ADVERTISEMENT

ಎರಡು ಹತ್ಯೆಗಳ ತನಿಖೆಗೆ ಎಸ್‌ಐಟಿ ರಚನೆಗೆ ಆಗ್ರಹ

ಅಶ್ರಫ್‌, ಅಬ್ದುಲ್ ರಹಿಮಾನ್ ಹತ್ಯೆ: ತನಿಖೆಯಲ್ಲಿ ಪ್ರಗತಿ ಆಗಿಲ್ಲ– ಎಸ್‌ಡಿಪಿಐ ಆರೋಪ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 5:31 IST
Last Updated 4 ಜುಲೈ 2025, 5:31 IST
ಸುದ್ದಿಗೋಷ್ಠಿಯಲ್ಲಿ ಅನ್ವರ್ ಸಾದತ್ ಮಾತನಾಡಿದರು. ಜಮಾಲ್ ಜೋಕಟ್ಟೆ, ಮುನೀಷ್ ಅಲಿ ಹಾಗೂ ಅತಾವುಲ್ಲ ಜೋಕಟ್ಟೆ ಭಾಗವಹಿಸಿದ್ದರು
ಸುದ್ದಿಗೋಷ್ಠಿಯಲ್ಲಿ ಅನ್ವರ್ ಸಾದತ್ ಮಾತನಾಡಿದರು. ಜಮಾಲ್ ಜೋಕಟ್ಟೆ, ಮುನೀಷ್ ಅಲಿ ಹಾಗೂ ಅತಾವುಲ್ಲ ಜೋಕಟ್ಟೆ ಭಾಗವಹಿಸಿದ್ದರು   

ಮಂಗಳೂರು:ಕುಡುಪುವಿನಲ್ಲಿ ಗುಂಪು ಹಲ್ಲೆ ನಡೆಸಿ ವಯನಾಡಿನ ಅಶ್ರಫ್‌ ಅವರನ್ನು ಹತ್ಯೆ ನಡೆಸಿದ ಪ್ರಕರಣ ಹಾಗೂ ಕೊಳತ್ತಮಜಲಿನಲ್ಲಿ ನಡೆದ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣಗಳ ತನಿಖೆಗೆ  ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಬೇಕು ಎಂದು ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಆಗ್ರಹಿಸಿದೆ.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಪಕ್ಷದ ಮಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಅನ್ವರ್ ಸಾದತ್‌, ‘ಈ ಎರಡೂ ಪ್ರಕರಣಗಳಲ್ಲಿ ಸೂತ್ರಧಾರಿಗಳ ಬಂಧನಕ್ಕೆ ಪೊಲೀಸರು ಕ್ರಮವಹಿಸಿಲ್ಲ. ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಪ್ರಾಯ ಹಂಚಿಕೊಳ್ಳುವವರ ಹಿಂದೆ ಬಿದ್ದಿದ್ದಾರೆ. ಬಜಪೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದಾಗಲೇ ನಡೆದ ಪ್ರತಿಭಟನಾ ಸಭೆಯಲ್ಲಿ, ಸಂಘಟನೆಯ ನಾಯಕರು ಸುಹಾಸ್ ಶೆಟ್ಟಿ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳುವ ಬಗ್ಗೆ ಮಾತನಾಡಿದ್ದರು. ಅವರ ವಿರುದ್ಧ ಕ್ರಮವಾಗಿಲ್ಲ’ ಎಂದು ದೂರಿದರು.

‘ರೌಡಿಶೀಟರ್‌ ಸುಹಾಸ್ ಶೆಟ್ಟಿ ಹತ್ಯೆ ವೈಯಕ್ತಿಕ ದ್ವೇಷದಿಂದ ನಡೆದಿದೆ ಎಂದು ಹಿಂದಿನ ಪೊಲೀಸ್ ಆಯುಕ್ತರು ತಿಳಿಸಿದ್ದರು. ಆದರೂ ರಾಜ್ಯ ಸರ್ಕಾರ ಈ ಪ್ರಕರಣದ ತನಿಖೆಯನ್ನು ಬಿಜೆಪಿ ಮುಖಂಡರ ಒತ್ತಡಕ್ಕೆ ಮಣಿದು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸಿದೆ. ಗುಂಪು ಹಲ್ಲೆ ಮಾಡಿ ಅಶ್ರಫ್‌ ಕೊಲೆ ಮಾಡಿದ್ದಕ್ಕೆ ಹಾಗೂ ಅಬ್ದುಲ್ ರಹಿಮಾನ್‌ ಹತ್ಯೆಗೆ ಕಾರಣವೇನು ಎಂಬುದನ್ನು ಪೊಲೀಸರು ಇನ್ನೂ ಸ್ಪಷ್ಟಪಡಿಸಿಲ್ಲ. ಹಾಗಾಗಿ ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಪ್ರಶ್ನೆ ಕೇಳುತ್ತಿದ್ದಾರೆ’ ಎಂದರು.

ADVERTISEMENT

‘ಅಶ್ರಫ್ ಹಾಗೂ ಅಬ್ದುಲ್ ರಹಿಮಾನ್ ಹತ್ಯೆಯಿಂದ ಸಂತ್ರಸ್ತರಾಗಿರುವ ಕುಟುಂಬಗಳಿಗೆ ಇನ್ನೂ ಸರ್ಕಾರ ಪರಿಹಾರ ನೀಡಿಲ್ಲ. ಎರಡೂ ಕುಟುಂಬಗಳಿಗೆ ತಲಾ ₹ 50 ಲಕ್ಷ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು. 

‘ಹೆಣ್ಣುಮಗಳಿಗೆ ನ್ಯಾಯ ಕೊಡಿಸಬೇಕು ಎಂದು ನಮ್ಮ ಪಕ್ಷವು ಪುತ್ತೂರಿನಲ್ಲಿ ಪ್ರತಿಭಟನೆ ನಡೆಸಿದ್ದಕ್ಕೂ ಎಫ್‌ಐಆರ್ ದಾಖಲಿಸಿದ್ದಾರೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿ’ ಎಂದರು.

ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಅತಾವುಲ್ಲ ಜೋಕಟ್ಟೆ, ‘ಅಶ್ರಫ್ ಹತ್ಯೆ ಬಳಿಕ ಪಾಲಿಕೆಯ ಮಾಜಿ ಕಾರ್ಪೊರೇಟರ್ ಪತಿ ನಾಪತ್ತೆಯಾಗಿರುವುದೇಕೆ? ಅವರ ಬಗ್ಗೆ ಆರೋಪಗಳು ಬಂದರೂ ಸ್ಪಷ್ಟೀಕರಣ ನೀಡಿಲ್ಲ ಏಕೆ’ ಎಂದು ಪ್ರಶ್ನಿಸಿದರು.

ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಉಪಾಧ್ಯಕ್ಷ  ಮೋನಿಷ್ ಅಲಿ, ‘ಅಶ್ರಫ್ ಹಾಗೂ ಅಬ್ದುಲ್ ರಹಿಮಾನ್ ಹತ್ಯೆಯಿಂದ ಸಂತ್ರಸ್ತರಾಗಿರುವ ಕುಟುಂಬಗಳಿಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿ ಬಿ.ಸಿ.ರೋಡ್‌ನಲ್ಲಿ ಇದೇ 4ರಂದು ಸಂಜೆ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಿದ್ದೇವೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ನಗರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.