ADVERTISEMENT

ಬಾರದ ಫಲಿತಾಂಶ; ವಿದ್ಯಾರ್ಥಿಗಳು ಅತಂತ್ರ

ಮಂಗಳೂರು ವಿವಿ: ಪರೀಕ್ಷಾ ಶುಲ್ಕ ಪಾವತಿಗೆ ಡಿ.17 ಕೊನೆಯ ದಿನ

ಸಂಧ್ಯಾ ಹೆಗಡೆ
Published 13 ಡಿಸೆಂಬರ್ 2022, 7:28 IST
Last Updated 13 ಡಿಸೆಂಬರ್ 2022, 7:28 IST
ಪ್ರೊ. ಪಿ.ಎಸ್. ಯಡಪಡಿತ್ತಾಯ
ಪ್ರೊ. ಪಿ.ಎಸ್. ಯಡಪಡಿತ್ತಾಯ   

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ತರಗತಿಗಳ ಪರೀಕ್ಷಾ ಶುಲ್ಕ ಪಾವತಿಗೆ ಇನ್ನು ಐದು ದಿನ ಮಾತ್ರ ಬಾಕಿ ಇದ್ದು, ಮೂರು ಮತ್ತು ಐದನೇ ಸೆಮಿಸ್ಟರ್‌ಗಳ ಕೆಲ ವಿದ್ಯಾರ್ಥಿಗಳು ಗೊಂದಲಕ್ಕೆ ಸಿಲುಕಿದ್ದಾರೆ. ಒಂದು ಮತ್ತು ಮೂರನೇ ಸೆಮಿಸ್ಟರ್‌ಗಳ ಫಲಿತಾಂಶ ಬಾರದಿರುವುದು ಈ ಗೊಂದಲಕ್ಕೆ ಕಾರಣವಾಗಿದೆ.

ಫೆಬ್ರುವರಿ 6ರಿಂದ ಆರಂಭವಾಗಲಿರುವ ಬಿ.ಎ, ಬಿ.ಎಸ್ಸಿ, ಬಿ.ಕಾಂ ಪದವಿ ಪರೀಕ್ಷೆಗಳ ಪರೀಕ್ಷಾ ಶುಲ್ಕ ಪಾವತಿಸುವಂತೆ ವಿಶ್ವವಿದ್ಯಾಲಯವು ಕಾಲೇಜುಗಳ ಮೂಲಕ ವಿದ್ಯಾರ್ಥಿಗಳಿಗೆ ಸೂಚನೆ ನೀಡಿದೆ. ದಂಡರಹಿತವಾಗಿ ಡಿ.17ರವರೆಗೆ ಶುಲ್ಕ ಪಾವತಿಗೆ ಗಡುವು ನೀಡಲಾಗಿದೆ. ದಿನಕ್ಕೆ ₹ 55ರಂತೆ ಡಿ.19ರಿಂದ 24ರವರೆಗೆ, ದಿನಕ್ಕೆ ₹ 110ರಂತೆ ಡಿ.26ರಿಂದ 31ರವರೆಗೆ ಶುಲ್ಕ ಪಾವತಿಗೆ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

‘ಪ್ರಸ್ತುತ ಮೂರನೇ ಸೆಮಿಸ್ಟರ್‌ ಓದುತ್ತಿರುವ ವಿದ್ಯಾರ್ಥಿಗಳ ಒಂದನೇ ಸೆಮಿಸ್ಟರ್ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿಲ್ಲ. ಅಂತೆಯೇ ಪ್ರಸ್ತುತ ಐದನೇ ಸೆಮಿಸ್ಟರ್ ಕಲಿಯುತ್ತಿರುವ ವಿದ್ಯಾರ್ಥಿಗಳ ಮೂರನೇ ಸೆಮಿಸ್ಟರ್ ಫಲಿತಾಂಶ ಕೂಡ ಪ್ರಕಟವಾಗಿಲ್ಲ. ಈಗ ಪರೀಕ್ಷಾ ಶುಲ್ಕ ಪಾವತಿಗೆ ಸೂಚನೆ ಬಂದಿದೆ. ಹಿಂದಿನ ಸೆಮಿಸ್ಟರ್‌ಗಳಲ್ಲಿ ಒಂದೊಮ್ಮೆ ಅನುತ್ತೀರ್ಣಗೊಂಡಿದ್ದರೆ ಅಂತಹ ವಿದ್ಯಾರ್ಥಿಗಳು ಏನು ಮಾಡಬೇಕು’ ಎಂದು ವಿದ್ಯಾರ್ಥಿಯೊಬ್ಬರು ಅಳಲು ತೋಡಿಕೊಂಡರು.

