ADVERTISEMENT

ತ್ರಿಸೂತ್ರದಿಂದ ಕೋವಿಡ್ ನಿಯಂತ್ರಣ ಸಾಧ್ಯ: ಡಾ. ರಾಮಚಂದ್ರ ಬಾಯರಿ

ಮಾಧ್ಯಮ ಸಂವಾದ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2021, 2:27 IST
Last Updated 24 ಮಾರ್ಚ್ 2021, 2:27 IST
ಮಂಗಳೂರಿನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯರಿ ಅವರನ್ನು ಸನ್ಮಾನಿಸಲಾಯಿತು.
ಮಂಗಳೂರಿನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯರಿ ಅವರನ್ನು ಸನ್ಮಾನಿಸಲಾಯಿತು.   

ಮಂಗಳೂರು: ರೋಗ ಲಕ್ಷಣ ಇದ್ದವರ ಪರೀಕ್ಷೆ, ಸ್ವಯಂ ಪ್ರೇರಿತ ರಕ್ಷಣೆ, ಅರ್ಹ ಫಲಾನುಭವಿಗಳು ಕಾಲಕಾಲಕ್ಕೆ ಲಸಿಕೆ ಪಡೆಯುವ ಮೂಲಕ ಸಮುದಾಯದಲ್ಲಿ ಕೋವಿಡ್ –19 ಹರಡುವಿಕೆ ನಿಯಂತ್ರಿಸಬಹುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯರಿ ಹೇಳಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ಇಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಫೆಬ್ರುವರಿಯಲ್ಲಿ ಜಿಲ್ಲೆಯಲ್ಲಿ ಶೇ 0.96ರಷ್ಟು ಇದ್ದ ಕೋವಿಡ್ ಪ್ರಕರಣಗಳು, ಎರಡು ವಾರದಿಂದ ಹೆಚ್ಚುತ್ತಿದ್ದು, ಶೇ 1.81ಕ್ಕೆ ಏರಿಕೆಯಾಗಿವೆ. ವಿದ್ಯಾರ್ಥಿಗಳಲ್ಲಿ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಶೇ 1.43ರಷ್ಟು ಇದ್ದರೆ, ಕೇರಳದಿಂದ ಬಂದವರಲ್ಲಿ ಪಾಸಿಟಿವ್ ಪ್ರಕರಣಗಳು ಶೇ 6.77ರಷ್ಟು ಇವೆ ಎಂದರು.

ಸಾಮಾಜಿಕ, ಸಾರ್ವಜನಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಮಿತಿ ಮೀರಿದೆ. ಜನರಲ್ಲಿ ಭಯ ಇಲ್ಲದ ಕಾರಣ, ಎರಡನೆಯ ಅಲೆಯ ಆತಂಕ ಎದುರಾಗಿದೆ. ಜನರು ಹಕ್ಕನ್ನು ಕೇಳುವಷ್ಟೇ ಹೊಣೆಯಿಂದ ಕರ್ತವ್ಯವನ್ನೂ ನಿಭಾಯಿಸಬೇಕು. ಯುವಜನರು ನಿರ್ಲಕ್ಷ್ಯ ತೋರುವುದರಿಂದ ಮನೆಯಲ್ಲಿರುವ ಹಿರಿಯ ಜೀವಗಳಿಗೆ ಅಪಾಯವಾಗಬಹುದು ಎಂದು ಎಚ್ಚರಿಸಿದರು.

ADVERTISEMENT

66 ಪ್ರಾಥಮಿಕ ಆರೋಗ್ಯ ಕೇಂದ್ರ, 12, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಆರು ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಗಳು, 35ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ನಿಯಂತ್ರಣ ಲಸಿಕೆ ಲಭ್ಯವಿದೆ. 60 ವರ್ಷ ಮೇಲ್ಪಟ್ಟವರು ತಕ್ಷಣಕ್ಕೆ ಒಂದು ಡೋಸ್ ಲಸಿಕೆ ಪಡೆದರೆ, ಅವರ ದೇಹದಲ್ಲಿ ರೋಗ ನಿರೋಧಕ ಶಕ್ತಿ (ಆ್ಯಂಟಿ ಬಾಡಿ) ಹೆಚ್ಚುವುದರಿಂದ ಜೀವಕ್ಕೆ ಅಪಾಯವಾಗುವುದನ್ನು ತಪ್ಪಿಸಬಹುದು. ಹೀಗಾಗಿ ಹಿರಿಯ ನಾಗರಿಕರು ಕಡ್ಡಾಯವಾಗಿ ಲಸಿಕೆ ಪಡೆಯಬೇಕು ಎಂದು ಹೇಳಿದರು.

ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್: ಮಹಾರಾಷ್ಟ್ರ, ಪಂಜಾಬ್, ಚಂಡೀಘಡದಿಂದ ವಿಮಾನದಲ್ಲಿ ಬರುವ ಪ್ರಯಾಣಿಕರು 72 ತಾಸು ಒಳಗಿನ ಆರ್‌ಟಿಪಿಸಿಆರ್ ವರದಿ ತರಬೇಕು. ಇಲ್ಲವಾದಲ್ಲಿ ವಿಮಾನ ನಿಲ್ದಾಣದಲ್ಲಿ ₹ 800 ಪಾವತಿಸಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ರೈಲ್ವೆಯಲ್ಲಿ ಸಂಚರಿಸುವವರ ಪರೀಕ್ಷೆ ಇಲಾಖೆಗೆ ಸವಾಲಾಗಿದೆ. ಇದಕ್ಕೆ ಯಾವ ರೀತಿ ಕ್ರಮವಹಿಸಬೇಕು ಎಂಬ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ಬಾಯರಿ ಹೇಳಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ ನಾಯ್ಕ ಇಂದಾಜೆ, ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ತಳ ಇದ್ದರು. ಪತ್ರಕರ್ತ ಆತ್ಮಭೂಷಣ್ ನಿರೂಪಿಸಿದರು.

‘ತಕ್ಷಣಕ್ಕೆ ಲಸಿಕೆ ಪಡೆಯಿರಿ’
ಐದಕ್ಕಿಂತ ಹೆಚ್ಚು ಪ್ರಕರಣಗಳು ಕಂಡುಬಂದ ಪ್ರದೇಶವನ್ನು ಕಂಟೈನ್‌ಮೆಂಟ್ ವಲಯವನ್ನಾಗಿ ಘೋಷಿಸಲಾಗುತ್ತದೆ. ಈ ಪ್ರದೇಶದಲ್ಲಿನ ಜನರು ತಕ್ಷಣಕ್ಕೆ ಒಂದು ಡೋಸ್ ಲಸಿಕೆ ಪಡೆದರೆ, ಕೋವಿಡ್‌ನಿಂದ ಜೀವಕ್ಕೆ ಆಗಬಹುದಾದ ಅಪಾಯವನ್ನು ತಪ್ಪಿಸಿಕೊಳ್ಳಬಹುದು. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಲು ಪ್ರಾರಂಭವಾಗುತ್ತದೆ ಎಂದು ರಾಮಚಂದ್ರ ತಿಳಿಸಿದರು.

‘ವರದಿ ಜೊತೆಗಿರಲಿ’
‘ಕೋವಿಡ್ ವೈರಸ್ ದುರ್ಬಲಗೊಂಡಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಹೀಗಾಗಿ, ಜನರು ಈ ಹಿಂದಿನಂತೆ ಕಟ್ಟುನಿಟ್ಟಿನ ಎಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಕೇರಳ ಚುನಾವಣೆ ಸಂಬಂಧ ಅಲ್ಲಿಗೆ ಹೋಗುವ ರಾಜಕೀಯ ಪಕ್ಷಗಳ ಕಾರ್ಯಕರ್ತರು, ನಾಯಕರು, ಇಲ್ಲಿಂದ ಹೋಗುವಾಗ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಂಡು ವರದಿ ಜೊತೆ ಹೋದರೆ ಉತ್ತಮ. ಅಲ್ಲಿಂದ ವಾಪಸ್ ಬರುವಾಗಲೂ ಇದೇ ಕ್ರಮ ಅನುಸರಿಸಬೇಕು. ರಾಜಕೀಯ ಪಕ್ಷಗಳ ಪ್ರಮುಖರಿಗೆ ಇದೇ ರೀತಿ ಸಲಹೆ ನೀಡಿದ್ದೇನೆ’ ಎಂದು ಡಾ. ಬಾಯರಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.