ಉಳ್ಳಾಲ: ಒಣಗಲು ಹಾಕಿದ್ದ ಬಟ್ಟೆ ತೆಗೆಯಲು ಮುಂದಾದ 15 ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಕುತ್ತಾರು ಸಿಲಿಕೋನಿಯ ವಸತಿ ಸಂಕೀರ್ಣದಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಖಾಸಗಿ ಆಸ್ಪತ್ರೆಯ ಅನೆಸ್ತೇಷಿಯಾ ವಿಭಾಗದ ಅಸೋಸಿಯೇಟ್ ಪ್ರೊ.ಮುಮ್ತಾಝ್ ಅಹಮ್ಮದ್, ಸರ್ಜಿಕಲ್ ಗ್ಯಾಸ್ಟ್ರಾಂಟ್ರಾಲಜಿ ವಿಭಾಗದ ಪ್ರೊ. ಖಮರ್ಜಾ ಎಂಬುವರ ಪುತ್ರಿ ಹಿಬಾಹ್ ಐಮಾನ್ (15) ಮೃತ ಬಾಲಕಿ.
ದಂಪತಿ ವೈದ್ಯರು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ ಸಹೋದರನ ಜೊತೆಗೆ ಮನೆಯಲ್ಲಿದ್ದ ಹಿಬಾಹ್, ರಾತ್ರಿ ವೇಳೆ 12ನೇ ಮಹಡಿಯ ಫ್ಲ್ಯಾಟ್‌ನಲ್ಲಿ ಒಣಗಿಸಲು ಹಾಕಿದ ಬಟ್ಟೆಯನ್ನು ಕುರ್ಚಿ ಮೇಲೆ ಹತ್ತಿ ತೆಗೆಯಲು ಮುಂದಾದಾಗ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾಳೆ. ಗಂಭೀರ ಗಾಯಗೊಂಡ ಬಾಲಕಿ ಹಿಬಾಹ್ ಐಮಾನ್ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಬಟ್ಟೆ ಸುತ್ತಿದ ರೀತಿಯಲ್ಲಿ ವಿದ್ಯಾರ್ಥಿನಿ ಮೃತದೇಹವಿದ್ದು, ಕೆಳಗೆ ಬೀಳುವ ಹೊತ್ತಿನಲ್ಲಿ ಬಟ್ಟೆ ಸಂಪೂರ್ಣ ಸುತ್ತಿರುವ ಸಾಧ್ಯತೆಯಿದೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಂಗಳೂರಿನ ಹೊಸ ಮನೆಗೆ ಶಿಫ್ಟ್ ಆಗಲೆಂದು ಮನೆಮಂದಿ ಸಿದ್ಧತೆಯಲ್ಲಿರುವಾಗಲೇ ದುರಂತ ಸಂಭವಿಸಿದೆ. ಮನೆ ಹೊರಗಡೆ ಇದ್ದ ಸಹೋದರ ಮನೆಯೊಳಗೆ ಬಂದಾಗ ಸಹೋದರಿ ಕಾಣದೆ ಇದ್ದುದನ್ನು ಕಂಡು ಹೆತ್ತವರಿಗೆ ಕರೆ ಮಾಡಿದ್ದ. ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ಮುಮ್ತಾಝ್ ನೆರೆಮನೆಯ ವೈದ್ಯರೊಬ್ಬರಿಗೆ ಕರೆ ಮಾಡಿದಾಗ ಮಗುವೊಂದು ಮಹಡಿಯಿಂದ ಕೆಳಬಿದ್ದಿರುವುದನ್ನು ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.