
ಬೆಳ್ತಂಗಡಿ: ‘ಹಿಂದೂ ಸಂಗಮ ಕಾರ್ಯಕ್ರಮವು ಯಾವುದೇ ಸಂಘಟನೆ ಅಥವಾ ವ್ಯಕ್ತಿಯ ಕಾರ್ಯಕ್ರಮವಲ್ಲ, ಸಮಾಜದೊಳಗಿನ ಶಕ್ತಿಯನ್ನು ಒಂದೇ ವೇದಿಕೆಗೆ ತರುವ, ಸಮಾಜವೇ ರೂಪಿಸಿ ಸಮಾಜವೇ ನಡೆಸುವ ಸಾಮಾಜಿಕ ಅಭಿಯಾನವಾಗಿದೆ. ಜ.18ರಂದು ಪ್ರಾರಂಭವಾಗಿ ಫೆ.1ರವರೆಗೆ ತಾಲ್ಲೂಕಿನ ಏಳು ಪ್ರಮುಖ ಕೇಂದ್ರಗಳಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಹಿಂದೂ ಸಂಗಮ ಆಯೋಜನಾ ಸಮಿತಿ ಬೆಳ್ತಂಗಡಿ ತಾಲ್ಲೂಕು ಸಂಯೋಜಕ ಅನಿಲ್ ಕುಮಾರ್ ಯು ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಸಮಾಜದಲ್ಲಿ ಕೌಟುಂಬಿಕ ಮೌಲ್ಯಗಳು ಕ್ಷೀಣಿಸುತ್ತಿರುವುದು, ಸಾಮಾಜಿಕ ಸಾಮರಸ್ಯಕ್ಕೆ ಸವಾಲುಗಳು ಎದುರಾಗುತ್ತಿರುವುದು, ಸ್ವಾವಲಂಬಿ–ಸ್ವಾಭಿಮಾನಿ ಜೀವನ ಪದ್ಧತಿಯ ಅವಶ್ಯಕತೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಈ ಕಾರ್ಯಕ್ರಮ ರೂಪಿಸಲಾಗಿದೆ. ಸಮಾಜದಲ್ಲಿ ಜಾಗೃತಿ ಮೂಡಿಸಿ, ಸಕಾರಾತ್ಮಕ ಚಿಂತನೆ, ಕ್ರಿಯಾಶೀಲತೆ ಬೆಳೆಸುವುದೇ ಇದರ ಉದ್ದೇಶ. ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಸೇವಾ, ಕ್ರೀಡಾ, ಕಲಾ ಮತ್ತು ಸಹಕಾರಿ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸ್ವಯಂಸೇವಾ ಸಂಸ್ಥೆಗಳು, ಸಂಘಟನೆಗಳು ಹಾಗೂ ಸಮುದಾಯದ ಹಿರಿಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ’ ಎಂದರು.
ಆಯೋಜನಾ ಸಮಿತಿ ತಾಲ್ಲೂಕು ಅಧ್ಯಕ್ಷ ಅಜಿತ್ ಜಿ ಶೆಟ್ಟಿ ಮಾತನಾಡಿ , ‘ಹಿಂದೂ ಸಂಗಮದ ಯಶಸ್ಸಿಗಾಗಿ ಸ್ವಯಂಸೇವಕರ ತಂಡ ರೂಪಿಸಲಾಗಿದ್ದು, ಶಿಸ್ತು, ಸಮಯಪಾಲನೆ ಹಾಗೂ ಸಮನ್ವಯಕ್ಕೆ ಒತ್ತು ನೀಡಲಾಗಿದೆ. ಪ್ರತಿ ಮಂಡಲದಲ್ಲಿ ಮಾತೃ ಸಂಗಮ, ಮನೆ –ಮನೆ ಮಹಾ ಸಂಪರ್ಕ ಅಭಿಯಾನ, ಪಟ್ಟಣ ಪ್ರದೇಶಗಳಲ್ಲಿ ಹಿಂದೂ ಸಂಗಮ ಸಂಪರ್ಕ ಯಾತ್ರೆ ನಡೆಯುತ್ತಿವೆ’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷೆ ಪ್ರೀತಿ ರಾವ್, ಕಾರ್ಯದರ್ಶಿ ವಸಂತ ಮರಕಡ ಮಚ್ಚಿನ, ಗುರುವಾಯನಕೆರೆ ಮಂಡಲ ಸಂಯೋಜಕ ಚಿದಾನಂದ ಇಡ್ಯಾ, ಬಂದಾರು ಮಂಡಲ ಸಂಯೋಜಕ ಉದಯ ಬಿಕೆ, ಮಡಂತ್ಯಾರು ಮಂಡಲ ಸಂಯೋಜಕ ಶ್ರೀಕಾಂತ್ ಶೆಟ್ಟಿ ಇದ್ದರು.