ಮಂಗಳೂರು: ‘ವಿಶಿಷ್ಟ ಶ್ರೇಣಿಯಲ್ಲಿ ಪಾಸಾದ, ಪ್ರಾಂಶುಪಾಲರಿಂದ ಚಿನ್ನದ ಪದಕ ಪಡೆದ ಪ್ರತಿಭಾವಂತ ಹುಡುಗಿ ನಾನು. ಸ್ವಚ್ಛಂದವಾಗಿ ಬದುಕಬೇಕು, ನನ್ನ ಬದುಕು ನಾನೇ ಕಟ್ಟಿಕೊಳ್ಳಬೇಕು ಎಂಬ ಮಹತ್ವಾಕಾಂಕ್ಷೆ ಹೊತ್ತವಳು. ಕೈತುಂಬಾ ಸಂಬಳದ ಉದ್ಯೋಗವೂ ಸಿಕ್ಕಿತ್ತು. ಆದರೆ ಮಾದಕ ವ್ಯಸನ ಬದುಕನ್ನು ಯಾತನೆಯ ಕೂಪಕ್ಕೆ ತಳ್ಳಿತು... ’
'ವೇತನ ಹೆಚ್ಚಾದಂತೆ ನಶೆಯ ಸೆಳೆತವೂ ಹೆಚ್ಚಾಯಿತು. ಕೆಲಸ ಮಾಡಲು ನಶೆ ಬೇಕೇ ಬೇಕೆಂಬ ಹಂತಕ್ಕೆ ತಲುಪಿದ್ದೆ. ಸ್ವಾವಲಂಬನೆಯ ತುಡಿತ ಹೊಂದಿದ್ದ ನಾನು ದುಡಿಯುವುದೇ ಡ್ರಗ್ಸ್‌ಗಾಗಿ ಎಂಬಂತಾದೆ. ಮನಸ್ಸಿನಲ್ಲಿ ಭಾವನೆಗಳೇ ಇಲ್ಲವಾಗಿ, ಪ್ರಾಣ ತೊರೆಯಲು ಮುಂದಾಗಿದ್ದೆ’.
‘ಕುಟುಂಬದಿಂದಲೂ ದೂರವಾಗಿದ್ದ ನನಗೆ ಸಂಕಟದ ಸಮಯದಲ್ಲಿ ನೆನಪಾಗಿದ್ದು ಅಮ್ಮ. ಎಲ್ಲವನ್ನೂ ಹೇಳಿಕೊಂಡ ನನಗೆ ಅಮ್ಮ ಸ್ಥೈರ್ಯ ತುಂಬಿದರು. ಡ್ರಗ್ಸ್ ‘ಬೇಡ’ ಎಂದು ದೃಢನಿರ್ಧಾರ ತಳೆದರೂ, ಆ ವ್ಯೂಹದಿಂದ ಹೊರಬರುವುದು ಸುಲಭವಾಗಿರಲಿಲ್ಲ. ಹೊಟ್ಟೆ ತೊಳಸಿತು, ಅನಾರೋಗ್ಯ ಕಾಡಿತು. ಅಮ್ಮ ಗಟ್ಟಿಯಾಗಿ ನನ್ನೊಂದಿಗೆ ನಿಂತರು. ನಾನೀಗ ಎಲ್ಲವನ್ನೂ ತೊರೆದಿದ್ದೇನೆ. ಕೈತುಂಬ ಸಂಬಳ ನೀಡುತ್ತಿದ್ದ ಉದ್ಯೋಗ ಬಿಟ್ಟು ವ್ಯಸನಿಗಳಿಗೆ ಆಪ್ತಸಮಾಲೋಚನೆ ನಡೆಸುತ್ತಿದ್ದೇನೆ. ನನ್ನ ಹೊಟ್ಟೆಯಲ್ಲಿ 8 ತಿಂಗಳ ಕೂಸು ಇದ್ದು, ನಾನೂ ಅಮ್ಮನಾಗುತ್ತಿದ್ದೇನೆ...’
ನಗರದ ಮುಳಿಹಿತ್ಲುವಿನ ‘ಬಾರ್ನ್ ಎಗೈನ್ ರಿಕವರಿ ಸೆಂಟರ್’ನ ಬೀನಾ ಮಾದಕ ವ್ಯಸನ ತ್ಯಜಿಸಿ ಮರುಹುಟ್ಟು ಪಡೆದ ಬಗೆಯನ್ನು ವಿವರಿಸುವಾಗ, ಮೌನಕ್ಕೆ ಜಾರಿದ್ದ ಸಭಿಕರ ಕಣ್ಣಾಲಿಗಳು ತೇವಗೊಂಡವು.
