ADVERTISEMENT

ಮಂಗಳೂರು: ತನಿಖೆಯಲ್ಲಿ ಲೋಪ; ಇನ್‌ಸ್ಪೆಕ್ಟರ್‌ ಸೋಮಶೇಖರ್, ಪಿಎಸ್‌ಐ ಉಮೇಶ್ ಅಮಾನತು

ವಿದೇಶದಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ ₹1.82 ಕೋಟಿ ವಂಚನೆ

​ಪ್ರಜಾವಾಣಿ ವಾರ್ತೆ
Published 19 ಮೇ 2025, 13:56 IST
Last Updated 19 ಮೇ 2025, 13:56 IST
<div class="paragraphs"><p>ಅಮಾನತು</p></div>

ಅಮಾನತು

   

ಮಂಗಳೂರು: ವಿದೇಶದಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ವಂಚನೆ ನಡೆಸಿದ್ದ ಕ್ರಿಮಿನಲ್‌ ಪ್ರಕರಣದ ತನಿಖೆಯಲ್ಲಿ ಗಂಭೀರ ಲೋಪವೆಸಗಿದ ಆರೋಪದ ಮೇಲೆ ನಗರದ ಪೂರ್ವ ಠಾಣೆಯ ಇನ್‌ಸ್ಪೆಕ್ಟರ್‌ ಸೋಮಶೇಖರ್ ಜಿ.ಸಿ. ಹಾಗೂ ಬರ್ಕೆ ಠಾಣೆಯ ಪಿಎಸ್‌ಐ ಉಮೇಶ್ ಕುಮಾರ್ ಎಂ.ಎನ್ ಅಮಾನತುಗೊಂಡಿದ್ದಾರೆ.

ಕಂಕನಾಡಿಯ ಹೈರ್ ಗ್ಲೋ ಎಲೆಗಂಟ್ ಓವರ್‌ಸೀಸ್‌ ಇಂಟರ್‌ನ್ಯಾಷನಲ್‌ (ಒಪಿಸಿ) ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ವಿದೇಶದಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿ ₹ 1.65 ಲಕ್ಷ ಪಡೆದುಕೊಂಡು ವಂಚಿಸಿದ ಬಗ್ಗೆ ಸಂತ್ರಸ್ತ ವ್ಯಕ್ತಿಯೊಬ್ಬರು ಈಚೆಗೆ ನಗರ ಪೂರ್ವ ಠಾಣೆಗೆ ದೂರು ನೀಡಿದ್ದರು. ವಿದೇಶದಲ್ಲಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ವಿವಿಧ ಉದ್ಯೋಗಾಕಾಂಕ್ಷಿಗಳಿಗೆ ₹ 1.82 ಕೋಟಿ ವಂಚನೆ ಮಾಡಿರುವ ಬಗ್ಗೆ ಈ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ADVERTISEMENT

‘ಈ ಇಬ್ಬರೂ ಅಧಿಕಾರಿಗಳೂ ತನಿಖೆಯಲ್ಲಿ ನಿರ್ಲಕ್ಷ್ಯವಹಿಸಿ, ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ. ಕರ್ತವ್ಯಲೋಪವೆಸಗಿದ ಇಬ್ಬರು ಅಧಿಕಾರಿಗಳ ವಿರುದ್ಧವೂ ಇಲಾಖಾ ಶಿಸ್ತುಕ್ರಮ ಕೈಗೊಳ್ಳುವ ಪ್ರಕ್ರಿಯೆ ಆರಂಭಿಸಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.

‘ಈ ಪ್ರಕರಣದಲ್ಲಿ ಸಂತ್ರಸ್ತರು ದೂರು ನೀಡಿದ ಬಳಿಕವೂ ಇನ್‌ಸ್ಪೆಕ್ಟರ್ ಸೋಮಶೇಖರ್ ಅವರು ತನಿಖೆಯ ಮೇಲ್ವಿಚಾರಣೆಯನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ. ಈ ಕುರಿತ ನಿರ್ದೇಶನಗಳನ್ನು ಪಾಲಿಸಿಲ್ಲ. ಅವರ ಅಸಡ್ಡೆಯಿಂದಾಗಿ ಆರೋಪಿಯೂ ಇಂತಹ ವಂಚನೆಯನ್ನು ಮುಂದುವರಿಸಲು ಸಾಧ್ಯವಾಗಿದೆ. ಉದ್ಯೋಗಾಕಾಂಕ್ಷಿಗಳು ಇದರಿಂದಾಗಿ ಒಟ್ಟು ₹ 1.82 ಕೋಟಿಗಳಷ್ಟು ಹಣವನ್ನು ಕಳೆದುಕೊಂಡಿದ್ದಾರೆ’ ಎಂದು ಕಮಿಷನರ್‌ ತಿಳಿಸಿದ್ದಾರೆ.

‘ಈ ಹಿಂದೆ ನಗರ ಪೂರ್ವ ಠಾಣೆಯ ಪಿಎಸ್‌ಐ ಆಗಿದ್ದು, ಪ್ರಸ್ತುತ ಬರ್ಕೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಮೇಶ್ ಕುಮಾರ್ ಎಂ.ಎನ್‌. ಈ ಪ್ರಕರಣದ ತನಿಖಾಧಿಕಾರಿಯಾಗಿದ್ದರು. ಅವರು ಆರೋಪಿಯನ್ನು ಬಂಧಿಸಿಲ್ಲ. ಆರೋಪಿ ವಿರುದ್ಧ ಗುರುತರವಾದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿಲ್ಲ. ಸಂತ್ರಸ್ತರನ್ನು ಹಾಗೂ ಸಾಕ್ಷ್ಯಾಧಾರರು ಒದಗಿಸಿ ಪುರಾವೆಗಳನ್ನು ಸರಿಯಾಗಿ ಪರಿಶೀಲಿಸಿಲ್ಲ. ಹಣಕಾಸು ವಹಿವಾಟಿಗೆ ಸಂಬಂಧಿಸಿದ ಕುರುಹುಗಳನ್ನು ಆಧರಿಸಿ ಪುರಾವೆಗಳನ್ನು ಸಂಗ್ರಹಿಸದೇ ತನಿಖೆಯಲ್ಲಿ ರಾಜಿ ಮಾಡಿಕೊಂಡಿದ್ದಾರೆ’ ಎಂದು ಕಮಿಷನರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.