ADVERTISEMENT

ಒಡೆದ ಗಡ್ಡೆಯ ಯಶಸ್ವಿ ಶಸ್ತ್ರಚಿಕಿತ್ಸೆ

ಫಾದರ್‌ ಮುಲ್ಲರ್‌ ವೈದ್ಯಕೀಯ ಕಾಲೇಜಿನ ತಂಡ ಸಾಧನೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 4:17 IST
Last Updated 31 ಅಕ್ಟೋಬರ್ 2020, 4:17 IST

ಮಂಗಳೂರು: ಯಕೃತ್ತಿನ ಕಾನ್ಸರ್‌ನ ಪ್ರಾಥಮಿಕ ಲಕ್ಷಣವಾದ ಒಡೆದ ಗಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆಯುವಲ್ಲಿ ಫಾದರ್ ಮುಲ್ಲರ್‌ ಕಾಲೇಜಿನ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿದೆ. ಶೇ 3–15 ರಷ್ಟು ರೋಗಿಗಳಲ್ಲಿ ಇಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ ರೋಗಿಯನ್ನು ಆಸ್ಪತ್ರೆಗೆ ಕರೆತರೆಲಾಗಿತ್ತು. ತಪಾಸಣೆ ನಡೆಸಿದ ವೈದ್ಯರ ತಂಡ, ಯಕೃತ್ತಿನ ಗಡ್ಡೆ ಒಡೆದಿರುವುದನ್ನು ಪತ್ತೆ ಮಾಡಿತು. ಶಸ್ತ್ರಚಿಕಿತ್ಸೆ ಅಗತ್ಯವಾಗಿದ್ದರಿಂದ, ಕೂಡಲೇ ಕಾರ್ಯಪ್ರವೃತ್ತವಾದ ತಂಡ, ಸುಮಾರು 4 ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆಯನ್ನು ನಡೆಸಿತು. 11X14 ಸೆಂ.ಮೀ. ಗಾತ್ರದ ಒಡೆದ ಗಡ್ಡೆಯನ್ನು ಸಂಪೂರ್ಣವಾಗಿ ಹೊರತೆಗೆಯಿತು.

ಡಾ.ಎರೆಲ್‌ ಡೈಸ್‌ ಮತ್ತು ಡಾ.ಲಿಯೊ ಫ್ರಾನ್ಸಿಸ್‌ ತೌರೊ ನೇತೃತ್ವದ ತಂಡದಲ್ಲಿ ಡಾ.ಚಿರಾಗ್‌ ಪಿರೇರಾ, ಡಾ.ಸುಪ್ರಿಯಾ ಸುಬ್ರಹ್ಮಣ್ಯಂ, ಡಾ.ರಾಧೇಶ್‌ ಹೆಗ್ಡೆ, ಡಾ.ನಿಕೆಲ್ಲೆ ಸಲ್ಡಾನ, ಡಾ.ಡಾನ್‌ ಇದ್ದರು. ರೋಗಿಯು ಸಂಪೂರ್ಣ ಚೇತರಿಸಿಕೊಂಡಿದ್ದು, 10 ದಿನಗಳ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ADVERTISEMENT

‘ರೋಗಿಗೆ ಶಸ್ತ್ರಚಿಕಿತ್ಸೆಯ ನಂತರ ಯಾವುದೇ ತೊಂದರೆಗಳು ಕಾಣಿಸಿಕೊಂಡಿಲ್ಲ. ಸಣ್ಣ ಹಾಗೂ ದೊಡ್ಡ ಪ್ರಮಾಣದ ಯಕೃತ್ತಿನ ಶಸ್ತ್ರಚಿಕಿತ್ಸೆಯನ್ನು ಕಾಲೇಜಿನಲ್ಲಿ ನಡೆಸಲಾಗುತ್ತಿದೆ. ವೈದ್ಯಕೀಯ ಕಾಲೇಜಿನಲ್ಲಿ ಅತ್ಯಾಧುನಿಕ ವ್ಯವಸ್ಥೆಗಳಿದ್ದು, ಸುರಕ್ಷಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ’ ಎಂದು ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಡಾ. ಎರೆಲ್‌ ಡೈಸ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.