ADVERTISEMENT

ಧರ್ಮಸ್ಥಳದಲ್ಲಿ ಗಿಡ ನಾಟಿ ಕಾರ್ಯಕ್ಕೆ ಚಾಲನೆ; ಪರಿಸರ ರಕ್ಷಣೆ ಪ್ರತಿಯೊಬ್ಬನ ಹೊಣೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2021, 6:10 IST
Last Updated 6 ಜೂನ್ 2021, 6:10 IST
ಧರ್ಮಸ್ಥಳದಲ್ಲಿ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹಸಿರು ಬಸ್ ಯೋಜನೆಗೆ ಚಾಲನೆ ನೀಡಿದರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಇದ್ದರು.
ಧರ್ಮಸ್ಥಳದಲ್ಲಿ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹಸಿರು ಬಸ್ ಯೋಜನೆಗೆ ಚಾಲನೆ ನೀಡಿದರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಇದ್ದರು.   

ಉಜಿರೆ: ‘ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಹೊಣೆಯಾಗಿದೆ. ಪ್ರತಿಯೊಬ್ಬರು ಪರಿಸರ ಕಾಳಜಿಯಿಂದ ಜಾಗ ಇರುವಲ್ಲಿ ಗಿಡ ನೆಟ್ಟು ಹಸಿರು ಬೆಳೆಸುವ ಕೆಲಸ ಮಾಡಬೇಕು, ಆಮೂಲಕ ಸುತ್ತಲಿನ ಪರಿಸರದಲ್ಲಿ ಶುದ್ಧ ಆಮ್ಲಜನಕ ಉತ್ಪಾದನೆ ಆಗಲು ಕಾರಣರಾಗಬೇಕು ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಉಪಸ್ಥಿತಿಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶನಿವಾರ ಆಯೋಜಿಸಿದ್ದ ಕಾಡಿನ ವನ್ಯಮೃಗಗಳಿಗಾಗಿ ಹಣ್ಣಿನ ಗಿಡಗಳನ್ನು ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಯೋಜನೆ ಮತ್ತು ಅರಣ್ಯ ಇಲಾಖೆ ಜಂಟಿ ಸಹಭಾಗಿತ್ವದಲ್ಲಿ ಧರ್ಮಸ್ಥಳದ 125 ಹೆಕ್ಟೇರ್ ಪ್ರದೇಶದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಪರಿಸರ ಸಂರಕ್ಷಣೆ ಬಗ್ಗೆ ಎಲ್ಲರೂ ಪ್ರತಿಜ್ಞಾವಿಧಿ ಸ್ವೀಕರಿಸಿದರು. ವೃಕ್ಷ ಬಂಧನ ವಿಧಿ ನಡೆಸಲಾಯಿತು.

ADVERTISEMENT

ಧರ್ಮಸ್ಥಳದ ಅರಣ್ಯಪ್ರದೇಶದಲ್ಲಿ ಸಚಿವರು ಹಾಗೂ ವೀರೇಂದ್ರ ಹೆಗ್ಗಡೆ ಗಿಡ ನೆಟ್ಟು, ಯೋಜನೆಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರೂ ಗಿಡ ನೆಟ್ಟರು. ಧರ್ಮಸ್ಥಳ ಕ್ಷೇತ್ರದಲ್ಲಿ ಅರ್ಧ ಎಕರೆಯಲ್ಲಿ ಕೈಗೊಂಡಿರುವ ಮಿಯಾವಾಕಿ ಮಾದರಿ ನೆಡುತೋಪು ಯೋಜನೆ ಉದ್ಘಾಟಿಸಲಾಯಿತು. ಧರ್ಮಸ್ಥಳ ಕ್ಷೇತ್ರದಲ್ಲಿ ನೂತನವಾಗಿ ತಂದಿರುವ ಹಸಿರು ಬಸ್‌ಗೆ ಸಚಿವ ಅರವಿಂದ ಲಿಂಬಾವಳಿ ಚಾಲನೆ ನೀಡಿದರು.

ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಾ ಮೋನಪ್ಪ ಗೌಡ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್, ಮಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನೇತಲ್ಕರ್, ಡಿಸಿಎಫ್ ಡಾ. ಕರಿಕಾಲನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.