ಮಂಗಳೂರು: ‘ಪೌರಕಾರ್ಮಿಕರನ್ನು ಕಾಯಂಗೊಳಿಸಿ, ಮೇ 1ರ ಕಾರ್ಮಿಕ ದಿನಾಚರಣೆಯಿಂದ ನೇಮಕಾತಿ ಪತ್ರಗಳನ್ನು ನೀಡುತ್ತೇವೆ. ಪೌರ ಕಾರ್ಮಿಕರ ಜೊತೆಗೆ ಚಾಲಕರನ್ನೂ ಕಾಯಂ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಂಗಳೂರಿನಲ್ಲಿ ಈಚೆಗೆ ನೀಡಿದ ಭರವಸೆ ಈಡೇರಲು ಇನ್ನು ಮೂರೇ ದಿನಗಳು ಬಾಕಿ ಉಳಿದಿವೆ. ಆದರೆ, ಅವರ ಸೇವೆ ಈ ಗಡುವಿನೊಳಗೆ ಕಾಯಂಗೊಳ್ಳುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.
ಈ ಕುರಿತ ಯಾವುದೇ ಲಿಖಿತ ಆದೇಶ ನಮ್ಮ ಕೈಸೇರಿಲ್ಲ ಎಂದು ಜಿಲ್ಲೆಯ ನಗರಾಭಿವೃದ್ಧಿ ಕೋಶದ ಮೂಲಗಳು ತಿಳಿಸಿವೆ.
ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಮನೆ ಮನೆಯಿಂದ ಕಸವನ್ನು ಒಯ್ಯುವ ವಾಹನಗಳಲ್ಲಿ 127 ಲೋಡರ್‌ಗಳು ಹಾಗೂ 152 ಚಾಲಕರುಈಗಲೂ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ದಶಕಗಳಿಂದ ಈ ಕೆಲಸ ಮಾಡುತ್ತಿರುವ ಅವರ ಬದುಕಿಗೆ ಈಗಲೂ ಆರ್ಥಿಕ ಭದ್ರತೆ ಇಲ್ಲ. ಈ ಹಿಂದೆ ಆಂಟನಿ ವೇಸ್ಟ್ ಹ್ಯಾಂಡ್ಲಿಂಗ್ ಸೆಲ್ ಪ್ರೈ ಲಿಮಿಟೆಡ್ ಕಂಪನಿಯ ಗುತ್ತಿಗೆ ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅವರನ್ನು ಈಗ ಬೇರೊಂದು ಹೆಸರಿನ ಸಂಸ್ಥೆ ಮೂಲಕ ನಗರದ ಸ್ವಚ್ಛತಾ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ.
‘ನಮ್ಮ ಸೇವೆಯನ್ನು ಕಾಯಂಗೊಳಿಸುವುದು ಬೇಡ. ಕನಿಷ್ಠಪಕ್ಷ ನೇರ ಪಾವತಿ ವ್ಯವಸ್ಥೆಯಡಿಗೆ ತಂದರೂ ನಮ್ಮ ಮೇಲಿನ ಶೋಷಣೆ ತಪ್ಪುತ್ತಿತ್ತು ಎನ್ನುತ್ತಾರೆ’ ಈ ಕಾರ್ಮಿಕರು.
ನೇರ ಪಾವತಿ ವ್ಯವಸ್ಥೆಯಡಿ ಬಂದರೆ ಲೋಡರ್‌ಗಳಿಗೆ ತಿಂಗಳಿಗೆ ಕನಿಷ್ಠ ₹22,115 ವೇತನ ಸಿಗಲಿದೆ. ಅದರಲ್ಲಿ ಭವಿಷ್ಯ ನಿಧಿ ಮೊತ್ತ ಕಡಿತವಾಗಿ ತಿಂಗಳಿಗೆ ₹17,283 ಅವರ ಕೈಸೇರಲಿದೆ. ಚಾಲಕರಿಗೆ ತಿಂಗಳಿಗೆ ಕನಿಷ್ಠ₹ 19,489 ವೇತನ ಸಿಗಲಿದೆ. ಭವಿಷ್ಯನಿಧಿ ಮೊತ್ತ ಕಡಿತವಾಗಿ ₹15,405 ಕೈಸೇರಲಿದೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
‘ಗುತ್ತಿಗೆ ಪೌರಕಾರ್ಮಿಕರಿಗೆ ಪ್ರತಿ ತಿಂಗಳೂ ಸರಿಯಾಗಿ ಸಂಬಳ ಪಾವತಿಯಾಗುವುದಿಲ್ಲ. ಏನಾದರೂ ನೆಪವೊಡ್ಡಿ ಸಂಬಳ ಕಡಿತಮಾಡುತ್ತಾರೆ. ಬೆವರು ಸುರಿಸಿ ದುಡಿದರೂ ಅದಕ್ಕೆ ತಕ್ಕ ಫಲ ಸಿಗದ ಸ್ಥಿತಿ ಪೌರಕಾರ್ಮಿಕರದು’ ಎಂದು ವಸ್ತು ಸ್ಥಿತಿ ಬಿಚ್ಚಿಡುತ್ತಾರೆ ದಕ್ಷಿಣ ಕನ್ನಡ ಜಿಲ್ಲಾ ಪೌರ ಕಾರ್ಮಿಕರ ಹಾಗೂ ನಾಲ್ಕನೇ ದರ್ಜೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಪಿ.ಆನಂದ.
