ADVERTISEMENT

ಪರವಾನಗಿ ಪಡೆಯದೆ ಡಿ.ಜೆ ಬಳಕೆ: ಧ್ವನಿವರ್ಧಕ ವಶಕ್ಕೆ ಪಡೆದ ಪೊಲೀಸರು

ಮೆಹಂದಿ ಕಾರ್ಯಕ್ರಮದಲ್ಲಿ ಪರವಾನಗಿ ಪಡೆಯದೆ ಡಿ.ಜೆ ಬಳಕೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 7:45 IST
Last Updated 4 ನವೆಂಬರ್ 2025, 7:45 IST
ಧ್ವನಿವರ್ಧಕ
ಧ್ವನಿವರ್ಧಕ   

ಮಂಗಳೂರು: ಕೊಣಾಜೆ ಗ್ರಾಮದ ದಾಸರ ಮೂಲೆ ಪ್ರದೇಶದಲ್ಲಿ ಮೆಹಂದಿ ಕಾರ್ಯಕ್ರಮದಲ್ಲಿ ಧ್ವನಿವರ್ಧಕ ಬಳಸಿ, ಕರ್ಕಶವಾಗಿ ಸದ್ದು ಉಂಟು ಮಾಡಿದ ಆರೋಪದ ಮೇಲೆ ಡಿ.ಜೆ. ಪರಿಕರಗಳನ್ನು ಕೊಣಾಜೆ ಠಾಣೆಯ ಪೊಲಿಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಮನೆಯ ಯಜಮಾನ ಕೀರ್ತನ್ ಹಾಗೂ ಡಿ.ಜೆ.ಆಪರೇಟರ್ ಮಾನಸ್ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

‘ದಾಸರಮೂಲೆಯಲ್ಲಿ ಶನಿವಾರ ರಾತ್ರಿ ಧ್ವನಿವರ್ಧಕ ಬಳಸಿ ಕಿಡಿಗಡಚಿಕ್ಕುವ ಸದ್ದು ಉಂಟು ಮಾಡಿದ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿತ್ತು. ಅಂದು ರಾತ್ರಿ 11.40ರ ವೇಳೆಗೆ ಕೊಣಾಜೆ ಠಾಣೆಯ  ಕಾನ್‌ಸ್ಟೆಬಲ್  ಮಂಜುನಾಥ್ ಎಚ್.ಎ ಮತ್ತು ಜಕ್ಕಪ್ಪ ಎಂಬುವರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದರು. ಈ ವೇಳೆ ಕೀರ್ತನ್ ಎಂಬುವರ  ಮನೆಯಲ್ಲಿ ಮೆಹಂದಿ ಕಾರ್ಯಕ್ರಮದ ಅಂಗವಾಗಿ ಧ್ವನಿವರ್ಧಕ ಬಳಸಿ ಯುವಕರು ನರ್ತಿಸುತ್ತಿರುವುದು ಕಂಡುಬಂತು. ಡಿ.ಜೆ ಬಳಕೆಗೆ ಅದರ ಆಪರೇಟರ್ ಮಾನಸ್ ಪರವಾನಗಿ ಪಡೆದಿರಲಿಲ್ಲ. ಎರಡು ಬೇಸ್ ಸ್ಪೀಕರ್‌, ಎರಡು ಟಾಪ್ ಸ್ಫೀಕರ್‌, ಒಂದು ಆ್ಯಂಪ್ಲಿಫೈಯರ್‌, ಬಾಕ್ಸ್ ಕೇಬಲ್‌, ಮೈಕ್‌ ಹಾಗೂ ಮೈಕ್‌ನ ಕೇಬಲ್ ಹಾಗೂ ಎರಡು ವಿದ್ಯುದ್ದೀಪಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT