ಮಂಗಳೂರು: ‘ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪದಿಂದ ಸಾವು ನೋವು, ಆಸ್ತಿ ಪಾಸ್ತಿ ನಷ್ಟ ಉಂಟಾಗದಂತೆ ತಡೆಯಲು ಕ್ರಮ ವಹಿಸುವುದು ನನ್ನ ಆದ್ಯತೆ’ ಎಂದು ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದರು.
ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಭಾರಿ ಮಳೆ, ಪ್ರವಾಹದಿಂದ ಆಗಿರುವ ಹಾನಿಯ ಮಾಹಿತಿ ಪಡೆದಿದ್ದೇನೆ. ಗುಡ್ಡಕಾಡು ಪ್ರದೇಶಗಳ ಜನವಸತಿಗಳಲ್ಲಿ ಸಂಭಾವ್ಯ ಅನಾಹುತ ತಡೆಯಲು ಹಾಗೂ ವಿಕೋಪದ ಸಂದರ್ಭದಲ್ಲಿ ತುರ್ತು ರಕ್ಷಣಾ ಕ್ರಮ ಕೈಗೊಳ್ಳಲು ಸಜ್ಜಾಗುವಂತೆ ಸೂಚಿಸಿದ್ದೇನೆ’ ಎಂದರು.
‘ವಿವಿಧ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಆನಂದ್ ನೇತೃತ್ವದಲ್ಲಿ ಈಗಾಗಲೇ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಿಡಿಒಗಳ ಮೇಲುಸ್ತುವಾರಿಯಲ್ಲಿ ವಿಕೋಪಗಳ ಕುರಿತು ನಿಗಾ ವಹಿಸಲಾಗುತ್ತಿದೆ. ನಾಲ್ಕೈದು ದಿನ ಮಳೆ ಕಡಿಮೆ ಇರಲಿದೆ ಎಂಬ ಮುನ್ಸೂಚನೆ ಇದೆ’ ಎಂದರು.
‘ಚಿಕ್ಕಮಗಳೂರಿನಲ್ಲಿ ಕರ್ತವ್ಯ ನಿರ್ವಹಿಸುವಾಗ ಈ ಜಿಲ್ಲೆಯ ಬಗ್ಗೆ ಕೇಳಿ ತಿಳಿದುಕೊಂಡಿದ್ದು ಬಿಟ್ಟರೆ, ಬೇರೆ ಒಡನಾಟ ಈ ಜಿಲ್ಲೆಯ ಬಗ್ಗೆ ನನಗೆ ಇಲ್ಲ. ಇಲ್ಲಿನ ಜನರ ಬಗ್ಗೆ ಸ್ನೇಹಿತರಿಂದ ಹೆಗ್ಗಳಿಕೆಯ ಮಾತುಗಳನ್ನು ಕೇಳಿದ್ದೇನೆ. ಉತ್ತಮ ಆಡಳಿತ ವ್ಯವಸ್ಥೆ ಇರುವ ಜಿಲ್ಲೆ ಇದು. ಜಿಲ್ಲೆಯ ಆಡಳಿತದ ಬಗ್ಗೆ ಅರಿತುಕೊಂಡು, ಅವಕಾಶಗಳನ್ನು ಗಮನಿಸಿ, ಅಗತ್ಯ ಕ್ರಮ ವಹಿಸುತ್ತೇನೆ’ ಎಂದರು.
‘ಜಿಲ್ಲಾಧಿಕಾರಿಯಾದ ಆರಂಭದಲ್ಲೇ ಇಲ್ಲಿನ ಜನರ ಪ್ರೀತಿ, ವಿಶ್ವಾಸ ಸಿಕ್ಕಿದೆ. ಇನ್ನು ಮುಂದೆಯೂ ಮುಲ್ಲೈ ಮುಗಿಲನ್ ಅವರಿಗೆ ನೀಡಿದಂತೆ ನನಗೂ ಜನ ಸಹಕಾರ ನೀಡಬೇಕು’ ಎಂದು ಕೋರಿದರು.
ಜಿಲ್ಲೆಯ ಕೋಮು ಸೂಕ್ಷ್ಮ ಸ್ಥಿತಿಯ ಕುರಿತು ಪ್ರತಿಕ್ರಿಯಿಸಿದ ಅವರು, ‘ಈಗಷ್ಟೇ ಕರ್ತವ್ಯ ಶುರು ಮಾಡಿದ್ದೇನೆ. ಆ ಬಗ್ಗೆ ಈಗ ಏನೂ ಹೇಳಲಾಗದು. ಪೊಲೀಸ್ ಕಮಿಷನರ್, ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಯವರು ಈ ಬಗ್ಗೆ ಅಗತ್ಯ ಕ್ರಮ ವಹಿಸಿದ್ದಾರೆ. ಕೆಲ ಸಮಯದ ಹಿಂದೆ ಜಿಲ್ಲೆಯಲ್ಲಿ ಇದ್ದ ಪರಿಸ್ಥಿತಿ ಈಗಿಲ್ಲ. ಶಾಂತಿ ಕಾಪಾಡಿದರೆ ಜಿಲ್ಲೆಯ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣವಾಗಲಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಚಿತ್ರದುರ್ಗ ಜಿಲ್ಲೆಯ ದರ್ಶನ್ ಎಚ್.ವಿ. ಅವರು 2016ರ ವೃಂದದ ಐಎಎಸ್ ಅಧಿಕಾರಿ. ರಾಯಚೂರಿನಲ್ಲಿ ಪ್ರೊಬೇಷನರಿ ಅವಧಿ ಪೂರೈಸಿರುವ ಅವರು, ಸಾಗರದಲ್ಲಿ ಉಪ ವಿಭಾಗಾಧಿಕಾರಿ, ಕೋಲಾರ ಮತ್ತು ಬೆಳಗಾವಿಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ, ತುಮಕೂರು ನಗರಸಭೆ ಆಯುಕ್ತರಾಗಿ, ಬೆಂಗಳೂರಿನಲ್ಲಿ ಐಟಿಬಿಟಿ ಇಲಾಖೆ ನಿರ್ದೇಶಕನಾಗಿ, ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
‘ಅಕ್ರಮ ಮರಳುಗಾರಿಕೆಗೆ ಇಲ್ಲ ಅವಕಾಶ’
‘ಅಕ್ರಮ ಮರಳುಗಾರಿಕೆ ತಡೆಯಬೇಕೆಂಬ ಕಾಲಜಿ ನನಗೂ ಇದೆ. ಸಾಗರದಲ್ಲಿ ಉಪವಿಭಾಗಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ಮರಳುಗಾರಿಕೆ ಸಮಸ್ಯೆ ಬಗ್ಗೆ ಅರಿವಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮವಹಿಸುತ್ತೇನೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.