ADVERTISEMENT

ಅಪಾಯಕಾರಿ ಸ್ಥಿತಿಯಲ್ಲಿ ಆರೋಗ್ಯ ಕೇಂದ್ರ ಕಟ್ಟಡ: ತೆರವಿಗೆ ಜಿಲ್ಲಾಧಿಕಾರಿ ಸೂಚನೆ

ಇರುವೈಲಿನಲ್ಲಿ ಜಿಲ್ಲಾಧಿಕಾರಿ ಗ್ರಾಮವಾಸ್ತವ್ಯ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 5:09 IST
Last Updated 26 ನವೆಂಬರ್ 2022, 5:09 IST
ಮೂಡುಬಿದಿರೆಯ ಇರುವೈಲಿನಲ್ಲಿ ಶುಕ್ರವಾರ ನಡೆದ ಗ್ರಾಮವಾಸ್ತವ್ಯದಲ್ಲಿ ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಮಾತನಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ವಲೇರಿಯನ್ ಕುಟಿನ್ಹಾ ಇದ್ದರು.
ಮೂಡುಬಿದಿರೆಯ ಇರುವೈಲಿನಲ್ಲಿ ಶುಕ್ರವಾರ ನಡೆದ ಗ್ರಾಮವಾಸ್ತವ್ಯದಲ್ಲಿ ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಮಾತನಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ವಲೇರಿಯನ್ ಕುಟಿನ್ಹಾ ಇದ್ದರು.   

ಮೂಡುಬಿದಿರೆ: ಇರುವೈಲು ಗ್ರಾಮದ ಕೊನ್ನೆಪದವಿನಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಆರೋಗ್ಯ ಕೇಂದ್ರ ಕಟ್ಟಡವನ್ನು ತೆರವುಗೊಳಿಸಿ ಹೊಸ ಕಟ್ಟಡಕ್ಕೆ ಪ್ರಸ್ತಾವ ಕಳಿಸುವಂತೆ ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಅವರು ತಾಲ್ಲೂಕು ಆರೋಗ್ಯಾಧಿಕಾರಿಗೆ ಸೂಚಿಸಿದರು.

ಇರುವೈಲಿನಲ್ಲಿ ಶುಕ್ರವಾರ ಜಿಲ್ಲಾಧಿಕಾರಿಯ ಗ್ರಾಮ ವಾಸ್ತವ್ಯ ನಡೆಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ವಲೇರಿಯನ್ ಕುಟಿನ್ಹಾ ಗಮನ ಸೆಳೆದ ವಿಷಯಕ್ಕೆ ಜಿಲ್ಲಾಧಿಕಾರಿ ಉತ್ತರಿಸಿದರು.

ತೋಡಾರು, ಇರುವೈಲು ಸುತ್ತಮುತ್ತ ಸುಮಾರು 300 ಎಕರೆ ಜಾಗವನ್ನು ಡೀಮ್ಡ್ ಅರಣ್ಯವೆಂದು ಗುರುತಿಸಲಾಗಿದ್ದು, ಶೇ 50ರಷ್ಟು ತೆರವುಗೊಂಡಿದೆ. ಅರಣ್ಯ ಇಲಾಖೆಯು ಅರಣ್ಯಕ್ಕೆ ಮೀಸಲಾದ ಜಾಗದ ಗಡಿ ಗುರುತು ನಡೆಸುವಂತೆ ಹಾಗೂ ಕಂದಾಯ ಮತ್ತು ಸರ್ವೆ ಇಲಾಖೆಯು ಕಂದಾಯಕ್ಕೆ ಸಂಬಂಧಿಸಿದ ಜಾಗದ ಗುರುತು ಮಾಡುವಂತೆ ತಿಳಿಸಿದ ಅವರು ಡೀಮ್ಡ್ ಅರಣ್ಯ ವಿರಹಿತವಾದ ಸ್ಥಳವನ್ನು ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಲು ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅವರು ಗ್ರಾಮ ಪಂಚಾಯಿತಿ ಹಾಗೂ ತಹಶೀಲ್ದಾರ್‌ಗೆ ನಿರ್ದೇಶನ ನೀಡಿದರು.

ADVERTISEMENT

ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕವಾಗುವ ಜಾತಿ ಪ್ರಮಾಣಪತ್ರ, ಆದಾಯಪ್ರಮಾಣ ಪತ್ರಕ್ಕೆ ಬರುವ ಅರ್ಜಿಗಳನ್ನು ಅಂದೇ ಇತ್ಯರ್ಥಗೊಳಿಸಬೇಕು. ರೈತರ ಜಮೀನಿಗೆ ಸಂಬಂಧಪಟ್ಟ ಮ್ಯೂಟೇಶನ್, ಖಾತೆ ಬದಲಾವಣೆಯನ್ನು ಇತ್ಯರ್ಥಪಡಿಸಲು ವಿಳಂಬ ಮಾಡಬಾರದು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಶಾಸಕ ಉಮಾನಾಥ ಕೋಟ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ವಲೇರಿಯನ್ ಕುಟಿನ್ಹಾ ಅಧ್ಯಕ್ಷತೆ ವಹಿಸಿದ್ದರು. ಉಪ ವಿಭಾಗಾಧಿಕಾರಿ ಮದನ್ ಕುಮಾರ್, ತಹಶೀಲ್ದಾರ್ ಸಚ್ಚಿದಾನಂದ ಸತ್ಯಪ್ಪ ಕುಚನೂರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ದಯಾವತಿ, ಇರುವೈಲ್ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕುಮಾರ್ ಉಪಸ್ಥಿತರಿದ್ದರು.

ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. 37 ಮಂದಿಗೆ ಹಕ್ಕುಪತ್ರ, 20 ಮಂದಿಗೆ ಪಿಂಚಣಿ ಪತ್ರ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.