ADVERTISEMENT

ಮಂಗಳೂರು ವಿಶ್ವವಿದ್ಯಾನಿಲಯ: ತರಗತಿ ಆರಂಭ ಈ ಬಾರಿಯೂ ವಿಳಂಬ?

ಪದವಿ ಕಾಲೇಜುಗಳಲ್ಲಿ ಬಿ.ಕಾಂ. ಬಿಸಿಎ ಕೋರ್ಸ್‌ಗಳಿಗೆ ಬಹು ಬೇಡಿಕೆ

​ಪ್ರಜಾವಾಣಿ ವಾರ್ತೆ
Published 27 ಮೇ 2025, 6:36 IST
Last Updated 27 ಮೇ 2025, 6:36 IST
ಮಂಗಳೂರು ವಿಶ್ವವಿದ್ಯಾಲಯ
ಮಂಗಳೂರು ವಿಶ್ವವಿದ್ಯಾಲಯ   

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಅಡಿಯಲ್ಲಿ ಬರುವ ಪದವಿ ಕಾಲೇಜುಗಳಲ್ಲಿ ಪ್ರಥಮ ಸೆಮಿಸ್ಟರ್‌ನ ತರಗತಿಗಳು ಆರಂಭವಾಗಲು ಇನ್ನೂ ಎರಡು ತಿಂಗಳು ವಿಳಂಬವಾಗುವ ಸಾಧ್ಯತೆ ದಟ್ಟವಾಗಿವೆ.

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡು ಒಂದೂವರೆ ತಿಂಗಳು ಕಳೆದಿದೆ. ಪದವಿ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಸ್ವಾಯತ್ತ ಕಾಲೇಜುಗಳು ಜೂನ್ ವೇಳೆಗೆ ತರಗತಿ ಪ್ರಾರಂಭಿಸಲು ಸಿದ್ಧತೆ ನಡೆಸಿವೆ. ಆದರೆ, ವಿಶ್ವವಿದ್ಯಾನಿಲಯದ ಸಂಯೋಜಿತ ಕಾಲೇಜುಗಳು ಹಾಗೂ ಘಟಕ ಕಾಲೇಜುಗಳಲ್ಲಿ ಇನ್ನೂ ಸೆಮಿಸ್ಟರ್‌ ತರಗತಿಗಳು ನಡೆಯುತ್ತಿದ್ದು, ಜೂನ್ 2ಕ್ಕೆ ಸೆಮಿಸ್ಟರ್ ಮುಕ್ತಾಯವಾಗಲಿದೆ.

‘2, 4 ಮತ್ತು 6ನೇ ಸೆಮಿಸ್ಟರ್ ಪರೀಕ್ಷೆಗಳು ಜೂನ್ 9ರಿಂದ ಆರಂಭವಾಗಿ, ಜುಲೈ 15ಕ್ಕೆ ಮುಕ್ತಾಯಗೊಳ್ಳುತ್ತವೆ. ನಂತರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯುತ್ತದೆ. ಪ್ರಾಧ್ಯಾಪಕರು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದರಿಂದ ತರಗತಿ ಪ್ರಾರಂಭಿಸಲು ಸಾಧ್ಯವಾಗದು. ಅಲ್ಲದೆ, ಆ ಅವಧಿಯೊಳಗೆ ಅತಿಥಿ ಉಪನ್ಯಾಸಕರ ನೇಮಕ ಪೂರ್ಣಗೊಂಡಿರುವುದಿಲ್ಲ. ಹೀಗಾಗಿ, ಜುಲೈ ಅಂತ್ಯದೊಳಗೆ ಪದವಿಯ ಪ್ರಥಮ ಸೆಮಿಸ್ಟರ್ ಪ್ರಾರಂಭವಾಗುವುದು ಅನುಮಾನ’ ಎಂದು ಪ್ರಾಧ್ಯಾಪಕರೊಬ್ಬರು ತಿಳಿಸಿದರು.

