ADVERTISEMENT

ಸಬಲೀಕರಣದ ಪ್ರತೀಕ ಮೀನುಗಾರ ಮಹಿಳೆಯರು

ಮೀನುಗಾರ ಮಹಿಳೆಯರ ಸಮಾವೇಶದಲ್ಲಿ ಸ್ಪೀಕರ್ ಯು.ಟಿ.ಖಾದರ್

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2025, 7:51 IST
Last Updated 12 ಏಪ್ರಿಲ್ 2025, 7:51 IST
ಮಂಗಳೂರಿನಲ್ಲಿ ನಡೆದ ಮೀನುಗಾರ ಮಹಿಳೆಯರ ಸಮಾವೇಶದಲ್ಲಿ ಹಿರಿಯ ಮೀನು ವ್ಯಾಪಾರಿ ಮಹಿಳೆಯರನ್ನು ಸನ್ಮಾನಿಸಲಾಯಿತು
ಮಂಗಳೂರಿನಲ್ಲಿ ನಡೆದ ಮೀನುಗಾರ ಮಹಿಳೆಯರ ಸಮಾವೇಶದಲ್ಲಿ ಹಿರಿಯ ಮೀನು ವ್ಯಾಪಾರಿ ಮಹಿಳೆಯರನ್ನು ಸನ್ಮಾನಿಸಲಾಯಿತು   

ಮಂಗಳೂರು: ‘ಮಹಿಳಾ ಸಬಲೀಕರಣಕ್ಕೆ ಸರ್ಕಾರಗಳು ಈಚಿನ ವರ್ಷಗಳಲ್ಲಿ ಹಲವಾರು ಯೋಜನೆ ಜಾರಿಗೊಳಿಸಿವೆ. ಆದರೆ, ಮೀನುಗಾರರ ಮಹಿಳೆಯರು ನೂರಾರು ವರ್ಷಗಳ ಹಿಂದೆಯೇ ಮಹಿಳಾ ಸಬಲೀಕರಣವನ್ನು ಸಾಕ್ಷೀಕರಿಸಿದವರು’ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಹೇಳಿದರು.

ಮಂಗಳೂರು ಮೀನುಗಾರ ಮಹಿಳೆಯರ ಮೀನು ಮಾರಾಟ ಮಂಡಳಿ ವತಿಯಿಂದ ಶುಕ್ರವಾರ ಇಲ್ಲಿ ಆಯೋಜಿಸಿದ್ದ ಮೀನುಗಾರ ಮಹಿಳೆಯರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಮೀನುಗಾರ ಮಹಿಳೆಯರಿಗೆ ಮೀನು ಮಾರುವವರು ಎನ್ನುವುದು ಸೂಕ್ತವಲ್ಲ, ಅವರು ಜಗತ್ತಿಗೆ ಸ್ವಾಭಿಮಾನದ ಬದುಕಿನ ಪಾಠ ಬೋಧಿಸಿದ ವನಿತೆಯರು. ಬಹುವರ್ಷಗಳ ಹಿಂದೆ ಸೌಲಭ್ಯಗಳಿಲ್ಲದ ಸಂಕಷ್ಟಗಳನ್ನು ಲೆಕ್ಕಿಸದೆ, ಶ್ರಮಜೀವಿಗಳಾಗಿ ದುಡಿದು, ಮಕ್ಕಳಿಗೆ ಶಿಕ್ಷಣ ನೀಡಿದವರು ಮೀನುಗಾರ ಮಹಿಳೆಯರು. ಕೃಷಿಕರ ಜೊತೆ ಮೀನುಗಾರರ ಸಹ ಅನ್ನದಾತರು ಎಂದರು.

ADVERTISEMENT

ಮೀನುಗಾರರು ತಮ್ಮ ಮಕ್ಕಳ ಶಿಕ್ಷಣಕ್ಕೆ ಮಹತ್ವ ಕೊಡಬೇಕು. ಎಲ್ಲ ಕಷ್ಟಗಳನ್ನು ದೂರ ಮಾಡುವ ಶಕ್ತಿ ಶಿಕ್ಷಣಕ್ಕೆ ಇದೆ. ಶಿಕ್ಷಣ ದೊರೆತಾಗ ಸಮಸ್ಯೆಗಳು ಹಂತ ಹಂತವಾಗಿ ಬಗೆಹರಿಯುತ್ತವೆ ಎಂದರು.

ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ‘ಸ್ಟೇಟ್‌ಬ್ಯಾಂಕ್‌ನಲ್ಲಿರುವ ಮೀನು ಮಾರುಕಟ್ಟೆ ತೆರವಾಗುವ ಆತಂಕವನ್ನು ಕೆಲವರು ವ್ಯಕ್ತಪಡಿಸಿದ್ದಾರೆ. ಈ ಆತಂಕ ಬೇಡ. ಮೀನುಗಾರ ಮಹಿಳೆಯರು ಈ ಸಂಬಂಧ ಯಾವುದೇ ನಿರ್ಣಯ ಕೈಗೊಂಡರೂ ಅದಕ್ಕೆ ಬೆಂಬಲ ನೀಡಲಾಗುವುದು’ ಎಂದರು.

‘ಸಮುದ್ರ ಕಳೆ ಬಗ್ಗೆ ಮೀನುಗಾರರು ಆಸಕ್ತಿ ತೋರಿದಲ್ಲಿ, ಈ ಬಗ್ಗೆ ಸಾಧ್ಯತೆ ಪರಿಶೀಲಿಸಿ ಅಧ್ಯಯನ ನಡೆಸಲು ಕೇಂದ್ರ ಸರ್ಕಾರವನ್ನು ವಿನಂತಿಸಲಾಗುವುದು’ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.  

ಶಾಸಕ ಯಶ್‌ಪಾಲ್ ಸುವರ್ಣ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಹಿಂದೂ ಯುವಸೇನೆ ಕೇಂದ್ರೀಯ ಮಂಡಳಿ ಅಧ್ಯಕ್ಷ ಯಶೋಧರ ಚೌಟ, ಪ್ರಮುಖರಾದ ಮೋಹನ ಬೆಂಗ್ರೆ, ಚೇತನ್ ಬೆಂಗ್ರೆ, ಭಾಸ್ಕರಚಂದ್ರ ಶೆಟ್ಟಿ, ಮನೋಜ್‌ಕುಮಾರ್ ಕೋಡಿಕಲ್, ದಿವಾಕರ ಪಾಂಡೇಶ್ವರ, ಗಣೇಶ್ ಶೆಟ್ಟಿ, ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ನಿರ್ದೇಶಕಿ ವಾಣಿ ಜಿ. ಸಾಲಿಯಾನ್, ಸ್ಟೇಟ್‌ಬ್ಯಾಂಕ್‌ನ ಮೀನುಗಾರ ಮಹಿಳೆಯರ ಮೀನು ಮಾರಾಟ ಮಂಡಳಿ ಅಧ್ಯಕ್ಷೆ ಬೇಬಿ ಎಸ್. ಕುಂದರ್ ಹಾಜರಿದ್ದರು. ತೃಪ್ತಿ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.