ADVERTISEMENT

ಮಂಗಳೂರು ಮಹಾನಗರ ಪಾಲಿಕೆ‌: ದಿವಾಕರ ಮೇಯರ್, ವೇದಾವತಿ ಉಪ ಮೇಯರ್

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2020, 11:13 IST
Last Updated 28 ಫೆಬ್ರುವರಿ 2020, 11:13 IST

ಮಂಗಳೂರು: ಮಹಾನಗರ ಪಾಲಿಕೆಯ 21ನೇ ಮೇಯರ್ ಆಗಿ 46ನೇ ವಾರ್ಡ್‌ನ ದಿವಾಕರ್, ಉಪ ಮೇಯರ್ ಆಗಿ 9ನೇ ವಾರ್ಡ್‌ನ ವೇದಾವತಿ ಯಾನೆ ಜಾನಕಿ ಆಯ್ಕೆಯಾದರು.

ಪಾಲಿಕೆಯ ಒಟ್ಟು 60 ಸ್ಥಾನಗಳಲ್ಲಿ ಬಿಜೆಪಿ 44 ಸ್ಥಾನಗಳನ್ನು ಗೆಲ್ಲುವ ಮೂಲಕ ಪೂರ್ಣ ಬಹುಮತ ಪಡೆದಿದೆ. ಕಾಂಗ್ರೆಸ್ 14, ಎಸ್ ಡಿಪಿಐ 2 ಸ್ಥಾನಗಳನ್ನು ಪಡೆದಿವೆ.

ಮೇಯರ್ ಸ್ಥಾನ ಹಿಂದುಳಿದ ಎ ವರ್ಗಕ್ಕೆ ಹಾಗೂ ಉಪ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಮೂರನೇ ಬಾರಿ ಸದಸ್ಯರಾಗಿ ಆಯ್ಕೆಯಾಗಿರುವ‌ ದಿವಾಕರ ಅವರನ್ನೇ ಹಿರಿತನದ ಆಧಾರದಲ್ಲಿ ಮೇಯರ್ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು. ಇನ್ನು ಹೊಸಬರಿಗೆ ಅವಕಾಶ ನೀಡುವ ಉದ್ದೇಶದಿಂದ ಉಪ ಮೇಯರ್ ಸ್ಥಾನವನ್ನು ವೇದಾವತಿ ಅವರಿಗೆ ನೀಡಲಾಗಿದೆ.

ADVERTISEMENT

ಮೇಯರ್ ಹುದ್ದೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ನೀಡಿದ್ದರೆ, ಉಪ ಮೇಯರ್ ಸ್ಥಾನವನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ನೋಡುವ ಮೂಲಕ ಸಮತೋಲನ ಕಾಯ್ದುಕೊಳ್ಳಲಾಗಿದೆ.

ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ವಿ.ಯಶವಂತ್ ಚುನಾವಣೆ ನಡೆಸಿಕೊಟ್ಟರು. ಹೆಚ್ಚುವರಿ‌ ಪ್ರಾದೇಶಿಕ ಆಯುಕ್ತೆ ಗಾಯತ್ರಿ, ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಜೆ.‌ರೂಪಾ, ಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಇದ್ದರು.

ಬಿಜೆಪಿ ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ವಿಧಾ‌ನ ಪರಿಷತ್ ಸದಸ್ಯ ಐವನ್ ಡಿಸೋಜ, ಬಿಜೆಪಿ 44, ಕಾಂಗ್ರೆಸ್ ನ 14 ಹಾಗೂ ಎಸ್ ಡಿಪಿಐನ ಇಬ್ಬರು ಸದಸ್ಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.