ADVERTISEMENT

ಇಎಸ್‌ಐ ಅಧಿಕಾರಿಗಳಿಂದ ಕಾರ್ಮಿಕರಿಗೆ ಕಿರುಕುಳ

ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್‌ ಕಾಟಿಪಳ್ಳ ಆರೋಪ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2019, 15:38 IST
Last Updated 23 ಆಗಸ್ಟ್ 2019, 15:38 IST
ಮುನೀರ್‌ ಕಾಟಿಪಳ್ಳ
ಮುನೀರ್‌ ಕಾಟಿಪಳ್ಳ   

ಮಂಗಳೂರು: ರಾಜ್ಯ ಕಾರ್ಮಿಕರ ವಿಮಾ ನಿಗಮದ (ಇಎಸ್‌ಐಸಿ) ಮಂಗಳೂರು ವಿಭಾಗೀಯ ಕಚೇರಿಯ ಅಧಿಕಾರಿಗಳು ಅನಾರೋಗ್ಯದಿಂದ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಸಕಾಲದಲ್ಲಿ ನೆರವಿನ ಮೊತ್ತ ಬಿಡುಗಡೆ ಮಾಡದೇ ಕಿರುಕುಳ ನೀಡುತ್ತಿದ್ದಾರೆ ಎಂದು ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್‌ ಕಾಟಿಪಳ್ಳ ಇಎಸ್‌ಐ ಪ್ರಾದೇಶಿಕ ನಿರ್ದೇಶಕರಿಗೆ ದೂರು ಸಲ್ಲಿಸಿದ್ದಾರೆ.

ಕಾರ್ಮಿಕ ಕುಟುಂಬಗಳು ಇಎಸ್‌ಐ ಡಿಸ್ಪೆನ್ಸರಿ ಮತ್ತು ವಿಭಾಗೀಯ ಕಚೇರಿ ಸಿಬ್ಬಂದಿಯಿಂದ ಅನುಭವಿಸುತ್ತಿರುವ ಕಿರುಕುಳದ ಮಾಹಿತಿ ಆಧರಿಸಿ, ಖುದ್ದಾಗಿ ಅಲ್ಲಿಗೆ ಹೋಗಿ ಪರಸ್ಥಿತಿ ಅರಿಯಲಾಗಿದೆ. ಕ್ಯಾನ್ಸರ್‌ ಸೇರಿದಂತೆ ಗಂಭೀರ ಸ್ವರೂಪದ ಕಾಯಿಲೆಯಿಂದ ನರಳುತ್ತಿರುವ ರೋಗಿಗಳಿಗೆ ಔಷಧಿ ಖರೀದಿ ಹಣವನ್ನು ತಿಂಗಳುಗಟ್ಟಲೆ ಮರುಪಾವತಿ ಮಾಡದೇ ಸತಾಯಿಸಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ಕೇರಳದಲ್ಲಿ ದುಡಿಯುತ್ತಿರುವ ಮಂಗಳೂರಿನ ಸುನೈಫ್‌ ಎಂಬ ಯುವಕನ ತಂದೆ ಕ್ಯಾನ್ಸರ್‌ ರೋಗದಿಂದ ಬಳಲುತ್ತಿದ್ದಾರೆ. ರೋಗ ಉಲ್ಬಣಗೊಂಡಿದ್ದು, ದುಬಾರಿ ಬೆಲೆಯ ಔಷಧಿ ಸೇವಿಸುವಂತೆ ವೈದ್ಯರು ಸೂಚಿಸಿದ್ದಾರೆ. ಆರಂಭದಲ್ಲಿ ಈ ಮಾತ್ರೆಗಳ ವೆಚ್ಚ ಭರಿಸಲು ಇಎಸ್‌ಐ ಸಿಬ್ಬಂದಿ ನಿರಾಕರಿಸಿದ್ದರು. ಪ್ರಾದೇಶಿಕ ಕಚೇರಿಯ ಒಪ್ಪಿಗೆ ನಂತರ ಬಿಲ್‌ ಸ್ವೀಕರಿಸಿದ್ದರು. ಆಗಸ್ಟ್‌ 1ರಂದು ₹ 1.84 ಲಕ್ಷ ಮೊತ್ತದ ಬಿಲ್‌ ಸಲ್ಲಿಸಿದ್ದು, ಈವರೆಗೂ ಹಣ ಪಾವತಿಸಿಲ್ಲ. ಇದರಿಂದ ರೋಗಿಗೆ ಔಷಧಿ ಖರೀದಿಸಲಾಗದ ಸ್ಥಿತಿ ನಿರ್ಮಾಣವಾಗಿದೆ’ ಎಂದು ಉಲ್ಲೇಖಿಸಿದ್ದಾರೆ.

