ಪುತ್ತೂರು: ಬಿಜೆಪಿ ಈಗ ದೇಶದ ಆಡಳಿತ ಹಿಡಿಯಲು ದೀನ್ ದಯಾಳ್ ಉಪಾಧ್ಯಾಯರ ದೂರದೃಷ್ಟಿ ಕಾರಣ. ಅವರ ಚಿಂತನೆ ಭಾರತವನ್ನು ಜಗದ್ಗುರು ಸ್ಥಾನದತ್ತ ಕೊಂಡೊಯ್ಯುತ್ತಿದೆ. ಏಕಾತ್ಮ ಮಾನವ ದರ್ಶನ ಮತ್ತು ಅಂತ್ಯೋದಯದ ಪರಿಕಲ್ಪನೆಯನ್ನು ತೋರಿಸಿಕೊಟ್ಟವರು ದೀನ್ ದಯಾಳ್ ಉಪಾಧ್ಯಾಯ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ 105ನೇ ಜನ್ಮದಿನದ ಅಂಗವಾಗಿ ಬಿಜೆಪಿ ಬೂತ್ ಮಟ್ಟದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ವಿವಿಧ ಕಾರ್ಯಕ್ರಮಗಳಿಗೆ ಶನಿವಾರ ಬಿಜೆಪಿ ಕಚೇರಿಯಲ್ಲಿ ಚಾಲನೆ ನೀಡಿ, ಸುಕನ್ಯಾ ಸಮೃದ್ಧಿ ಯೋಜನೆ ಫಲಾನುಭವಿಗಳಿಗೆ ಪಾಸ್ ಪುಸ್ತಕ ವಿತರಿಸಿ ಅವರು ಮಾತನಾಡಿದರು.
‘ದೀನ್ ದಯಾಳ್ ಉಪಾಧ್ಯಾಯರು ದೇಶಕ್ಕಾಗಿ ಬದುಕಬೇಕೆಂಬ ಸಂದೇಶ ಕೊಟ್ಟಿದ್ದಾರೆ. ಹುಟ್ಟು ಮತ್ತು ಸಾವು ಮನುಷ್ಯನಿಗೆ ಸಹಜ. ಇವೆರಡರ ನಡುವಿನ ಬದುಕು ರಾಷ್ಟ್ರ ಸಮರ್ಪಿತವಾಗಬೇಕು ಎಂದು ಸಂದೇಶ ನೀಡಿದ ಅವರ ಮಾರ್ಗದರ್ಶನದಲ್ಲಿ ನಾವು ನಡೆಯಬೇಕಾಗಿದೆ’ ಎಂದರು.
5,000ಕ್ಕೂ ಮಿಕ್ಕಿ ಉರಗ ರಕ್ಷಣೆ ಮಾಡಿರುವ ಬನ್ನೂರು ಗ್ರಾಮದ ಕರ್ಮಲ ನಿವಾಸಿ ತೇಜಸ್ ಅವರನ್ನು ಗೌರವಿಸಲಾಯಿತು. ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ನಗರ ಮಂಡಲದ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್, ನಗರಸಭೆ ಅಧ್ಯಕ್ಷ ಕೆ. ಜೀವಂಧರ್ ಜೈನ್ ಇದ್ದರು. ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಸ್ವಾಗತಿಸಿದರು. ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಯುವರಾಜ್ ವಂದಿಸಿದರು. ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.