‘ಪುತ್ತೂರಿನಲ್ಲಿ 20 ಚಾಲಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಉಳ್ಳಾಲದಲ್ಲಿ 12 ಚಾಲಕರು ಹಾಗೂ 10 ವಾಲ್ವ್‌ಮನ್‌ಗಳು, ಮೂಡುಬಿದಿರೆಯಲ್ಲಿ 11 ಚಾಲಕ, 7 ವಾಲ್ವ್‌ಮನ್, ಬಂಟ್ವಾಳದಲ್ಲಿ 12 ಚಾಲಕರು 10 ಲೋಡರ್ ಮತ್ತು ಕ್ಲೀನರ್‌ಗಳು, ಸೋಮೇಶ್ವರದಲ್ಲಿ 5 ಚಾಲಕರು ಮತ್ತು 4 ವಾಲ್ವ್‌ಮನ್‌ಗಳು, ಮೂಲ್ಕಿಯಲ್ಲಿ 5 ಚಾಲಕರು, ಕೋಟೆಕಾರ್‌ನಲ್ಲಿ 5 ಚಾಲಕರು ನಾಲ್ವರು ಲೋಡರ್‌ಗಳು, ವಿಟದಲ್ಲಿ 5 ಚಾಲಕರು 2 ವಾಲ್ವ್‌ಮನ್‌ಗಳು , ಬೆಳ್ತಂಗಡಿಯಲ್ಲಿ 9 ವಾಲ್ವ್‌ಮನ್ ಹಾಗೂ 3 ಚಾಲಕರು, ಸುಳ್ಯದಲ್ಲಿ 5 ಚಾಲಕರು ಹಾಗೂ 4 ಲೋಡರ್ ಹಾಗೂ 4 ವಾಲ್ವ್‌ಮನ್‌ಗಳು, ಕಡಬದಲ್ಲಿ 5 ಚಾಲಕರು, ಬಜಪೆಯಲ್ಲಿ 5 ಚಾಲಕರು ಹಾಗೂ ಕಿನ್ನಿಗೋಳಿಯಲ್ಲಿ4 ಚಾಲಕರು, 5 ವಾಲ್ವ್‌ಮನ್ ಹಾಗೂ 5 ಲೋಡರ್ ಕಾರ್ಯ ನಿರ್ವಹಿಸುತ್ತಿದ್ದು, ಇವೆರಲ್ಲರೂ ಕಾಯಂಗೊಳ್ಳಬೇಕಿದೆ’ ಎನ್ನುತ್ತಾರೆ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘದ ಕರಾವಳಿ ವಿಭಾಗ ಸಂಚಾಲಕ ಬಿ.ಕೆ.ಅಪ್ಪಣ್ಣ ತಿಳಿಸಿದರು.
‘ಲೋಡರ್, ವಾಲ್ವ್‌ಮನ್, ಕ್ಲೀನರ್‌ಗಳನ್, ಒಳಚರಂಡಿ ವ್ಯವಸ್ಥೆ ನಿರ್ವಹಿಸುವ ಕಾರ್ಮಿಕರನ್ನು ಕಾಯಂಗೊಳಿಸಿ ಸರ್ಕಾರ ಕೊಟ್ಟಮಾತನ್ನು ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ ಪೌರಕಾರ್ಮಿಕರೆಲ್ಲ ಸೇರಿ ಮೇ 27ರಿಂದ ರಾಜ್ಯದಾದ್ಯಂತ ಹೋರಾಟ ನಡೆಸಲಿದ್ದಾರೆ’ ಎಂದು ಅವರು ತಿಳಿಸಿದರು.
ಗುತ್ತಿಗೆ ಪೌರಕಾರ್ಮಿಕರನ್ನು ಕನಷ್ಠಪಕ್ಷ ನೇರಪಾವತಿ ವ್ಯವಸ್ಥೆಯಡಿ ತಂದರೆ ಸರ್ಕಾರಿ ಸವಲತ್ತು ಸಿಗಲಿವೆ. ಇಲ್ಲದಿದ್ದರೆ ಅವರಿಗೆ ಯಾವ ಸವಲತ್ತೂ ದಕ್ಕದುಎಸ್ಪಿ.ಆನಂದ ಪ್ರಧಾನ ಕಾರ್ಯದರ್ಶಿ ದ.ಕ. ಜಿಲ್ಲಾ ಪೌರ ಕಾರ್ಮಿಕರ ಹಾಗೂ 4ನೇ ದರ್ಜೆ ನೌಕರರ ಸಂಘ
ಗುತ್ತಿಗೆಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಪೌರಕಾರ್ಮಿಕರನ್ನು ಮುಖ್ಯಮಂತ್ರಿಯವರು ಕೊಟ್ಟ ಮಾತಿನಂತೆ ಕಾಯಂಗೊಳಿಸಿ ಶೋಷಣೆಯಿಂದ ಮುಕ್ತ ನೀಡಬೇಕುಬಿ.ಕೆ.ಅಣ್ಣಪ್ಪ ಕಾರೆಕಾಡು ರಾಜ್ಯ ಪಾಲಿಕೆ ನಗರಸಭೆ ಪುರಸಭೆ ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘದ ಕರಾವಳಿಯ ಸಂಚಾಲಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.