ADVERTISEMENT

ಮಾರ್ಚ್‌ 3ರಿಂದ ಗೆಜ್ಜೆಗಿರಿ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2022, 4:26 IST
Last Updated 1 ಮಾರ್ಚ್ 2022, 4:26 IST
28ptr2
28ptr2   

ಪುತ್ತೂರು: ಗೆಜ್ಜೆಗಿರಿ ನಂದನಬಿತ್ತಿಲು ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವ ಮಾರ್ಚ್‌ 3ರಿಂದ 7ರ ತನಕ ಮೂಡುಬಿದಿರೆ ಶಿವಾನಂದ ಶಾಂತಿ ಅವರ ನೇತೃತ್ವದಲ್ಲಿ ವಿವಿಧ ವೈದಿಕ ವಿಧಿಗಳೊಂದಿಗೆ ತೌಳವ ಪರಂಪರೆಯಂತೆ ನಡೆಯುವುದು ಎಂದು ನೇಮೋತ್ಸವ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕಡೆಂಜಿ ತಿಳಿಸಿದರು.

ಪುತ್ತೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘3ರಂದು ಮಧ್ಯಾಹ್ನ 2.30ಕ್ಕೆ ಪುತ್ತೂರಿನ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂಘದ ಕಚೇರಿ ಬಳಿಯಿಂದ ಗೆಜ್ಜೆಗಿರಿ ಮೂಲಸ್ಥಾನಕ್ಕೆ ಹೊರೆಕಾಣಿಕೆ ಮೆರವಣಿಗೆ ಹೊರಡಲಿದೆ. ಸಂಜೆ 5ರಿಂದ ಗೆಜ್ಜೆಗಿರಿ ಕ್ಷೇತ್ರದಲ್ಲಿ ಹೊರೆ ಕಾಣಿಕೆ ಸಮರ್ಪಣೆ, ಉಗ್ರಾಣ ಮುಹೂರ್ತ ನಡೆಯಲಿದ್ದು, ಪರ್ಪುಂಜ ರಾಮಜಾಲು ಗರಡಿಯ ಮೊಕ್ತೇಸರ ಸಂಜೀವ ಪೂಜಾರಿ ಕೂರೇಲು ದೀಪ ಪ್ರಜ್ವಲನೆ ಮಾಡುವರು ಎಂದರು.

4ರಂದು ಬೆಳಿಗ್ಗೆ ತ್ರೀನಾರಿಕೇಳ ಗಣಪತಿ ಹೋಮ, ಗುರುಪೂಜೆ, ತೋರಣ ಮುಹೂರ್ತ, ನಾಗದೇವರಿಗೆ ತನು ತಂಬಿಲ ಸೇವೆ, ಧೂಮಾವತಿ ಮತ್ತು ಕುಪ್ಪೇ ಪಂಜುರ್ಲಿ ಸಾನ್ನಿಧ್ಯಗಳಲ್ಲಿ ನವಕ ಕಲಶಪ್ರಧಾನ ಹೋಮ, ಮಧ್ಯಾಹ್ನ ಸತ್ಯಧರ್ಮ ಚಾವಡಿಯಲ್ಲಿ ಮಹಾಪೂಜೆ, ಪಲ್ಲಪೂಜೆ, ಅನ್ನಸಂತ ರ್ಪಣೆ, ಸಂಜೆ ಧೂಮಾವತಿ ಸಾನ್ನಿಧ್ಯದಲ್ಲಿ ಬಲಿ ಉತ್ಸವ ನಡೆಯಲಿದೆ ಎಂದರು.

ADVERTISEMENT

5ರಂದು ಧೂಮಾವತಿ ದೈವದ ನೇಮೋತ್ಸವ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಕೊರತಿ ದೈವದ ನರ್ತನ ಸೇವೆ, ಕಲ್ಲಾಲ್ದಾಯ ದೈವದ ನೇಮೋತ್ಸವ, ಧೂಮಾವತಿ ಸಾನ್ನಿಧ್ಯದಲ್ಲಿ ಬಲಿ ಉತ್ಸವ, ಸತ್ಯಧರ್ಮ ಚಾವಡಿಯಲ್ಲಿ ಮಹಾಪೂಜೆ, ಕುಪ್ಪೇ ಪಂಜುರ್ಲಿ ದೈವದ ನೇಮೋತ್ಸವ ನಡೆಯಲಿದೆ ಎಂದು ಹೇಳಿದರು.

