ADVERTISEMENT

ಬೆಳ್ತಂಗಡಿ: ಭಾರಿ ಮಳೆಗೆ ಕೆಲವೆಡೆ ಹಾನಿ

ಬೆಳ್ತಂಗಡಿ ತಾಲ್ಲೂಕಿನಾದ್ಯಂತ ಮುಂದುವರಿದ ಮಳೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 5:14 IST
Last Updated 4 ಜುಲೈ 2025, 5:14 IST
ಲಾಯಿಲದಲ್ಲಿ ಗಾಳಿಗೆ ಮನೆಯ ಶೀಟುಗಳು ಹಾರಿ ಹೋಗಿರುವುದು 
ಲಾಯಿಲದಲ್ಲಿ ಗಾಳಿಗೆ ಮನೆಯ ಶೀಟುಗಳು ಹಾರಿ ಹೋಗಿರುವುದು    

ಬೆಳ್ತಂಗಡಿ: ತಾಲ್ಲೂಕಿನಲ್ಲಿ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ಗುರುವಾರ ಗುಡುಗು, ಗಾಳಿ ಸಹಿತ ಭಾರಿ ಮಳೆಯಾಗಿದ್ದು, ಕೆಲವೆಡೆ ಹಾನಿಯಾದ ಘಟನೆ ವರದಿಯಾಗಿದೆ.

ಲಾಯಿಲ ಗ್ರಾಮದ ಅಂಕಾಜೆ ನಿನ್ನಿಕಲ್ಲು ಬಳಿಯ ಜೋಕಿಂ ಸಿಕ್ವೇರ ಅವರ ಎರಡು ಮನೆಗಳ ಚಾವಣಿಗೆ ಗುರುವಾರ ಮಧ್ಯಾಹ್ನ ಬೀಸಿದ ಗಾಳಿಯಿಂದ ಸಂಪೂರ್ಣ ಹಾನಿಯಾಗಿದೆ. ಮನೆಯಲ್ಲಿದ್ದ ಬಾಡಿಗೆದಾರರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಈ ಮನೆಗಳಲ್ಲಿ ವಾಸವಿದ್ದವರನ್ನು ಸಂಬಂಧಿಕರ ಮನೆಗೆ ಹೋಗಲು ಸೂಚಿಸಲಾಗಿದೆ.

ಹುಣ್ಸೆಕಟ್ಟೆ ಶಾಲೆಯ ಶೌಚಾಲಯದ ಶೀಟುಗಳು ಗಾಳಿಗೆ ಹಾರಿ ಹೋಗಿವೆ. ಉಜಿರೆ ಮೆಸ್ಕಾಂ ಉಪ ವಿಭಾಗದ ಮಾಚಾರು ಬಳಿ ಗಾಳಿಗೆ ಒಂದು ವಿದ್ಯುತ್ ಪರಿವರ್ತಕ, ಡಿಪಿ ಸೆಟ್ ಹಾಗೂ ಆರು ಎಚ್‌ಟಿ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಗಾಳಿಯ ಪರಿಣಾಮ ಅಡಿಕೆ, ರಬ್ಬರ್ ಗಿಡಗಳ ಸಹಿತ ಅಲ್ಲಲ್ಲಿ ಮರಗಳು ಉರುಳಿ ಬಿದ್ದಿವೆ.

ADVERTISEMENT

ನೇತ್ರಾವತಿ, ಮೃತ್ಯುಂಜಯ, ಕಪಿಲಾ, ಸೋಮಾವತಿ, ಫಲ್ಗುಣಿ ಮೊದಲಾದ ನದಿಗಳ ನೀರಿನ ಹರಿವಿನ ಮಟ್ಟ ಹೆಚ್ಚಿದೆ. ಈ ನದಿಗಳ ಕಿಂಡಿ ಅಣೆಕಟ್ಟುಗಳ ವ್ಯಾಪ್ತಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮರಮಟ್ಟು, ತ್ಯಾಜ್ಯ ಸಂಗ್ರಹಗೊಂಡಿದೆ. ಈ ಬಾರಿ ಮೇ ಕೊನೆಯ ವಾರದಲ್ಲಿ ತಾಲ್ಲೂಕಿನ ನದಿಗಳಲ್ಲಿ ಸಾಮಾನ್ಯ ಪ್ರವಾಹದ ಸ್ಥಿತಿ ಕಂಡು ಬಂದು ಹಲವೆಡೆ ತೋಟಗಳು ಜಲಾವೃತವಾಗಿದ್ದವು. ಈ ವೇಳೆ ಕಿಂಡಿ ಅಣೆಕಟ್ಟುಗಳಲ್ಲಿ ಸಂಗ್ರಹಗೊಂಡಿರುವ ತ್ಯಾಜ್ಯದೊಂದಿಗೆ ಈಗ ಇನ್ನಷ್ಟು ಹೆಚ್ಚಿನ ತ್ಯಾಜ್ಯ ಸಂಗ್ರಹಗೊಂಡಿದೆ.

ಉಜಿರೆ ಮೆಸ್ಕಾಂ ಉಪ ವಿಭಾಗದ ಮಾಚಾರು ಬಳಿ ವಿದ್ಯುತ್ ಪರಿವರ್ತಕಕ್ಕೆ ಹಾನಿ ಉಂಟಾಗಿರುವುದು.
ಮುಂಡಾಜೆಯ ಮೃತ್ಯುಂಜಯ ನದಿಯ ಕಿಂಡಿ ಅಣೆಕಟ್ಟಿನಲ್ಲಿ ಸಂಗ್ರಹವಾಗಿರುವ ತ್ಯಾಜ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.