ADVERTISEMENT

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮೂಲಮೃತ್ತಿಕೆ ವಿತರಣೆ, ಜಾತ್ರೆ ಆರಂಭ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2019, 11:56 IST
Last Updated 23 ನವೆಂಬರ್ 2019, 11:56 IST
   

ಸುಬ್ರಹ್ಮಣ್ಯ: ಶ್ರೀ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಪವಿತ್ರ ಮಹಾ ಪ್ರಸಾದ ಮೂಲಮೃತ್ತಿಕೆಯನ್ನು (ಹುತ್ತದ ಮಣ್ಣು) ಕಾರ್ತಿಕ ಬಹುಳ ಏಕಾದಶಿಯ ಶನಿವಾರ ತೆಗೆಯಲಾಯಿತು.

ದೇಗುಲದ ಪ್ರಧಾನ ಅರ್ಚಕರು ಶನಿವಾರ ಬೆಳಗ್ಗೆ ಗರ್ಭಗುಡಿಯಿಂದ ಮೂಲಮೃತ್ತಿಕೆಯನ್ನು ತೆಗೆದು ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಿಸಿದರು. ಹಲವು ಮಂದಿ ಭಕ್ತರು ಪ್ರಸಾದ ಸ್ವೀಕರಿಸಿದರು. ಮೂಲಸ್ಥಾನವಾದ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಗರ್ಭಗುಡಿ ಯಿಂದ ತೆಗೆಯುವ ಈ ಮೃತ್ತಿಕೆ ಅತ್ಯಂತ ಪವಿತ್ರ ಮಹಾಪ್ರಸಾದ ಎಂಬ ನಂಬಿಕೆ ಕ್ಷೇತ್ರದ ಭಕ್ತರದು.

ಮೂಲಮೃತ್ತಿಕೆಯನ್ನು ವರ್ಷದಲ್ಲಿ ಒಂದು ಬಾರಿ ತೆಗೆಯಲಾಗುತ್ತದೆ. ಈ ಪ್ರಸಾದವು ರೋಗ ನಿರೋಧಕ, ಸಂತಾನ ಕಾರಕ ಮತ್ತು ಚರ್ಮ ರೋಗಗಳ ಪರಿಹಾರಕ್ಕೆ ದಿವ್ಯ ಔಷಧವೆಂಬ ನಂಬಿಕೆಯಿದೆ. ಮೂಲಮೃತ್ತಿಕೆ ತೆಗೆಯುವ ಕಾರಣ ಶನಿವಾರ ಬೆಳಿಗ್ಗೆ ಭಕ್ತರಿಗೆ ತಡವಾಗಿ ದೇವರ ದರ್ಶನಕ್ಕೆ ಅವಕಾಶ ನೀಡಲಾಯಿತು.

ADVERTISEMENT

ಹಸುರು ಕಾಣಿಕೆ ಸ್ವೀಕಾರ: ಚಂಪಾಷಷ್ಠಿ ಪ್ರಯುಕ್ತ ಹಸುರು ಕಾಣಿಕೆ ಇದೇ 24ರಿಂದ ನಡೆಯಲಿದೆ ಸಾರ್ವಜನಿಕರಿಂದ ಹಸುರು ಕಾಣಿಕೆ ಸ್ವೀಕಾರ ಇದೇ 24ರಿಂದ ಡಿಸೆಂಬರ್‌ 9ರ ತನಕ ನಡೆಯಲಿದೆ. ಹೊರೆಕಾಣಿಕೆಯನ್ನು ದೇಗುಲ ಗೋಪುರ ಮುಂಭಾಗದಲ್ಲಿ ಬೆಳಗ್ಗೆ 9ರಿಂದ ಸಂಜೆ 5ರ ತನಕ ಸ್ವೀಕರಿಸಲಾಗುತ್ತದೆ ಎಂದು ದೇಗುಲದ ಪ್ರಕಟನೆ ತಿಳಿಸಿದೆ.

‌ಜಾತ್ರೆ ಆರಂಭ: ಕಾರ್ತಿಕ ಬಹುಳ ದ್ವಾದಶಿಯಂದು ದೇವಸ್ಥಾನದಲ್ಲಿ ಕೊಪ್ಪರಿಗೆ ಏರುವುದರೊಂದಿಗೆ ವಾರ್ಷಿಕ ಜಾತ್ರೆ ಆರಂಭವಾಗುವುದು. ಅದರಂತೆ ಭಾನುವಾರ ಕೊಪ್ಪರಿಗೆ ಏರುವ ಕಾರ್ಯ ನಡೆಯಲಿದೆ. ಇದರೊಂದಿಗೆ ಜಾತ್ರೋತ್ಸವ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.