ಮಂಗಳೂರು: ತೆಂಗಿನ ಗರಿಗಳನ್ನು ತಿನ್ನುವ ಕಪ್ಪು ತಲೆಯ ಕಂಬಳಿ ಹುಳುವಿನ ಕಾಟ ಈ ಬಾರಿ ಮಂಗಳೂರು ನಗರದಲ್ಲಿ ಜೋರಾಗಿದೆ. ಕೆಲವು ವರ್ಷಗಳಲ್ಲಿ ಉಳ್ಳಾಲ ಮತ್ತು ತೊಕ್ಕೊಟ್ಟು ಭಾಗದಲ್ಲಿ ಈ ಹುಳುವಿನ ಕಾಟ ಜೋರಾಗಿತ್ತು. ಈಗ ನಗರದ ಕುಂಟಿಕಾನ ಸುತ್ತಮುತ್ತ ಹೆಚ್ಚು ಕಂಡುಬಂದಿದೆ ಎಂದು ಕಾಸರಗೋಡಿನ ಕೇಂದ್ರೀಯ ತೋಟಗಾರಿಕೆ ಬೆಳೆಗಳ ಸಂಶೋಧನ ಕೇಂದ್ರದ (ಸಿಪಿಸಿಆರ್‌ಐ) ನಿರ್ದೇಶಕ ಕೆ.ಬಾಲಚಂದ್ರ ಹೆಬ್ಬಾರ್ ತಿಳಿಸಿದರು.
ಕಪ್ಪು ತಲೆಯ ಕಂಬಳಿ ಹುಳವನ್ನು (ಬ್ಲ್ಯಾಕ್ ಹೆಡೆಡ್ ಕ್ಯಾಟರ್‌ಪಿಲ್ಲರ್) ಜೈವಿಕವಾಗಿ ನಾಶ ಮಾಡುವ ಗೋನಿಯೊಝಸ್ ಕೀಟವನ್ನು ಸೇಂಟ್ ಅಲೋಶಿಯಸ್ ಕಾಲೇಜು ಆವರಣದ ತೆಂಗಿನ ಮರಗಳಿಗೆ ಶುಕ್ರವಾರ ಬಿಡುಗಡೆ ಮಾಡಿದ ನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
‘ಕಪ್ಪುತಲೆಯ ಕಂಬಳಿ ಹುಳು ತೆಂಗಿನ ಗರಿಗಳನ್ನು ತಿನ್ನುತ್ತದೆ. ಕೊನೆಗೆ ಕಡ್ಡಿ ಮಾತ್ರ ಉಳಿಯುತ್ತದೆ. ಇದನ್ನು ನಿಯಂತ್ರಿಸದೇ ಇದ್ದರೆ ತೆಂಗಿನ ಮರ ದುರ್ಬಲವಾಗುತ್ತದೆ. ನಂತರ ಅದು ಬಲ ಪಡೆದುಕೊಳ್ಳಬೇಕಾದರೆ ಹೆಚ್ಚುವರಿ ಗೊಬ್ಬರ ಹಾಕಿ ಆರೈಕೆ ಮಾಡಬೇಕಾಗುತ್ತದೆ. ಈ ಹುಳದ ನಿಯಂತ್ರಣಕ್ಕೆ ಮೇಲೆ ಹತ್ತಿ ಔಷಧ ಸಿಂಪಡಿಸುವುದು ಕಷ್ಟ. ಜೈವಿಕ ನಿಯಂತ್ರಣವೇ ಇದಕ್ಕೆ ಉತ್ತಮ ಮದ್ದು’ ಎಂದು ಅವರು ಹೇಳಿದರು.
ಗೋನಿಯೊಝಸ್ ಕೀಟವನ್ನು ಎರಡು ದಶಕಗಳಿಗೂ ಹೆಚ್ಚು ಸಮಯದಿಂದ ಪ್ರಯೋಗಿಸುತ್ತಿದ್ದು ಸಿಪಿಸಿಆರ್‌ಐ, ಕೆವಿಕೆ ಮತ್ತು ತುಂಬೆಯಲ್ಲಿರುವ ಜಿಲ್ಲಾ ಪ್ರಯೋಗಾಲಯದಲ್ಲಿ ಇವುಗಳನ್ನು ತಯಾರಿಸಲಾಗುತ್ತಿದೆ. ಒಂದು ಬಾರಿ 20 ಗೋನಿಯೊಝಸ್ ಬಿಟ್ಟರೆ ಅವುಗಳು ಕಪ್ಪು ತಲೆಯ ಕಂಬಳಿ ಹುಳದ ಲಾರ್ವದ ಮೇಲೆ ಆಕ್ರಮಣ ಮಾಡಿ ತಿಂದು ಹಾಕುತ್ತವೆ. ಈ ಹುಳ ಒಂದು ಮರದಲ್ಲಿ ಉಳಿದುಕೊಂಡಿದ್ದರೂ ಸಮೀಪದ ಮರಗಳ ಮೇಲೆ ಆಕ್ರಮಣ ಮಾಡುವ ಸಾಧ್ಯತೆ ಇದೆ. ಹೀಗಾಗಿ ಇವುಗಳ ನಾಶಕ್ಕೆ ಸಾಮೂಹಿಕ ಪ್ರಯತ್ನ ಅಗತ್ಯ’ ಎಂದು ಅವರು ಅಭಿಪ್ರಾಯಪಟ್ಟರು.