ಅಂತರ ರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನದ ಅಂಗವಾಗಿ ಇಲ್ಲಿ ಮಂಗಳೂರು ನಗರ ಪೊಲೀಸ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್, ರಾಷ್ಟ್ರೀಯ ಸೇವಾ ಯೋಜನೆ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವ್ಯಸನವನ್ನು ಗೆದ್ದ ಜೀವನಾನುಭವವನ್ನು ದಿಟ್ಟವಾಗಿ ಹಂಚಿಕೊಂಡ ಬೀನಾ ಸಭಿಕರ ಮನವನ್ನೂ ಗೆದ್ದರು.
‘ತಂದೆ ತಾಯಿ ತಲೆತಗ್ಗಿಸುವ ಸ್ಥಿತಿಯನ್ನು ತಂದೊಡ್ಡದಿರಿ. ಡ್ರಗ್ಸ್ ಸೇವನೆಯ ಚಟ ಅಂಟಿಸಿಕೊಳ್ಳಲು ಸಂತೋಷಕೂಟ, ಹುಟ್ಟುಹಬ್ಬದಂತಹ ಹತ್ತಾರು ಕಾರಣಗಳು ಸಿಗಬಹುದು. ಒಮ್ಮೆ ಅದರ ಕಬಂಧಬಾಹುವಿನಲ್ಲಿ ಸಿಲುಕಿದರೆ ಹೊರಬರುವುದು ಕಷ್ಟ. ಈಗಾಗಲೇ ವ್ಯಸನದ ದಾಸರಾಗಿದ್ದರೆ, ಹೊರಬರುವ ದೃಢ ನಿರ್ಧಾರ ಕೈಗೊಳ್ಳಿ. 13 ವರ್ಷ ಯಮಯಾತನೆಯಲ್ಲಿ ಕಳೆದ ಅನುಭವದಿಂದ ಈ ಮಾತು ಹೇಳುತ್ತಿದ್ದೇನೆ’ ಎಂದು ಅವರು ಸಲಹೆ ನೀಡಿದರು.
ಸಿನಿಮಾ ನಟ ರೂಪೇಶ್ ಶೆಟ್ಟಿ, ‘ಬದುಕಿನಲ್ಲಿ ನಶೆ ಬೇಕು. ಆದರದು ಸಿಗರೇಟು, ತಂಬಾಕು, ಮಾದಕ ಪದಾರ್ಥಗಳ ನಶೆಯಲ್ಲ. ಸಾಧನೆ ಮಾಡಿ ತಂದೆ–ತಾಯಿಯನ್ನು ಖುಷಿಪಡಿಸುವ ನಶೆ, ಸದಾ ಸತ್ಯದ ದಾರಿಯಲ್ಲಿ ನಡೆಯುವ ನಶೆಯಾಗಿರಲಿ’ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಎಸ್.ಮೂಡಿತ್ತಾಯ, 'ಜಗತ್ತಿನ ಕೌಶಲ ಕೇಂದ್ರವಾಗಿ ಹೊರಹೊಮ್ಮುತ್ತಿರುವ ಭಾರತದಲ್ಲಿ ಈಗಿನ ತಲೆಮಾರಿಗೆ ಉಜ್ವಲ ಅವಕಾಶಗಳಿವೆ. ಇಲ್ಲಿನ ಪ್ರತಿಭೆಗಳಿಗಾಗಿ ಜಗತ್ತೇ ಕಾದುಕುಳಿತಿದೆ. ಜಗತ್ತಿನ ಪ್ರತಿ ಐವರು ಉದ್ಯೋಗಿಗಳಲ್ಲಿ ಒಬ್ಬರು ಭಾರತೀಯರಾಗಲಿದ್ದಾರೆ. ಇಂತಹ ಸಂದರ್ಭದಲ್ಲಿ ಡ್ರಗ್ಸ್‌ನ ದಾಸರಾಗಿ ಭವಿಷ್ಯವನ್ನು ಹಾಳು ಮಾಡಿಕೊಳ್ಳದಿರಿ’ ಎಂದರು.
ಮನೋವೈದ್ಯ ತಜ್ಞೆ ಅಗ್ನಿತಾ ಐಮನ್, ‘ಮಾದಕ ವ್ಯಸನದಿಂದ ಹೊರಗೆ ಬರಲು ಹಿಂಜರಿಕೆ ಬೇಡ. ಅಂತಹವರಿಗೆ ಆಪ್ತಸಮಾಲೋಚಕರು ನೆರವಾಗುತ್ತಾರೆ’ ಎಂದರು.
ನಗರ ಪೊಲೀಸ್ ಕಮಿಷನರ್ ಸುಧೀರ್‌ಕುಮಾರ್ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು.
ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ಪ್ರಸ್ತಾವಿಕವಾಗಿ ಮಾತನಾಡಿದರು. ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು. ಎಸಿಪಿ ಗೀತಾ ಕುಲಕರ್ಣಿ ಧನ್ಯವಾದ ಸಲ್ಲಿಸಿದರು.
