ADVERTISEMENT

ಅನಂತ್‌ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಕೆ.ಹರೀಶ್‌ ಕುಮಾರ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2020, 11:05 IST
Last Updated 6 ಫೆಬ್ರುವರಿ 2020, 11:05 IST

ಮಂಗಳೂರು: ಮಹಾತ್ಮ ಗಾಂಧೀಜಿ ಸೇರಿದಂತೆ ಎಲ್ಲ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಕೀಳಾಗಿ ಮಾತನಾಡಿ, ಅವಮಾನಿಸಿರುವ ಬಿಜೆಪಿ ಸಂಸದ ಅನಂತ್‌ ಕುಮಾರ್‌ ಹೆಗ್ಡೆ ವಿರುದ್ಧ ತಕ್ಷಣವೇ ದೇಶದ್ರೋಹದ ಪ್ರಕರಣ ದಾಖಲಿಸಿ, ಬಂಧಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಕೆ.ಹರೀಶ್‌ ಕುಮಾರ್‌ ಆಗ್ರಹಿಸಿದರು.

ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅನಂತ್‌ ಕುಮಾರ್‌ ಹೆಗ್ಡೆ ಸ್ವಾತಂತ್ರ್ಯ ಹೋರಾಟವನ್ನೇ ನಾಟಕ ಎಂದು ಅಣಕಿಸಿದ್ದಾರೆ. ಇದರಿಂದ ಗಾಂಧೀಜಿಯವರನ್ನು ಮಾತ್ರವಲ್ಲ ಇಡೀ ದೇಶದ ಜನರನ್ನು ಅವಮಾನಿಸಿದ್ದಾರೆ. ಯಾವುದೇ ದೇಶಭಕ್ತರೂ ಇದನ್ನು ಸಹಿಸಲು ಸಾಧ್ಯವಿಲ್ಲ’ ಎಂದರು.

ಅನಂತ್‌ ಕುಮಾರ್‌ ಹೆಗ್ಡೆ ಇದೇ ಮೊದಲ ಬಾರಿಗೆ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸುತ್ತಿಲ್ಲ. ಗಾಂಧೀಜಿಯವರನ್ನು ಹತ್ಯೆ ಮಾಡಿದ ನಾಥೂರಾಮ್‌ ಗೋಡ್ಸೆಯನ್ನು ಹಲವು ಬಾರಿ ಹೊಗಳಿದ್ದಾರೆ. ಗಾಂಧಿ, ನೆಹರೂ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರನ್ನು ಟೀಕಿಸಿದ್ದಾರೆ. ಸಂಸದರಾಗಿದ್ದುಕೊಂಡೇ ದುರ್ವರ್ತನೆ ತೋರುತ್ತಿದ್ದಾರೆ ಎಂದು ದೂರಿದರು.

ADVERTISEMENT

‘ಸಂಸದರಾಗಿದ್ದಾಗಲೇ ವೈದ್ಯರ ಮೇಲೆ ಹಲ್ಲೆ ನಡೆಸಿದ್ದರು. ಹಿಂದೂ ಹೆಣ್ಣು ಮಕ್ಕಳನ್ನು ಮುಟ್ಟುವವರ ಕೈ ಕಡಿಯಿರಿ ಎಂದು ಹಿಂಸೆಗೆ ಪ್ರಚೋದನೆ ನೀಡಿದ್ದರು. ಇಂತಹ ವ್ಯಕ್ತಿಗೆ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್‌ ನೀಡಬಾರದಿತ್ತು. ಕೇಂದ್ರ ಸರ್ಕಾರ ಮತ್ತು ಬಿಜೆಪಿ ಅವರ ಮೇಲೆ ಯಾವುದೇ ನಿಯಂತ್ರಣ ಹೊಂದಿಲ್ಲ. ಇದರಿಂದಾಗಿ ಪದೇ ಪದೇ ದುರ್ವರ್ತನೆ ತೋರುತ್ತಿದ್ದಾರೆ’ ಎಂದರು.

ಮಾದರಿ ಆಗಬೇಕಾದ ಸಂಸದರೇ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಇಂತಹವರಿಗೆ ಸಾಮಾಜಿಕ ಬಹಿಷ್ಕಾರ ಹಾಕಬೇಕು. ಬಿಜೆಪಿಯಿಂದ ನೋಟಿಸ್‌ ನೀಡಿದರೆ ಪ್ರಯೋಜನ ಆಗದು. ಪ್ರಕರಣ ದಾಖಲಿಸಿ, ಜೈಲಿಗೆ ಕಳುಹಿಸಬೇಕು ಎಂದು ಒತ್ತಾಯಿಸಿದರು.

ಬೇಜವಾಬ್ದಾರಿ ಹೇಳಿಕೆ:

‘ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿ ವಿಳಂಬಕ್ಕೆ ಕಾಂಗ್ರೆಸ್‌ ಕಾರಣ ಎಂದು ನಮ್ಮ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ. ಇದು ಬೇಜವಾಬ್ದಾರಿತನದ ಹೇಳಿಕೆ. ಅಡ್ಡಹೊಳೆ– ಬಿ.ಸಿ.ರೋಡ್‌ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಒಂದು ವರ್ಷದಿಂದ ಸ್ಥಗಿತಗೊಂಡಿದೆ. ಮತ್ತೆ ಕಾಮಗಾರಿ ಆರಂಭಿಸಲು ಸಂಸದರು ಏನು ಮಾಡಿದ್ದಾರೆ’ ಎಂದು ಪ್ರಶ್ನಿಸಿದರು.

ಎತ್ತಿನಹೊಳೆ ಯೋಜನೆ ವಿರುದ್ಧ ಹಿಂದೆ ಸಂಸದರು ಪ್ರತಿಭಟನೆ ನಡೆಸುತ್ತಿದ್ದರು. ಈಗ ಅವರೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ. ಅವರದ್ದೇ ಸರ್ಕಾರವಿದೆ. ಈ ಯೋಜನೆಯ ಬಗ್ಗೆ ತಮ್ಮ ನಿಲುವೇನು ಎಂಬುದನ್ನು ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಶಾಹುಲ್‌ ಹಮೀದ್‌, ಕಾಂಗ್ರೆಸ್‌ ಮುಖಂಡರಾದ ಟಿ.ಕೆ.ಸುಧೀರ್‌, ಸಿ.ಎಂ.ಮುಸ್ತಫಾ, ಶುಭೋದಯ ಆಳ್ವ, ಪೃಥ್ವಿರಾಜ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.