6ರಂದು ಬೆಳಿಗ್ಗೆ ಮೂಲಸ್ಥಾನ ಗರಡಿ, ಬೆಮ್ಮೆರೆ ಗುಂಡ, ಸತ್ಯಧರ್ಮ ಚಾವಡಿಯಲ್ಲಿ ನವಕ ಕಲಶ ಪ್ರಧಾನ ಹೋಮ, ಅಲಂಕಾರ ಪೂಜೆ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಮೂಲಸ್ಥಾನ ಗರಡಿಯಲ್ಲಿ ಶುದ್ಧ ಕಲಶ ಹೋಮ, ಧೂಮಾವತಿ ಸಾನ್ನಿಧ್ಯದಲ್ಲಿ ಬಲಿ ಉತ್ಸವ ನಡೆಯುವುದು. ರಾತ್ರಿ ಸತ್ಯಧರ್ಮ ಚಾವಡಿಯಲ್ಲಿ ವಿಶೇಷ ದೀಪಾರಾಧನೆ ಮಹಾಪೂಜೆ, ಮೂಲಸ್ಥಾನ ಗರಡಿಯಲ್ಲಿ ಬೈದರ್ಕಳ ದರ್ಶನ ಸೇವೆ, ಬೆಮ್ಮೆರೆ ಗುಂಡದಲ್ಲಿ ಫಲ ಸಮರ್ಪಣೆ, ಮೂಲಸ್ಥಾನ ಗರಡಿಯಿಂದ ಒಲಿಮದೆಯಿಂದ ಹೊರಡುವುದು, ಸತ್ಯ ಧರ್ಮ ಚಾವಡಿಯಲ್ಲಿ ದೇಯಿ ಬೈದೆತಿ ನೇಮೋತ್ಸವ, ವೀರಪಥದಲ್ಲಿ ಕೋಟಿ-ಚೆನ್ನಯರ ಆಗಮನ, ಮಾತೆ ಮಕ್ಕಳ ಪುನೀತ ಸಮಾಗಮ, ದೇಯಿ ಬೈದೆತಿಯ ಮಹಾ ಪ್ರಸಾದ ವಿತರಣೆ, ಸಮಾಧಿಯಲ್ಲಿ ದೀಪಾರಾಧನೆ ಕಾರ್ಯಕ್ರಮಗಳು ನಡೆಯಲಿದೆ. 7ರಂದು ಬೆಳಿಗ್ಗೆ ಎಲ್ಲಾ ಸಾನ್ನಿಧ್ಯಗಳ ಶುದ್ಧಿ ಕಲಶ ಹೋಮ, ಪ್ರಸಾದ ವಿತರಣೆಯೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕ್ಷೇತ್ರಾಡಳಿತ ಸಮಿತಿ ಗೌರವ ಅಧ್ಯಕ್ಷ ಜಯಂತ ನಡುಬೈಲು, ಅಧ್ಯಕ್ಷ ಪೀತಾಂಬರ ಹೆರಾಜೆ, ಉಪಾಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಗೆಜ್ಜೆಗಿರಿ ನೇಮೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಜನಾರ್ದನ ಪೂಜಾರಿ ಪದಡ್ಕ ಹಾಜರಿದ್ದರು.

6ರಂದು ಧಾರ್ಮಿಕ ಸಭಾ ಕಾರ್ಯಕ್ರಮ

ಮಾರ್ಚ್‌ 6ರಂದು ಸಂಜೆ ಸೋಲೂರು ಮಠದ ಆರ್ಯ ಈಡಿಗ ಮಹಾಸಂಸ್ಥಾನದ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಗೆಜ್ಜೆಗಿರಿ ಕ್ಷೇತ್ರದ ಅಧ್ಯಕ್ಷ ಪೀತಾಂಬರ ಹೇರಾಜೆ ಅಧ್ಯಕ್ಷತೆ ವಹಿಸುವರು. ಸಚಿವರಾದ ವಿ.ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಸಂಜೀವ ಮಠಂದೂರು, ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಮಾಜಿ ಸಚಿವರಾದ ಬಿ. ರಮಾನಾಥ ರೈ, ವಿನಯಕುಮಾರ್ ಸೊರಕೆ, ಮಾಜಿ ಶಾಸಕ ವಸಂತ ಬಂಗೇರ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಡಾ.ರಾಜಶೇಖರ್ ಕೋಟ್ಯಾನ್, ಮುಂಬೈ ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ಹರೀಶ್ ಜಿ.ಅಮೀನ್ ಭಾಗವಹಿಸುವರು ಎಂದು ಸತೀಶ್ ಕುಮಾರ್ ಕಡೆಂಜಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.