ADVERTISEMENT

‘ಕೋವಿಡ್–19 ಸಾಂಕ್ರಾಮಿಕದ ಸಂದರ್ಭದಲ್ಲಿ ಆಗಿರುವ ಶೈಕ್ಷಣಿಕ ವೇಳಾಪಟ್ಟಿ ಸರಿದೂಗಿಸಲು ಪ್ರಯತ್ನಗಳು ನಡೆದರೂ, ಪ್ರತಿ ಸೆಮಿಸ್ಟರ್‌ ಕನಿಷ್ಠ 90 ದಿನ ನಡೆಯಬೇಕೆಂಬ ನಿಯಮ ಇರುವುದರಿಂದ ಹಿಂದಿನ ಕ್ರಮಕ್ಕೆ ತರಲು ಸಾಧ್ಯವಾಗಿಲ್ಲ. ಪ್ರತಿವರ್ಷ 10 ದಿನಗಳಷ್ಟು ಮುಂಚಿತವಾಗಿ ಮಾತ್ರ ತರಗತಿಗಳು ಪ್ರಾರಂಭಿಸಲು ಸಾಧ್ಯವಾಗುತ್ತಿದೆ. ಮೊದಲ ಸೆಮಿಸ್ಟರ್ ತರಗತಿ ಆರಂಭಿಸಿದರೆ, ಉಳಿದೆರಡು ಸೆಮಿಸ್ಟರ್‌ಗಳ ಪರೀಕ್ಷೆ, ಮೌಲ್ಯಮಾಪನ ಎಲ್ಲವೂ ವ್ಯತ್ಯಾಸಗೊಳ್ಳುತ್ತದೆ. ಕಾಲೇಜುಗಳಲ್ಲಿ ಕೊಠಡಿಗಳ ಕೊರತೆಯೂ ಆಗಬಹುದು. ಹಾಗಾಗಿ, ವ್ಯವಸ್ಥೆ ಹಳಿಗೆ ತರಲು ಇನ್ನೂ ಸಮಯ ಬೇಕಾಗಬಹುದು’ ಎಂದು ಅವರು ಅಭಿಪ್ರಾಯಪಟ್ಟರು.

ಜುಲೈ ಮೂರನೇ ವಾರದಲ್ಲಿ ಮೊದಲ ಸೆಮಿಸ್ಟರ್ ತರಗತಿಗಳನ್ನು ಪ್ರಾರಂಭಿಸಲು ಸಿದ್ಧತೆ ನಡೆಸಲಾಗಿದೆ.
ರಾಜು ಮೊಗವೀರ, ವಿವಿ ಕುಲಸಚಿವ

ಬಿ.ಕಾಂ, ಬಿಸಿಎಗೆ ಬೇಡಿಕೆ: ಹಿಂದಿನ ವರ್ಷಗಳಂತೆಯೇ ಬಿ.ಕಾಂ. ಮತ್ತು ಬಿಸಿಎ ಕೋರ್ಸ್‌ಗಳು ಹೆಚ್ಚು ಬೇಡಿಕೆಯಲ್ಲಿವೆ. ಬಿ.ಎ ಕೋರ್ಸ್‌ಗೆ ಪ್ರವೇಶ ಸ್ವಲ್ಪ ಕಡಿಮೆ ಇದೆ. ದ್ವಿತೀಯ ಪಿಯುಸಿಗೆ ಮೂರು ಪರೀಕ್ಷೆಗಳು ಇರುವುದರಿಂದ ಎರಡನೇ ಪರೀಕ್ಷೆಯ ಫಲಿತಾಂಶ ಸದ್ಯ ಪ್ರಕಟವಾಗಿದೆ. ಮೂರನೇ ಪರೀಕ್ಷೆ ನಡೆಯಬೇಕಾಗಿದೆ. ಅಲ್ಲದೆ, ಸಿಇಟಿ ಫಲಿತಾಂಶ ಪರಿಶೀಲಿಸಿ ಬಿ.ಎಸ್ಸಿ.ಗೆ ಪ್ರವೇಶ ಪಡೆಯುವವರು ಇದ್ದಾರೆ. ಹೀಗಾಗಿ, ಇನ್ನಷ್ಟು ವಿದ್ಯಾರ್ಥಿಗಳ ಪ್ರವೇಶ ನಿರೀಕ್ಷಿಸುತ್ತಿದ್ದೇವೆ ಎಂದು ಡಾ. ಪಿ. ದಯಾನಂದ ಪೈ – ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ. ಜಯಕರ ಭಂಡಾರಿ ಹೇಳಿದರು.

