
ಮಂಗಳೂರು: ಕುಷ್ಠರೋಗದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಜ.30ರಿಂದ ಫೆಬ್ರುವರಿ 13ರವರೆಗೆ ಜಿಲ್ಲೆಯಾದ್ಯಂತ ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಆರ್.ತಿಮ್ಮಯ್ಯ ಹೇಳಿದರು.
ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕುಷ್ಠರೋಗದ ಬಗ್ಗೆ ಇರುವ ಸಾಮಾಜಿಕ ಕಳಂಕ ಮತ್ತು ತಾರತಮ್ಯವನ್ನು ತೊಡೆದು ಹಾಕಬೇಕಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ 47 ಮಂದಿ ಕುಷ್ಠರೋಗಿಗಳನ್ನು ಗುರುತಿಸಲಾಗಿದ್ದು, ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಹೊರ ಜಿಲ್ಲೆ, ಹೊರ ರಾಜ್ಯದವರು 17 ಮಂದಿ ಇದ್ದರೆ, ಜಿಲ್ಲೆಯವರು 30 ಮಂದಿ ಇದ್ದಾರೆ ಎಂದರು.
ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ಯೋಜನೆ–ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆಯಡಿ ಸೌಲಭ್ಯ ಪಡೆಯಲು ಆರೋಗ್ಯ ಕಾರ್ಡ್ ಹೊಂದಿರುವುದು ಕಡ್ಡಾಯವಲ್ಲ. ಆರೋಗ್ಯ ಕಾರ್ಡ್ ಇಲ್ಲದಿದ್ದರೂ, ಸೌಲಭ್ಯ ಪಡೆಯಲು ಅರ್ಹರಿರುವ ರೋಗಿಗಳ ಆಧಾರ್ ಕಾರ್ಡ್, ಆಧಾರ್ ಜೋಡಣೆಯಾಗಿರುವ ಮೊಬೈಲ್ ಫೋನ್ ಸಂಖ್ಯೆ, ಪಡಿತರ ಚೀಟಿ ನೀಡಿ, ಈ ಯೋಜನೆ ಪ್ರಯೋಜನ ಪಡೆದುಕೊಳ್ಳಬಹುದು. ನಗರದ ಎಲ್ಲ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ್ ಯೋಜನೆಯ ಸೌಲಭ್ಯ ಸಿಗುವ ಸಂಬಂಧ ಶೀಘ್ರದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಎಲ್ಲ ಆಸ್ಪತ್ರೆಗಳ ಪ್ರಮುಖರ ಸಭೆ ಕರೆದು ಚರ್ಚಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
108 ಆಂಬುಲೆನ್ಸ್ ವಾಹನಗಳ ಉಸ್ತುವಾರಿ ಪುನಃ ಆರೋಗ್ಯ ಇಲಾಖೆಗೆ ದೊರೆಯಲಿದ್ದು, ಇದರ ಪೈಲೆಟ್ ಯೋಜನೆ ಚಾಮರಾಜನಗರದಲ್ಲಿ ಅನುಷ್ಠಾನಗೊಂಡಿದೆ. ಜಿಲ್ಲೆಯಲ್ಲಿ 108 ಆಂಬುಲೆನ್ಸ್‌ಗಳ ಸಂಖ್ಯೆ 26 ಇದ್ದು, ಸದ್ಯದಲ್ಲಿ ಸಿಬ್ಬಂದಿ ಕೊರತೆ ಇದೆ. ಇಲಾಖೆ ವಹಿಸಿಕೊಂಡ ಮೇಲೆ ಸಿಬ್ಬಂದಿ ನೇಮಕಾತಿಗೆ ಅನುಮತಿ ದೊರೆಯಲಿದೆ ಎಂದು ಹೇಳಿದರು.
ಡಾ. ಸುದರ್ಶನ್, ಡಾ. ಸುಜಯ್ ಭಂಡಾರಿ, ಡಾ. ಖತೀಜಾ ದಿಲ್‌ಶಾದ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಉಳೇಪಾಡಿ ಉಪಸ್ಥಿತರಿದ್ದರು.
ಕುಷ್ಠರೋಗದ ಬಗ್ಗೆ ಅರಿವು ಮೂಡಿಸುವ ದಿಸೆಯಲ್ಲಿ ಎಲ್ಲ ಶಾಲೆಗಳಲ್ಲಿ ಬೆಳಗಿನ ಪ್ರಾರ್ಥನೆ ವೇಳೆ ಮಾಹಿತಿ ನೀಡುವಂತೆ ಶಾಲೆಗಳ ಪ್ರಮುಖರಿಗೆ ಪತ್ರ ಬರೆಯಲಾಗುವುದು.ಡಾ.ಎಚ್.ಆರ್. ತಿಮ್ಮಯ್ಯ ಡಿಎಚ್‌ಒ
ಎನ್‌ಎಚ್‌ಎಂ: ₹9.67 ಕೋಟಿ ಮಂಜೂರು
ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿಗೆ ನವೆಂಬರ್‌ನಿಂದ ಜನವರಿವರೆಗಿನ ವೇತನ ಪಾವತಿಗೆ ₹9.67 ಕೋಟಿ ಅನುದಾನ ಮಂಜೂರು ಆಗಿದ್ದು ಇನ್ನು ಒಂದೆರಡು ದಿನಗಳಲ್ಲಿ ಸಿಬ್ಬಂದಿ ಖಾತೆಗೆ ಜಮಾ ಆಗಲಿದೆ. ಗುತ್ತಿಗೆ ವೈದ್ಯರು ಪ್ರಯೋಗಾಲಯ ಸಿಬ್ಬಂದಿ ಸ್ವಚ್ಛತಾ ಕೆಲಸಗಾರರು ಸೇರಿದಂತೆ ಎಲ್ಲ ಹೊರಗುತ್ತಿಗೆ ನೌಕರರ ಗೌರವಧನವನ್ನೂ ಪಾವತಿಸಲಾಗಿದೆ ಎಂದು ಡಿಎಚ್‌ಒ ಡಾ. ತಿಮ್ಮಯ್ಯ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.