ಹುಳವೊಂದಕ್ಕೆ 30 ಪೈಸೆ!
ಒಂದು ಗೋನಿಯೊಝಸ್ ಹುಳದ ತಯಾರಿಗೆ 30 ಪೈಸೆ ವೆಚ್ಚವಾಗುತ್ತದೆ. ಒಂದು ಬಾರಿ ಒಂದು ಮರಕ್ಕೆ ₹ 6 ವೆಚ್ಚ ಮಾಡಿದರೆ ಕಪ್ಪು ತಲೆಯ ಕಂಬಳಿ ಹುಳವನ್ನು ನಿಯಂತ್ರಿಸಬಹುದು. ಪ್ರತಿ ವರ್ಷ ಸುಮಾರು 12 ಲಕ್ಷ ಕೀಟಗಳ ಉತ್ಪಾದನೆ ಮಾಡಲಾಗುತ್ತದೆ. ಅಕ್ಕಿಯಲ್ಲಿ ಇರುವ ಹುಳದಂತೆ ಕಾಣುವ ಇದನ್ನು ಟೆಸ್ಟ್ ಟ್ಯೂಬ್‌ನಲ್ಲಿ ಇರಿಸಲಾಗುತ್ತದೆ ಎಂದು ತೋಟಗಾರಿಕೆ ಇಲಾಖೆಯ ಮಂಗಳೂರು ತಾಲ್ಲೂಕು ಸಹಾಯಕ ನಿರ್ದೇಶಕ ಪ್ರವೀಣ್ ತಿಳಿಸಿದರು.
ಹಾರುವ ಸಾಮರ್ಥ್ಯವೂ ಇರುವ ಗೋನಿಯೊಝಸ್ ಅತಿವೇಗವಾಗಿ ಕಪ್ಪು ತಲೆಯ ಕಂಬಳಿ ಹುಳದ ಮೇಲೆ ಆಕ್ರಮಣ ಮಾಡಿ ಲಾರ್ವಗಳನ್ನು ತಿಂದು ಹಾಕುತ್ತದೆ. ಜೊತೆಯಲ್ಲಿ ತನ್ನ ಸಂತತಿಯನ್ನೂ ಶೀಘ್ರವಾಗಿ ಹೆಚ್ಚಿಸಿಕೊಳ್ಳುತ್ತದೆ. ಎಲ್ಲ ಕೀಟಗಳನ್ನು ತಿಂದು ಮುಗಿಸಿದ ನಂತರ ಆಹಾರ ಇಲ್ಲದೆ ತಾನೂ ಸಾಯುತ್ತದೆ. ಹೀಗಾಗಿ ಗೋನಿಯೊಝಸ್ ವಿಪರೀತವಾಗಿ ಬೆಳೆದು ಪರಿಸರಕ್ಕೆ ತೊಂದರೆ ಆಗುವುದಿಲ್ಲ ಎಂದು ಅವರು ತಿಳಿಸಿದರು.
ಮನೆಗಳ ಬಳಿ ಬೆಳೆಸಿದ ಅಥವಾ ತೋಟದಲ್ಲಿರುವ ತೆಂಗಿನ ಮರಗಳ ಎಲೆಗಳನ್ನು ಹುಳ ತಿನ್ನುತ್ತಿರುವುದು ಗಮನಕ್ಕೆ ಬಂದರೆ ತೋಟಗಾರಿಕೆ ಇಲಾಖೆಗೆ ಮಾಹಿತಿ ನೀಡಬೇಕು. ಅಧಿಕಾರಿಗಳು ಬಂದು ಪರಿಶೀಲನೆ ಮಾಡಿ ಕಪ್ಪು ತಲೆಯ ಕಂಬಳಿ ಹುಳದ ಕಾಟ ಎಂದು ಖಾತರಿಪಡಿಸಿಕೊಂಡ ನಂತರ ಗೋನಿಯೊಝಸ್ ಕೀಟಗಳನ್ನು ಬಿಡುತ್ತಾರೆ ಎಂದು ಅವರು ಮಾಹಿತಿ ನೀಡಿದರು.
ಸಿಪಿಸಿಆರ್‌ಐ ಬೆಳೆ ಸಂರಕ್ಷಣಾ ವಿಭಾಗದ ನಿರ್ದೇಶಕ ವಿನಾಯಕ ಹೆಗಡೆ, ಸೇಂಟ್ ಅಲೋಶಿಯಸ್ ಕಾಲೇಜಿನ ಫಾದರ್ ಲಿಯೊ ಡಿಸೋಜ, ತೋಟಗಾರಿಕೆ ಇಲಾಖೆಯ ಜಿಲ್ಲಾ ಉಪನಿರ್ದೇಶಕಿ ಜಾನಕಿ, ಉಡುಪಿ ಜಿಲ್ಲಾ ಉಪನಿರ್ದೇಶಕಿ ಭುವನೇಶ್ವರಿ, ಸಿಪಿಸಿಆರ್‌ಐ ವಿಜ್ಞಾನಿ ಪ್ರತಿಭಾ, ವಿಟ್ಲ ಕೇಂದ್ರದ ವಿಜ್ಞಾನಿ ಸನೀರ ಮುಂತಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.