‘ಶಿಕ್ಷಣ ವ್ಯವಸ್ಥೆಯನ್ನು ಕೋವಿಡ್ ಪೂರ್ವದ ಹಂತಕ್ಕೆ ತರಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗಿದೆ. ಕಳೆದ ವರ್ಷ ಆಗಸ್ಟ್ 12ರಂದು ಮೊದಲ ಸೆಮಿಸ್ಟರ್ ಪ್ರಾರಂಭಿಸಲಾಗಿತ್ತು. ಈ ಬಾರಿ ಜುಲೈ ಕೊನೆಯ ವಾರವೇ ಪ್ರಾರಂಭಿಸಲು ಯೋಚಿಸಲಾಗಿದೆ’ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ಕುಲಸಚಿವ ರಾಜು ಮೊಗವೀರ ತಿಳಿಸಿದರು.

ವಿವಿ ಕಾಲೇಜಿನಲ್ಲಿ ಬಿಸಿಎ

ಹಂಪನಕಟ್ಟೆಯ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಈ ವರ್ಷದಿಂದ ಬಿಸಿಎ ಕೋರ್ಸ್ ಪ್ರಾರಂಭಿಸಲಾಗಿದೆ. 120 ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಅವಕಾಶ ಇದೆ. ಶೇ 75ಕ್ಕೂ ಹೆಚ್ಚು ಸೀಟ್‌ಗಳು ಭರ್ತಿಯಾಗಿವೆ. ಬಿ.ಎ ಬಿ.ಕಾಂ ಬಿಸಿಎ ಎಲ್ಲ ಕೋರ್ಸ್‌ಗಳಿಗೂ ಬೇಡಿಕೆ ಇದೆ. ಪ್ರವೇಶ ಪ್ರಕ್ರಿಯೆಗೆ ಜೂನ್ ತಿಂಗಳ ಕೊನೆಯವರೆಗೂ ಅವಕಾಶ ಇದೆ. ಪ್ರತಿ ವಿಷಯಕ್ಕೆ ಕನಿಷ್ಠ 30 ವಿದ್ಯಾರ್ಥಿಗಳು ಇರಬೇಕು ಎಂದು ವಿಶ್ವವಿದ್ಯಾಲಯದ ಸೂಚನೆ ಬಂದಿದೆ. ಈ ಸೂಚನೆಯನ್ನು ಪಾಲಿಸಲಾಗುವುದು ಎಂದು ಕಾಲೇಜಿನ ಪ್ರಾಚಾರ್ಯ ಗಣಪತಿ ಗೌಡ ತಿಳಿಸಿದರು. 900ಕ್ಕೂ ಹೆಚ್ಚು ಅರ್ಜಿಗಳನ್ನು ವಿದ್ಯಾರ್ಥಿಗಳು ತೆಗೆದುಕೊಂಡು ಹೋಗಿದ್ದು ಈಗಾಗಲೇ 500ರಷ್ಟು ಅರ್ಜಿಗಳು ಭರ್ತಿಯಾಗಿ ಬಂದಿವೆ. ವಿವಿ ಕಾಲೇಜಿನಲ್ಲಿ ಎಲ್ಲ ಕೋರ್ಸ್‌ಗಳಿಂದ ಒಟ್ಟು 720 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶವಿದೆ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.