ಬಂಟ್ವಾಳ: ಯುವಜನತೆ ಡ್ರಗ್ಸ್ ಸೇವನೆಯಂತಹ ಮಾದಕ ದ್ಯವ್ಯ ಚಟಕ್ಕೆ ಒಮ್ಮೆ ಬಲಿಯಾದರೆ ಬಳಿಕ ಅದರಿಂದ ಹೊರ ಬರಲು ಸಾಧ್ಯವಾಗದೆ ದುಷ್ಕೃತ್ಯ ಅಥವಾ ಆತ್ಮಹತ್ಯೆಯಂತಹ ದಾರಿಗೆ ಬದುಕನ್ನು ಕೊಂಡೊಯ್ಯುತ್ತದೆ ಎಂದು ಬಂಟ್ವಾಳ ಡಿವೈಎಸ್ಪಿ ವಿಜಯ ಪ್ರಸಾದ್ ಹೇಳಿದರು.
ಇಲ್ಲಿನ ಬಿ.ಸಿ.ರೋಡು ಅಂಬೇಡ್ಕರ್ ಭವನದಲ್ಲಿ ಗುರುವಾರ ಏರ್ಪಡಿಸಿದ್ದ 'ಮಾದಕ ದ್ರವ್ಯ ಮುಕ್ತ ಸಮಾಜ'ಕ್ಕಾಗಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡ್ರಗ್ಸ್ ವ್ಯಸನದಿಂದ ಬದುಕು ಕೆಡುವುದರ ಜೊತೆಗೆ ಸಮಾಜದ ಸ್ವಾಸ್ಥ್ಯವೂ ಕೆಡುತ್ತದೆ. ಇದಕ್ಕಾಗಿ ವಿದ್ಯಾರ್ಥಿಗಳಿಗೆ ಬಾಲ್ಯದಿಂದಲೇ ಈ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಪೊಲೀಸ್ ಇಲಾಖೆ ಅಭಿಯಾನ ನಡೆಸುತ್ತಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಡಾ.ಜಯಶಂಕರ್ , ಡಾ.ಸಂಸ್ಕೃತಿ ಅವರು ಮಾದಕ ದ್ರವ್ಯ ಸೇವನೆ ಮತ್ತು ಅದರ ದುಷ್ಪರಿಣಾಮಗಳ ಬಗ್ಗೆ ವಿವರಿಸಿದರು.
ಲೊರೆಟ್ಟೋಹಿಲ್ಸ್ ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ವಿಜಯ ಫೆರ್ನಾಂಡಿಸ್, ಮೊಡಂಕಾಪು ರೋಟರಿ ಕ್ಲಬ್ಬಿನ ಅಧ್ಯಕ್ಷ ಅಲೆಕ್ಸಾಂಡರ್ ಲೋಬೊ, ಕಾರ್ಮೆಲ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಫೆಲ್ಸಿಟಾ ಎ.ಸಿ., ವಿಟ್ಲ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀನಿವಾಸ ಗೌಡ, ಬಿ.ಮೂಡ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಯೂಸುಫ್ ವಿಟ್ಲ ಮಾತನಾಡಿದರು.
ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಶಿವಕುಮಾರ್, ಎಸ್‌ಐಗಳಾದ ಮಂಜುನಾಥ್, ರಾಮಕೃಷ್ಣ, ಸುತೇಶ್ ಕುಮಾರ್, ಎಎಸ್‌ಐ ಸಂಜೀವ ಮತ್ತಿತರರು ಇದ್ದರು. ಪೊಲೀಸ್ ಸಿಬ್ಬಂದಿ ವಿವೇಕ್ ಕಾರ್ಯಕ್ರಮ ನಿರೂಪಿಸಿದರು.
ಆರಂಭದಲ್ಲಿ ಬಿ.ಸಿ.ರೋಡು ಕೈಕಂಬ ಪೊಳಲಿ ದ್ವಾರ ಬಳಿಯಿಂದ ನಡೆದ ಆಕರ್ಷಕ ಜಾಥಾ ಕಾರ್ಯಕ್ರಮದಲ್ಲಿ ನೂರಾರು ಮಂದಿ ವಿದ್ಯಾರ್ಥಿಗಳು ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.