ADVERTISEMENT

ಧರ್ಮಸ್ಥಳದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಎಚ್‌.ಡಿ. ರೇವಣ್ಣ

​ಪ್ರಜಾವಾಣಿ ವಾರ್ತೆ
Published 27 ಮೇ 2024, 9:59 IST
Last Updated 27 ಮೇ 2024, 9:59 IST
   

ಬೆಳ್ತಂಗಡಿ: ಜೆಡಿಎಸ್ ಶಾಸಕ ಎಚ್.ಡಿ‌. ರೇವಣ್ಣ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿ ಹಾಗೂ ಅಮ್ಮನವರ ಸನ್ನಿಧಿಯಲ್ಲಿ ಸೋಮವಾರ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ತಮ್ಮ, ಮಕ್ಕಳಾದ ಪ್ರಜ್ವಲ್ ,ಸೂರಜ್ ಹಾಗೂ ಪತ್ನಿ ಭವಾನಿ ಹೆಸರಲ್ಲಿ ಅಭಿಷೇಕ ಮಾಡಿ ಪೂಜೆ ಸಲ್ಲಿಸಿದರು.

ಪೂಜೆ ಬಳಿಕ ಸುಮಾರು 20 ನಿಮಿಷ ಮಂಜುನಾಥ ಸ್ವಾಮಿ ದೇವರ ಮುಂದೆ ಕೈಮುಗಿದು ಕಣ್ಣು ಮುಚ್ಚಿ ಧ್ಯಾನಿಸಿದರು. ಬಳಿಕ ಅಮ್ಮನವರ ಮುಂದೆ ರೇವಣ್ಣ ಸುಮಾರು 15 ನಿಮಿಷ ಧ್ಯಾನದಲ್ಲಿ ನಿರತರಾದರು.

ADVERTISEMENT

ಬಳಿಕ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, '40 ವರ್ಷಗಳಿಂದ ರಾಜಕಾರಣಿದಲ್ಲಿದ್ದೇನೆ. 25 ವರ್ಷ ಶಾಸಕನಾಗಿ ಕೆಲಸ ಮಾಡಿದ್ದೇನೆ. ಕಾನೂನು ಬಗ್ಗೆ ಗೌರವವಿದೆ ದೇವರ ಬಗ್ಗೆ ನಂಬಿಕೆಯಿದೆ. ನನ್ನ ವಿರುದ್ಧ ದಾಖಲಾಗಿರುವ.ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿರುವುದರಿಂದ ನಾನು ಈ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ರಾಜ್ಯದ ಜನತೆ ಮೇಲೆ ಹಾಗೂ ನ್ಯಾಯಾಲಯದ ಮೇಲೆ ನಂಬಿಕೆ ಇದೆ ' ಎಂದರು.

'ಮಂಜುನಾಥ ಸ್ವಾಮಿ ಮೇಲೆ ನನಗೆ ನಂಬಿಕೆಯಿದೆ. ವಿಶೇಷ ದಿನವಾದ ಸೋಮವಾರ ಮಂಜುನಾಥ ಸ್ವಾಮಿಯ ದರ್ಶನ ಮಾಡಿದ್ದೇನೆ' ಎಂದು ತಿಳಿಸಿದರು.

'ಹಾಸನ ಚಲೋ ಕಾರ್ಯಕ್ರಮದ ಬಗ್ಗೆ ಗೊತ್ತಿಲ್ಲ. ಎಚ್.ಡಿ.ದೇವೆಗೌಡರು ಪತ್ರ ಬರೆದಿರುವ ಬಗ್ಗೆಯೂ ಗೊತ್ತಿಲ್ಲ. ಉಳಿದ ಯಾವುದರ ಬಗ್ಗೆಯೂ ಸದ್ಯ ಪ್ರತಿಕ್ರಿಯೆ ನೀಡಲಾರೆ' ಎಂದು ಹೇಳಿ ಸ್ಥಳದಿಂದ ತೆರಳಿದರು.

ಅವರು ಹಾಸನದಿಂದ ಭಾನುವಾರ ರಾತ್ರಿಯೇ ಕಾರಿನಲ್ಲಿ ಬಂದು ಧರ್ಮಸ್ಥಳದ ವಸತಿ ಗೃಹವೊಂದರಲ್ಲಿ ವಾಸ್ತವ್ಯ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.