ಮಂಗಳೂರು: ಸಪ್ತಕ ಬೆಂಗಳೂರು, ಚಿರಂತನ ಚಾರಿಟಬಲ್ ಟ್ರಸ್ಟ್ ಸುರತ್ಕಲ್, ರಾಮಕೃಷ್ಣ ಮಠದ
ವತಿಯಿಂದ ತಬಲಾ ವಾದಕ ಪಂಡಿತ್ ಓಂಕಾರ್ ಗುಲ್ವಾಡಿ ಅವರ 80ನೇ ಜನ್ಮ ಸಂವತ್ಸರದ ಆಚರಣೆಯ ಸಂಭ್ರಮ ಹಾಗೂ ಸಂಗೀತ ಸನ್ಮಾನ ಕಾರ್ಯಕ್ರಮವು ಏ.13ರಂದು ಸಂಜೆ 5ಕ್ಕೆ ನಗರದ ರಾಮಕೃಷ್ಣ ಮಠದ ವಿವೇಕಾನಂದ ಸಭಾಂಗಣದಲ್ಲಿ ನಡೆಯಲಿದೆ.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಚಿರಂತನ ಚಾರಿಟಬಲ್ ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕ ಭಾರವಿ ದೇರಾಜೆ, ಸಿತಾರ್ ವಾದಕ ಅಂಕುಶ್ ನಾಯಕ್ ಹಾಗೂ ಬಾನ್ಸುರಿ ಕಲಾವಿದ ಕಾರ್ತಿಕ್ ಭಟ್ ಅವರ ಸಿತಾರ್- ಬಾನ್ಸುರಿ ಜುಗಲ್‌ಬಂದಿ ಕಛೇರಿಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ತಬಲಾವಾದಕ ಹೇಮಂತ್ ಜೋಶಿ ಸಾಥ್ ನೀಡುವರು ಎಂದರು.
ಮಂಗಳೂರಿನ ಓಂಕಾರ್ ಗುಲ್ವಾಡಿ ಅವರಿಗೆ ಗೌರವಾರ್ಪಣೆ ಪಂ. ವೆಂಕಟೇಶ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ವಿವಿಧ ಸಂಸ್ಥೆಗಳು ಓಂಕಾರ್ ಗುಲ್ವಾಡಿ ಅವರನ್ನು ಸನ್ಮಾನಿಸಲಿವೆ ಎಂದರು.
ನಂತರ ವೆಂಕಟೇಶ ಕುಮಾರ್ ಅವರ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಲಿದೆ. ಓಂಕಾರ್ ಗುಲ್ವಾಡಿ ತಬಲಾ ಹಾಗೂ ಪಂ. ಸುಧೀರ್ ನಾಯಕ್ ಸಂವಾದಿನಿಯಲ್ಲಿ ಸಾಥ್ ನೀಡುವರು ಎಂದು ತಿಳಿಸಿದರು. ಧ್ಯಾನ್ ಸಂಗೀತ್ ಅಕಾಡೆಮಿ ಸ್ಥಾಪಕ ಅಮಿತ್ ಕುಮಾರ್ ಬೆಂಗ್ರೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.