್ಳ, ಕೃಷ್ಣಾಪುರ ಸೇರಿದಂತೆ 35 ಕಿ.ಮೀ. ಮಾರ್ಗದಲ್ಲಿ ಪೊಲೀಸ್‌ ಕಮಿಷನರ್‌ ಖುದ್ದಾಗಿ ಪಥ ಸಂಚಲನ ನಡೆಸಿದರು.

ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ 37 ಸೆಕ್ಟರ್‌ಗಳಲ್ಲಿ ಪಥ ಸಂಚಲನ ನಡೆಸಲಾಗಿದೆ. 15 ತನಿಖಾ ಠಾಣೆಗಳನ್ನು ತೆರೆಯಲಾಗಿದೆ. ಅಂತರರಾಜ್ಯ ಗಡಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. 170 ಸ್ಥಳಗಳಲ್ಲಿ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಎಸ್‌ಪಿ ಲಕ್ಷ್ಮೀಪ್ರಸಾದ್‌ ತಿಳಿಸಿದರು.

ಕಾದು ನೋಡಿದ ಜನ: ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಮಧ್ಯಾಹ್ನದವರೆಗೂ ಜನರ ಓಡಾಟ, ವಾಹನಗಳ ಸಂಚಾರ ಕಡಿಮೆ ಇತ್ತು. ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿದ್ದರಿಂದ ಬಸ್‌ಗಳಲ್ಲೂ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಹೋಟೆಲ್‌ಗಳಲ್ಲೂ ಮಧ್ಯಾಹ್ನದವರೆಗೆ ಹೆಚ್ಚಿನ ವಹಿವಾಟು ನಡೆಯಲಿಲ್ಲ. ಮಧ್ಯಾಹ್ನದ ಬಳಿಕ ವಾಹನ ಮತ್ತು ಜನರ ಸಂಚಾರ ಹೆಚ್ಚುತ್ತಾ ಬಂತು.

ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಇರುವುದರಿಂದ ಪಟಾಕಿ ಮಾರಾಟ ಅಂಗಡಿಗಳನ್ನು ಮುಚ್ಚಿಸಲಾಗಿದೆ. ಶನಿವಾರ ತುಳಸಿ ಪೂಜೆಗಾಗಿ ಪಟಾಕಿ ಖರೀದಿಸಲು ಬಂದಿದ್ದ ಹಲವರು ನಿರಾಸೆಯಿಂದ ಮರಳುತ್ತಿದ್ದ ದೃಶ್ಯ ಕಂಡುಬಂತು.

ಮದ್ಯ ಮಾರಾಟ ನಿಷೇಧ: ಶನಿವಾರ ಬೆಳಿಗ್ಗೆಯಿಂದ ಜಿಲ್ಲೆಯಾದ್ಯಂದ ಮದ್ಯ ಮಾರಾಟ ನಿಷೇಧಿಸಲಾಗಿದೆ. ಜಿಲ್ಲೆಯ ವಿವಿಧೆಡೆ ಗಸ್ತು ತಿರುಗಿದ ಅಬಕಾರಿ ಇಲಾಖೆ ಅಧಿಕಾರಿಗಳು, ಮದ್ಯದಂಗಡಿಗಳು ವಹಿವಾಟು ನಡೆಸದಂತೆ ನಿಗಾ ಇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.