ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ಕೇಂದ್ರ ಗೃಹ ಸಚಿವಾಲಯವು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸಿರುವುದು ದಕ್ಷಿಣ ಕನ್ನಡದಲ್ಲಿ ದೇಶ ವಿರೋಧಿ ಶಕ್ತಿಗಳನ್ನು ಬೇರುಸಹಿತ ಕಿತ್ತೊಗೆಯುವ ಮೊದಲ ಹೆಜ್ಜೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಅಭಿಪ್ರಾಯಪಟ್ಟಿದ್ದಾರೆ.
‘ಬಜಪೆಯ ನಡುರಸ್ತೆಯಲ್ಲೇ ಸುಹಾಸ್ ಶೆಟ್ಟಿ ದುಷ್ಕರ್ಮಿಗಳಿಂದ ಹತ್ಯೆಯಾದ ಮರುದಿನವೇ (ಮೇ 2ರಂದು), ಈ ಪ್ರಕರಣದ ತನಿಖೆಯನ್ನು ತುರ್ತಾಗಿ ಎನ್‌ಐಎ ಸಂಸ್ಥೆಗೆ ವಹಿಸುವಂತೆ ಕೋರಿ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದೆ. ಈ ಪ್ರಕರಣ ಅತ್ಯಂತ ಗಂಭೀರವಾಗಿದ್ದು, ಇದರ ಹಿಂದೆ ಇಸ್ಲಾಮಿಕ್ ಮೂಲಭೂತವಾದಿಗಳ ಕೈವಾಡದ ಬಗ್ಗೆ ಬಲವಾದ ಶಂಕೆಯಿದೆ. ಕೃತ್ಯ ನಡೆಸಿದ ಅಪರಾಧಿಗಳು ಮಾತ್ರವಲ್ಲದೆ ಅವರಿಗೆ ಬೆಂಬಲ ನೀಡಿದ ಮತ್ತು ಹಣಕಾಸು ನೆರವು ನೀಡಿದ ಎಲ್ಲರ ಮೇಲೂ ಕ್ರಮವಾಗಬೇಕು ಎಂದು ಒತ್ತಾಯಿಸಿದ್ದೆ. ಈ ಹತ್ಯೆಯ ಗಂಭೀರತೆ ಹಾಗೂ ಅದರ ಹಿಂದೆ ನಿಷೇಧಿತ ಪಿಎಫ್‌ಐ ಸಂಘಟನೆ ಕೈವಾಡವಿರುವ ಅನುಮಾನದ ಮೇಲೆ ಇಡೀ ಪ್ರಕರಣವನ್ನು ಈಗ ಕೇಂದ್ರ ತನಿಖಾ ಸಂಸ್ಥೆಯಾದ ಎನ್‌ಐಎಗೆ ವಹಿಸಲಾಗಿದ್ದು, ಇದಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಗೃಹ ಸಚಿವಾಲಯಕ್ಕೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ತಿಳಿಸಿದ್ದಾರೆ.
‘ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಿದ್ದರಿಂದ ಪಿಎಫ್‌ಐ ಸಂಘಟನೆಯ ಹಲವರನ್ನು ಜೈಲಿಗಟ್ಟಲು ಸಾಧ್ಯವಾಗಿದೆ. ಆ ಕೊಲೆಗೆ ಸಂಚು ರೂಪಿಸಿ ಹಣಕಾಸು ಒದಗಿಸಿರುವ ವಿಚಾರ ತನಿಖೆಯಿಂದ ಗೊತ್ತಾಗಿದೆ. ಸುಹಾಸ್ ಶೆಟ್ಟಿ ಹತ್ಯೆ ಹಿಂದಿನ ಜಾಲ ಹಾಗೂ ಇದಕ್ಕೆ ಆರ್ಥಿಕವಾಗಿ ನೆರವು ಮಾಡಿದ್ದು ಯಾರು ಎಂಬುದು ಬಯಲಾಗಲಿದೆ. ಮೂಲಭೂತವಾದಿ, ರಾಷ್ಟ್ರ ವಿರೋಧಿ ಮತ್ತು ‘ಜಿಹಾದಿ’ ಮಾನಸಿಕತೆಯ ಶಕ್ತಿಗಳು ಪಿಎಫ್‌ಐನಂತಹ ನಿಷೇಧಿತ ಸಂಘಟನೆಗಳ ಜತೆ ಸ್ಲೀಪರ್ ಸೆಲ್‌ನಂತೆ ಹೇಗೆ ಕೆಲಸ ಮಾಡುತ್ತಿವೆ ಎನ್ನುವುದು ಬೆಳಕಿಗೆ ಬರಲಿದೆ’ ಎಂದು ತಿಳಿಸಿದ್ದಾರೆ.
‘ಸುಹಾಸ್ ಶೆಟ್ಟಿ ಹತ್ಯೆಯ ತನಿಖೆಯನ್ನು ಎನ್‌ಐಎಗೆ ವಹಿಸುವಂತೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ನೇತೃತ್ವದ ನಿಯೋಗ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೆ ಮನವಿ ಸಲ್ಲಿಸಿತ್ತು. ಒಂದು ಸಮುದಾಯವನ್ನು ಓಲೈಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ನಿಷೇಧಿತ ಪಿಎಫ್‌ಐ ಸಂಘಟನೆಯ ಮುಂದುವರಿದ ಭಾಗವಾಗಿರುವ ಎಸ್‌ಡಿಪಿಐ ಜೊತೆ ರಾಜಕೀಯ ಹೊಂದಾಣಿಕೆ ಮಾಡಿಕೊಂಡಿರುವಾಗ ಸುಹಾಸ್ ಶೆಟ್ಟಿ ಹತ್ಯೆಯನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸುವ ವಿಶ್ವಾಸ ಇಲ್ಲ. ಹೀಗಾಗಿ ನಮ್ಮ ಪಕ್ಷ ಈ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸುವುದಕ್ಕೆ ಪಟ್ಟು ಹಿಡಿದಿತ್ತು’ ಎಂದು ಕ್ಯಾ.ಚೌಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.