ಎಫ್‌ಐಆರ್
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಉದ್ದಿಮೆ ಪರವಾನಗಿ ಶುಲ್ಕ ಪಾವತಿಸುವ ಸಲುವಾಗಿ ದಲ್ಲಾಳಿಯೊಬ್ಬರು ವ್ಯಾಪಾರಿಗಳಿಂದ ಹಣ ಪಡೆದು, ನಕಲಿ ದಾಖಲೆ ನೀಡಿ ವಂಚಿಸಿದ್ದು, ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪಡೀಲ್ ಬಳಿಯ ಬಜಾಲ್‌ನ ಪಿಠೋಪಕರಣ ವರ್ಕ್‌ಶಾಪ್‌ನ ಮಾಲೀಕರೊಬ್ಬರಿಗೆ ನ್ಯಾಯಾಲಯಕ್ಕೆ ಸಲ್ಲಿಸಲು 15 ವರ್ಷಗಳ ಉದ್ದಿಮೆ ಪರವಾನಗಿ ದಾಖಲಾತಿಗಳು ಬೇಕಾಗಿದ್ದವು. ಅದನ್ನು ಪಡೆಯಲು ಅವರು ಪಾಲಿಕೆ ಕಚೇರಿಗೆ ತೆರಳಿದಾಗ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ.
‘ವರ್ಕ್‌ಶಾಪ್‌ನ ಉದ್ದಿಮೆ ಪರವಾನಗಿ ದಾಖಲೆ ಪಡೆಯಲು ಪಾಲಿಕೆ ಕಚೇರಿಗೆ ಹೋಗಿದ್ದೆವು. ಈ ವರ್ಷದ ಉದ್ದಿಮೆ ಪರವಾನಗಿ ನವೀಕರಣ ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು. ಏಜೆಂಟ್ ಮೂಲಕ ಶುಲ್ಕ ಕಟ್ಟಿ ಪರವಾನಗಿ ನವೀಕರಿಸಿದ್ದೇವೆ ಎಂದು ಉದ್ದಿಮೆ ಪರವಾನಗಿಯ ಪ್ರತಿಯನ್ನು ಅಧಿಕಾರಿಗಳಿಗೆ ತೋರಿಸಿದೆವು. ಪಾಲಿಕೆಯಿಂದ ನೀಡುವ ಉದ್ದಿಮೆ ಪರವಾನಗಿಯ ತರಹವೇ ಕಾಣುತ್ತಿದ್ದ ಆ ದಾಖಲೆ ನೋಡಿ ಸ್ವತಃ ಪಾಲಿಕೆ ಅಧಿಕಾರಿಗಳೂ ಅವಾಕ್ಕಾದರು. ಅದರೆ, ಪಾಲಿಕೆ ದಾಖಲೆಗಳಲ್ಲಿ ನಮ್ಮ ವರ್ಕ್‌ಶಾಪ್‌ನ ಉದ್ದಿಮೆ ಪರವಾನಗಿ ನವೀಕರಿಸಿದ ವಿವರ ದಾಖಲಾಗಿರಲಿಲ್ಲ’ ಎಂದು ಸಂತ್ರಸ್ತರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ವಂಚನೆ ಮಾಡಿರುವ ದಲ್ಲಾಳಿ ಅನೇಕ ವರ್ಷಗಳಿಂದ ನಮಗೆ ಉದ್ದಿಮೆ ಪರವಾನಗಿ ನವೀಕರಣ ಮಾಡಿಕೊಡುತ್ತಿದ್ದ. ಆದರೆ, ಈ ವರ್ಷ ನಕಲಿ ಉದ್ದಿಮೆ ಪರವಾನಗಿ ನೀಡಿ ವಂಚಿಸಿದ್ದಾನೆ. ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೇವೆ’ ಎಂದರು.
ಪಂಪ್‌ವೆಲ್‌ನ ಮಳಿಗೆಯೊಂದರ ಮಾಲೀಕರೂ ಅದೇ ದಲ್ಲಾಳಿಯಿಂದ ವಂಚನೆಗೆ ಒಳಗಾಗಿದ್ದಾರೆ.
‘ಪಡೀಲ್ ಬಜಾಲ್‌ನ ಪಿಠೋಪಕರಣ ವರ್ಕ್‌ಶಾಪ್‌ನ ಮಾಲೀಕರೊಬ್ಬರು ಉದ್ದಿಮೆ ಪರವಾನಗಿ ಕುರಿತ ದಾಖಲೆ ಪಡೆಯಲು ಬಂದಿದ್ದರು. ಅವರು ತೋರಿಸಿದ ಉದ್ದಿಮೆ ಪರವಾನಗಿಯನ್ನು ನೋಡಿದಾಗ, ಅದು ನಕಲಿ ಎಂಬುದು ತಿಳಿಯಿತು. ಪೃಥ್ವಿರಾಜ್ ಎಂಬ ದಲ್ಲಾಳಿ ಮೂಲಕ ಅವರು ಉದ್ದಿಮೆ ಪರವಾನಗಿ ಪಡೆದಿದ್ದುದು ತಿಳಿಯಿತು. ಈ ಬಗ್ಗೆ ದಲ್ಲಾಳಿ ವಿರುದ್ಧ ಕಂಕನಾಡಿಯ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ’ ಎಂದು ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಇದೇ ರೀತಿ ಬೇರೆ ಉದ್ಯಮಿಗಳಿಗೂ ವಂಚನೆ ಆಗಿರುವ ಸಾಧ್ಯತೆ ಇದೆ. ಸುಮಾರು 4 ಸಾವಿರ ಮಂದಿಯ ಉದ್ದಿಮೆ ಪರವಾನಗಿ ಇನ್ನೂ ನವೀಕರಣ ಆಗಿಲ್ಲ. ಉದ್ದಿಮೆ ಪರವಾನಗಿ ನವೀಕರಣ ಆಗದವರು ಪಾಲಿಕೆಯ ವೆಬ್‌ಸೈಟ್‌ನ (http://www.mangalurucity.mrc.gov.in) ನಾಗರಿಕ ಸೇವೆಗಳ ವಿಭಾಗದಲ್ಲಿ ಪರಿಶೀಲಿಸಿಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.