ADVERTISEMENT

ಮೀನಿನ ಉತ್ಪನ್ನ ಪೂರೈಕೆಗೆ ಒತ್ತು ನೀಡಿ: ಕೋಟ ಶ್ರೀನಿವಾಸ ಪೂಜಾರಿ

ಮೀನಿನ ಚಿಪ್ಸ್‌ ವಿತಕರಿಗೆ ಸಚಿವ ಕೋಟ ಸಲಹೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2020, 3:21 IST
Last Updated 7 ಅಕ್ಟೋಬರ್ 2020, 3:21 IST
ಮತ್ಸ್ಯಬಂಧನ ಕಂಪನಿ ಜೊತೆ ಮಾಡಿಕೊಂಡ ಒಡಂಬಡಿಕೆ ಪ್ರತಿಯನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಸ್ತಾಂತರಿಸಿದರು
ಮತ್ಸ್ಯಬಂಧನ ಕಂಪನಿ ಜೊತೆ ಮಾಡಿಕೊಂಡ ಒಡಂಬಡಿಕೆ ಪ್ರತಿಯನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಸ್ತಾಂತರಿಸಿದರು   

ಮಂಗಳೂರು: ಪೂರ್ವಾಪರ ಮಾಹಿತಿ ಪಡೆದು, ವ್ಯಾಪಾರ ಮಾಡುವ ಸಾಮರ್ಥ್ಯವುಳ್ಳ ಸಮರ್ಥ ಮೀನಿನ ಉತ್ಪನ್ನಗಳ ವಿತರಕರನ್ನು ಆಯ್ಕೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮೀನಿನ ಚಿಪ್ಸ್ ಉತ್ಪಾದಕರು ಹಾಗೂ ವಿತರಕರ ಸಭೆಯಲ್ಲಿ ಅವರು ಮಾತನಾಡಿದರು.

ಮೀನುಗಾರಿಕೆ ಉದ್ಯಮದಲ್ಲಿ ತೊಡಗಿಸಿಕೊಳ್ಳುವ ಸಣ್ಣ ಉದ್ದಿಮೆದಾರರಿಗೆ ಮೀನು ಮತ್ತು ಮೀನಿನ ಮೌಲ್ಯವರ್ಧಿತ ಉತ್ಪನ್ನಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು. ಈ ನಿಟ್ಟಿನಲ್ಲಿ ಮೀನಿನ ಚಿಪ್ಸ್ ಮತ್ತು ಮೀನಿನ ಮಸಾಲೆ ಪದಾರ್ಥಗಳನ್ನು ಮುಖ್ಯಮಂತ್ರಿ ಈಗಾಗಲೇ ಬಿಡುಗಡೆಗೊಳಿಸಿದ್ದು, ಮೀನಿನ ಉತ್ಪನ್ನ ಪೂರೈಕೆ ಹಾಗೂ ವಿತರಣೆಗೆ ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ADVERTISEMENT

ಜಿಲ್ಲೆಯಲ್ಲಿ ಮೀನಿನ ಚಿಪ್ಸ್ ಉತ್ಪಾದನೆಯನ್ನು ವ್ಯಾಪಕವಾಗಿ ವಿಸ್ತರಿಸುವಲ್ಲಿ ವಿತರಕರ ಪಾತ್ರ ಮಹತ್ತರವಾಗಿದೆ. ಪರಿಣತಿಯುಳ್ಳ, ಷರತ್ತು ಮತ್ತು ನಿಬಂಧನೆಗಳನ್ನು ಪಾಲಿಸುವಂತಹ ಅರ್ಹ ವ್ಯಕ್ತಿಯನ್ನು ವಿತರಕರನ್ನಾಗಿ ನೇಮಿಸಿಕೊಳ್ಳಬೇಕು ಎಂದು ರಾಜ್ಯ ಮೀನುಗಾರಿಕೆ ಸಹಕಾರಿ ಮಹಾಮಂಡಳಿಗೆ ಸೂಚಿಸಿದರು.

ಮತ್ಸ್ಯದರ್ಶಿನಿ ಮಳಿಗೆಗಳಿಗೆ ಮೀನು ಹಾಗೂ ಮೀನಿನ ಉತ್ಪನ್ನಗಳನ್ನು ಸರಬರಾಜು ಮಾಡುವುದರ ಬಗ್ಗೆ ಮತ್ಸ್ಯಬಂಧನ ಕಂಪನಿ ಜೊತೆ ಒಡಂಬಡಿಕೆ ಮಾಡಿಕೊಂಡ ಪ್ರತಿಯನ್ನು ಹಸ್ತಾಂತರಿಸಲಾಯಿತು. ಇದೇ ಸಂದರ್ಭದಲ್ಲಿ ಕರಾವಳಿ ಪಡೆಯ ಮೂಲಕ ಮೀನುಗಾರರ ಚಲವಲನ ದಾಖಲಿಸುವ ಮೊಬೈಲ್ ಆ್ಯಪ್‌ ಅನ್ನು ಸಚಿವರು ಬಿಡುಗಡೆಗೊಳಿಸಿದರು.

ರಾಜ್ಯ ಮೀನುಗಾರಿಕೆ ಸಹಕಾರ ಮಹಾಮಂಡಳಿ ವ್ಯವಸ್ಥಾಪಕ ನಿರ್ದೇಶಕ ಎಂ.ಎಲ್. ದೊಡ್ಡಮನಿ, ಮಹಾಮಂಡಳಿಯ ಮಹಾಪ್ರಬಂಧಕ ಪಿ.ಎಂ. ಮುದ್ದಣ್ಣ, ಮೀನುಗಾರಿಕಾ ಉಪನಿರ್ದೇಶಕ ಪಾರ್ಶ್ವನಾಥ್ ಇದ್ದರು.

ಈಗಾಗಲೇ ಬೆಂಗಳೂರಿನಲ್ಲಿ ಮೀನಿನ ಚಿಪ್ಸ್ ಉತ್ಪಾದನೆಯಾಗುತ್ತಿದ್ದು, ಇನ್ನು ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಮಾರುಕಟ್ಟೆಗಳಲ್ಲಿ ಈ ಉತ್ಪನ್ನ ದೊರೆಯಲಿದೆ.
ಕೋಟ ಶ್ರೀನಿವಾಸ ಪೂಜಾರಿ
ಮೀನುಗಾರಿಕೆ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.