ADVERTISEMENT

ಸಕಾಲದಲ್ಲಿ ಹಣ ದೊರೆಯದ ಕಾರಣದಿಂದ ಸುನೈಫ್‌ ಅವರ ತಂದೆಗೆ ಎರಡೂವರೆ ತಿಂಗಳಿನಿಂದ ಔಷಧಿ ಕೊಡಿಸಲು ಸಾಧ್ಯವಾಗಿಲ್ಲ. ಪ್ರಾದೇಶಿಕ ಕಚೇರಿಯಿಂದ ತಮಗೆ ಸೂಚನೆ ಬಂದಿಲ್ಲ ಎಂದು ಇಎಸ್‌ಐ ವಿಭಾಗೀಯ ಕಚೇರಿ ಸಿಬ್ಬಂದಿ ಸತಾಯಿಸುತ್ತಿದ್ದಾರೆ. ಉಡಾಫೆಯ ಉತ್ತರ ನೀಡಿ ಕಾರ್ಮಿಕರ ಕುಟುಂಬದವರನ್ನು ಹಿಂಸಿಸುತ್ತಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.

ಬಸ್‌ ಚಾಲಕರಾಗಿದ್ದ ರಮೇಶ್ ಸಾಲ್ಯಾನ್‌ ಎಂಬುವವರು ₹ 15,000 ಮೊತ್ತದ ಔಷಧಿ ಬಿಲ್‌ ಪಡೆಯಲು ಒಂದೂವರೆ ವರ್ಷದಿಂದ ಇಎಸ್‌ಐ ಕಚೇರಿಗೆ ಬಂದು ಹೋಗುತ್ತಿದ್ದಾರೆ. ನಿತ್ಯವೂ ಇಂತಹ ಹತ್ತಾರು ಪ್ರಕರಣಗಳು ಇಎಸ್‌ಐ ಕಚೇರಿಯಲ್ಲಿ ವರದಿಯಾಗುತ್ತಿವೆ. ಕಾರ್ಮಿಕರ ಪಾಲಿನ ವಂತಿಗೆಯಿಂದ ಕೊಡಬೇಕಾದ ವಿಮಾ ಹಣವನ್ನೂ ಪಾವತಿಸದೇ ಅಮಾನವೀಯವಾಗಿ ವರ್ತಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಇಎಸ್‌ಐ ಪ್ರಾದೇಶಿಕ ಕಚೇರಿಯ ಹಿರಿಯ ಅಧಿಕಾರಿಗಳು ತಕ್ಷಣವೇ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬೇಕು. ಕಾರ್ಮಿಕರು ಮತ್ತು ‌‌ಅವರ ಕುಟುಂಬಗಳಿಗೆ ನ್ಯಾಯೋಚಿತವಾಗಿ ಸಿಗಬೇಕಾದ ಹಣವನ್ನು ತ್ವರಿತವಾಗಿ ಬಿಡುಗಡೆ ಮಾಡಬೇಕು. ಕಾರ್ಮಿಕರಿಗೆ ಕಿರುಕುಳ ನೀಡುತ್ತಿರುವ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.