ADVERTISEMENT

ಉಳ್ಳಾಲ: 6.325 ಕೆ.ಜಿ. ಗಾಂಜಾ ವಶ; ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2024, 4:46 IST
Last Updated 28 ಮಾರ್ಚ್ 2024, 4:46 IST
ನಿಶಾಂತ್ ಶೆಟ್ಟಿ
ನಿಶಾಂತ್ ಶೆಟ್ಟಿ   

ಉಳ್ಳಾಲ: ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ತೊಕ್ಕೊಟ್ಟುವಿನಲ್ಲಿ ಬುಧವಾರ ಬಂಧಿಸಿದ್ದು, ಆತನಿಂದ  6.325 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

‘ನೀರು ಮಾರ್ಗ ಜಂಕ್ಷನ್‌ನ ಬೇಬಿ ಕಾಂಪ್ಲೆಕ್ಸ್‌ನಲ್ಲಿ ವಾಸವಿರುವ ಕುಡುಪುವಿನ ನಿಶಾಂತ್ ಶೆಟ್ಟಿ(35) ಬಂಧಿತ ಆರೋಪಿ. ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಬೆಂಗಳೂರು ಮೂಲಕ ನಗರಕ್ಕೆ ಗಾಂಜಾ ತಂದಿದ್ದ ಆತ, ಅದನ್ನು ಸಣ್ಣ ಸಣ್ಣ ಪೊಟ್ಟಣಗಳಲ್ಲಿ ತುಂಬಿಸಿ ಗೂ‌ಡ್ಸ್‌ ಟೆಂಪೊ ವಾಹನದಲ್ಲಿಟ್ಟುಕೊಂಡು ಮಾರಾಟ  ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದಾಗ ಆತನ ಬಳಿ ಗಾಂಜಾ ಸಿಕ್ಕಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. 

‘ಆರೋಪಿಯು ಕೃತ್ಯಕ್ಕೆ ಬಳಸಿದ್ದ ಅಶೋಕ್ ಲೇಲ್ಯಾಂಡ್ ಟೆಂಪೊ, ಎರಡು ಮೊಬೈಲ್‌ಗಳು, ಡಿಜಿಟಲ್ ಮಾಪಕಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸ್ವತ್ತುಗಳ ಒಟ್ಟು ಮೌಲ್ಯ ₹ 9.11 ಲಕ್ಷ ಹಾಗೂ ವಶಪಡಿಸಿಕೊಂಡ  ಗಾಂಜಾದ ಮೌಲ್ಯ ₹ 1.50 ಲಕ್ಷ ಎಂದು ಅಂದಾಜಿಸಲಾಗಿದೆ’ ಎಂದರು

ADVERTISEMENT

‘ಈ ಹಿಂದೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದ ಹಲ್ಲೆ ಪ್ರಕರಣ, ನಗರ ಪೂರ್ವ ಠಾಣೆಯಲ್ಲಿ ದಾಖಲಾಗಿದ್ದ ಕಳವು ಮತ್ತು ಅಕ್ರಮ ಪಿಸ್ತೂಲ್ ಹೊಂದಿದ ಪ್ರಕರಣಗಳು, ಬರ್ಕೆ ಠಾಣೆಯಲ್ಲಿ ದಾಖಲಾಗಿದ್ದ ಸರ ಕಳವು ಪ್ರಕರಣ, ಉಳ್ಳಾಲ  ಠಾಣೆಯಲ್ಲಿ ದಾಖಲಾಗಿದ್ದ ಹಲ್ಲೆ ಪ್ರಕರಣ, ವಿಟ್ಲ ಠಾಣೆಯಲ್ಲಿ ದಾಖಲಾಗಿದ್ದ ಹಲ್ಲೆ  ಮತ್ತು ಕಳವು  ಪ್ರಕರಣಗಳು, ಪುತ್ತೂರು ಗ್ರಾಮಾಂತರ  ಠಾಣೆಯಲ್ಲಿ ದಾಖಲಾಗಿದ್ದ ಗಾಂಜಾ ಮಾರಾಟ ಪ್ರಕರಣವೂ ಸೇರಿದಂತೆ 10ಕ್ಕೂ ಹೆಚ್ಚು ಪ್ರಕರಣಗಳಲ್ಲಿ ನಿಶಾಂತ್ ಶೆಟ್ಟಿ ಆರೋಪಿಯಾಗಿದ್ದ’ ಎಂದೂ ಅವರು ಮಾಹಿತಿ ನೀಡಿದರು.  

ಸಿಸಿಬಿ ಘಟಕದ ಎಸಿಪಿ ಗೀತಾ ಕುಲಕರ್ಣಿ, ಪೊಲೀಸ್ ಇನ್‌ಸ್ಪೆಕ್ಟರ್ ಶ್ಯಾಮಸುಂದರ್ ಎಚ್.ಎಂ, ಪಿಎಸ್ಐ ಬಸವರಾಜಪ್ಪ ಮತ್ತು ಸಿಸಿಬಿ ಸಿಬ್ಬಂದಿ ಈ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.