ADVERTISEMENT

‘ಕಲಿಕೆಯಲ್ಲಿ ಹಿಂದಿರುವ ಕೆಲವು ವಿದ್ಯಾರ್ಥಿಗಳಿಗೆ ವಿಷಯ ಬಾಕಿಯಾಗಿರುವ ಅನುಮಾನ ಇದೆ. ಫಲಿತಾಂಶವೇ ಘೋಷಣೆಯಾಗದೆ, ಬಾಕಿಯಾಗಬಹುದಾದ ವಿಷಯದ ಶುಲ್ಕ ಪಾವತಿಸಲು ಸಾಧ್ಯವಿಲ್ಲ. ಹಲವು ತಿಂಗಳುಗಳ ವಿಳಂಬದ ನಂತರ ಕಳೆದ ನವೆಂಬರ್‌ನಲ್ಲಿ ಮೊದಲ ಹಾಗೂ ಮೂರನೇ ಸೆಮಿಸ್ಟರ್ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆದಿದೆ. ಒಂದು ತಿಂಗಳು ಕಳೆದರೂ ವಿಶ್ವವಿದ್ಯಾಲಯ ಇನ್ನೂ ಫಲಿತಾಂಶ ಪ್ರಕಟಿಸಿಲ್ಲ. ಅನುತ್ತೀರ್ಣ ಆದವರಿಗೆ ಪುನಃ ಪರೀಕ್ಷೆ ಕಟ್ಟಲು ಆಗುತ್ತಿಲ್ಲ. ಶೀಘ್ರ ಫಲಿತಾಂಶ ಪ್ರಕಟಿಸದಿದ್ದರೆ, ದಂಡರಹಿತವಾಗಿ ಪರೀಕ್ಷಾ ಶುಲ್ಕ ಪಾವತಿಸುವ ದಿನಾಂಕದ ಗುಡುವು ಮುಗಿಯುತ್ತದೆ. ನಾವು ಮಾಡದ ತಪ್ಪಿಗೆ ದಂಡಸಹಿತವಾಗಿ ಪರೀಕ್ಷಾ ಶುಲ್ಕ ಪಾವತಿಸುವ ಸಂದರ್ಭ ಬಂದರೆ ಪ್ರತಿಭಟಿಸುವುದು ಅನಿವಾರ್ಯವಾಗುತ್ತದೆ’ ಎಂದು ವಿದ್ಯಾರ್ಥಿ ನಾಯಕರೊಬ್ಬರು ಪ್ರತಿಕ್ರಿಯಿಸಿದರು.

‘ಪರೀಕ್ಷೆ ಫಲಿತಾಂಶ ಪ್ರಕಟವಾಗದ ವಿದ್ಯಾರ್ಥಿಗಳು, ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಸಹ ನಿಗದಿಪಡಿಸಿದ ದಿನಾಂಕದ ಒಳಗೆ ಪರೀಕ್ಷಾ ಶುಲ್ಕ ಪಾವತಿಸಬೇಕು. ಯಾವುದೇ ಕಾರಣಕ್ಕೂ ಅಂತಹ ವಿದ್ಯಾರ್ಥಿಗಳಿಗೆ ಪಾವತಿ ದಿನಾಂಕ ಮುಂದೂಡಲಾಗದು ಎಂದು ಸುತ್ತೋಲೆಯಲ್ಲಿ ವಿಶ್ವವಿದ್ಯಾಲಯ ತಿಳಿಸಿದೆ. ವಿದ್ಯಾರ್ಥಿಗಳು ಶುಲ್ಕ ಪಾವತಿಸುತ್ತಿದ್ದು, ವಿದ್ಯಾರ್ಥಿಗಳು ಹಾಲಿ ಕಲಿಯುತ್ತಿರುವ ತರಗತಿಯ ಪರೀಕ್ಷಾ ಶುಲ್ಕವನ್ನಷ್ಟೇ ಪಾವತಿಸುತ್ತಿದ್ದಾರೆ’ ಎಂದು ಕಾಲೇಜಿನ ಪ್ರಾಂಶುಪಾಲರೊಬ್ಬರು ತಿಳಿಸಿದರು.

‘ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಎರಡು ಮತ್ತು ನಾಲ್ಕನೇ ಸೆಮಿಸ್ಟರ್‌ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಇನ್ನಷ್ಟೇ ಆಗಬೇಕಾಗಿದೆ. ಮೌಲ್ಯಮಾಪನಕ್ಕೆ ಹಾಜರಾಗುವಂತೆ ವಿಶ್ವವಿದ್ಯಾಲಯದಿಂದ ಡಿ.12ರಂದು ಸೂಚನೆ ಬಂದಿದೆ. ಕಾಲೇಜಿನಲ್ಲಿ ತರಗತಿಗಳು ನಡೆಯುತ್ತಿವೆ. ಯಾವ ಮಾದರಿಯಲ್ಲಿ ಮೌಲ್ಯಮಾಪನ ನಡೆಯಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ, ಈ ಬಾರಿ ಕೇಂದ್ರೀಕೃತ ವ್ಯವಸ್ಥೆಯ ಬದಲಾಗಿ ಎಂಟು ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯಲಿದೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.