ಜಿಲ್ಲಾಧಿಕಾರಿ ದರ್ಶನ್ ಎಚ್.ವಿ, ಡಿಸಿಪಿಗಳಾದ ಸಿದ್ಧಾರ್ಥ ಗೋಯಲ್, ರವಿಶಂಕರ ಕೆ., ಉಮೇಶ್ ಭಾಗವಹಿಸಿದ್ದರು.
ಮಾದಕ ವ್ಯಸನ ನಿಗ್ರಹ: ಎಸ್‌ಒಪಿ ಬಿಡುಗಡೆ ಮಾದಕ ವ್ಯಸನ ವಿರೋಧಿ ಜಾಥಾ–ಹೆಜ್ಜೆಹಾಕಿದ ವಿದ್ಯಾರ್ಥಿಗಳು ಡ್ರಗ್ಸ್ ವ್ಯಸನ: ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಂದ ಕಿರುನಾಟಕ ಪ್ರದರ್ಶನ
‘ಡ್ರಗ್ಸ್ ಸೇವಿಸುವುದಿಲ್ಲ ಎಂದು ವಿದ್ಯಾರ್ಥಿ ದೆಸೆಯಲ್ಲೇ ಪಣತೊಟ್ಟರೆ ಮುಂದೆ ಜೀವನ ಪರ್ಯಂತ ಎಂದೂ ನೀವು ದುರ್ವ್ಯಸನದಲ್ಲಿ ಸಿಲುಕುವುದಿಲ್ಲದರ್ಶನ್ ಎಚ್.ವಿ. ಜಿಲ್ಲಾಧಿಕಾರಿ ದಕ್ಷಿಣ ಕನ್ನಡ ಜಿಲ್ಲೆ
‘ಮಾಹಿತಿ ನೀಡಲು ಕ್ಯು.ಆರ್.ಕೋಡ್’
‘ನೀವು ಡ್ರಗ್ಸ್ ವ್ಯಸನದಿಂದ ದೂರವಿರುವುದರ ಜೊತೆಗೆ ಗಳೆಯರೂ ಇದರ ದಾಸರಾಗದಂತೆ ತಡೆಯುವ ಹೊಣೆ ನಿಮ್ಮದು. ಶಿಕ್ಷಣ ಸಂಸ್ಥೆಗಳ ಬಳಿ ಕ್ಯುಆರ್ ಕೋಡ್ ಹಾಕಿರುತ್ತೇವೆ. ಅದನ್ನು ಸ್ಕ್ಯಾನ್ ಮಾಡಿ ವ್ಯಸನಿಗಳ ಮಾಹಿತಿ ನೀಡಿ. ನಿಮ್ಮ ಹೆಸರು ಬಹಿರಂಗ ಪಡಿಸಬೇಕಿಲ್ಲ. ವ್ಯಸನಿಗಳನ್ನು ಸಂತ್ರಸ್ತರೆಂದೇ ಪರಿಗಣಿಸುತ್ತೇವೆ. ಅವರಿಗೆ ಡ್ರಗ್ ಪೂರೈಸಿದವರ ಮಾಹಿತಿ ಇದ್ದರೆ ಹಂಚಿಕೊಳ್ಳಿ. ಉಳಿದಿದ್ದನ್ನು ನಾವು ನೋಡಿಕೊಳ್ಳುತ್ತೇವೆ’ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದರು.
Cut-off box - ‘ಮಾನಕ್ಕಂಜಿ ವಿಷಯ ಮುಚ್ಚಿಡದಿರಿ’ ‘ವಿದ್ಯಾರ್ಥಿಗಳು ಮಾದಕ ಪದಾರ್ಥ ಸೇವನೆಯ ದುಶ್ಚಟಕ್ಕೆ ಒಳಗಾಗಿದ್ದನ್ನು ಮೊದಲು ಗುರುತಿಸಬೇಕಾದುದು ಪೋಷಕರು ಹಾಗೂ ಗುರುಗಳು. ವಿದ್ಯಾರ್ಥಿಗಳಿಗೆ ಈ ಚಟಿ ಇರುವುದು ಗೊತ್ತಾದ ಬಳಿಕವೂ ಕುಟುಂಬದ ಅಥವಾ ಶಿಕ್ಷಣ ಸಂಸ್ಥೆಯ ಮಾನಕ್ಕಂಜಿ ವಿಷಯ ಮುಚ್ಚಿಡಬೇಡಿ. ಈ ಕುರಿತ ಮಾಹಿತಿ ಹಂಚಿಕೊಂಡರೆ ಮಾತ್ರ ಈ ಪಿಡುಗನ್ನು ಮಟ್ಟಹಾಕಬಹುದು. ಇದಕ್ಕೆ ಪೊಲೀಸರಿಗೆ ಸಾರ್ವಜನಿಕರ ಸಹಕಾರವೂ ಬೇಕು’ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.