ADVERTISEMENT

ಬೃಹತ್‌ ಪ್ರಮಾಣದ ಚಿನ್ನ ವಶ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 16:05 IST
Last Updated 5 ಫೆಬ್ರುವರಿ 2020, 16:05 IST

ಬದಿಯಡ್ಕ: ಕಾಸರಗೋಡು ಜಿಲ್ಲಾ ಕಸ್ಟಮ್ಸ್‌ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ಸುಮಾರು 15.5 ಕೆ.ಜಿ. ಚಿನ್ನವನ್ನು ಮಂಗಳವಾರ ವಶಪಡಿಸಿಕೊಳ್ಳಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಸಾಂಗ್ಲಿಯ ಕಡಪಾಡಿ ನಿವಾಸಿ ಖೇತನ್ (29) ಹಾಗೂ ಆಕಾಶ್ (23) ಎಂಬುವರನ್ನು ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ.

ಕಣ್ಣೂರಿನಿಂದ ಅಕ್ರಮವಾಗಿ ಚಿನ್ನ ಸಾಗಿಸುತ್ತಿರುವ ಬಗ್ಗೆ ಗುಪ್ತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಕಾಸರಗೋಡು ಕಸ್ಟಮ್ಸ್‌ ನಿಯಂತ್ರಣ ಘಟಕದ ಅಧಿಕಾರಿ ಪಿ.ಪಿ.ರಾಜೀವನ್ ನೇತೃತ್ವದಲ್ಲಿ ಹವಾಲ್ದಾರ್‌ ಕೆ. ಆನಂದ ಹಾಗೂ ಕೆ. ಚಂದ್ರಶೇಖರ ಕಾರ್ಯಾಚರಣೆ ನಡೆಸಿದರು.

ADVERTISEMENT

ಕಾರು ಹಾಗೂ ಚಿನ್ನವನ್ನು ಪಿಲಿಕುಂಜೆಯ ಕಸ್ಟಮ್ಸ್‌ ಕಚೇರಿಗೆ ಸಾಗಿಸಲಾಗಿದೆ. ಕಾರಿನ ಎದುರುಗಡೆಯ ಇನ್ನೊಂದು ಆಸನದ ಅಡಿಭಾಗದಲ್ಲಿ ಗುಪ್ತವಾಗಿ ನಿರ್ಮಿಸಿದ ಪೆಟ್ಟಿಗೆಯೊಳಗೆ ಚಿನ್ನಾಭರಣವನ್ನು ಇಡಲಾಗಿತ್ತು. ಕಲ್ಲಿಕೋಟೆಯ ಕಸ್ಟಮ್ಸ್‌ ಸಹಾಯಕ ಆಯುಕ್ತ ವಿಕಾಸ್ ಅವರು ಬುಧವಾರ ಕಾಸರಗೋಡಿಗೆ ಭೇಟಿ ನೀಡಿ, ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.