ADVERTISEMENT

ಬಿದ್ದರೂ ಗುರಿ ಮುಟ್ಟಿದ ಕಂಬಳ ಓಟಗಾರ

ಹೊಕ್ಕಾಡಿಗೋಳಿ ಕಂಬಳ: ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 16:18 IST
Last Updated 6 ಡಿಸೆಂಬರ್ 2021, 16:18 IST
ಅರಿಬೈಲಿನಲ್ಲಿ ಕಂಬಳದ ಕೋಣಗಳ ಓಟ
ಅರಿಬೈಲಿನಲ್ಲಿ ಕಂಬಳದ ಕೋಣಗಳ ಓಟ   

ಬಂಟ್ವಾಳ: ಇಲ್ಲಿನ ಸಿದ್ಧಕಟ್ಟೆ ಸಮೀಪದ ಹೊಕ್ಕಾಡಿಗೋಳಿ ಕಂಬಳದಲ್ಲಿ ಕರೆಗೆ ಬಿದ್ದರೂ, ಛಲ ಬಿಡದ ಕಂಬಳ ಓಟಗಾರ ಗುರಿ ತಲುಪಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕಂಬಳ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಮಹಿಷಮರ್ಧಿನಿ ಕಂಬಳ ಸಮಿತಿ ವತಿಯಿಂದ ಹೊಕ್ಕಾಡಿಗೋಳಿಯಲ್ಲಿ ಭಾನುವಾರ ನಡೆದ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳದಲ್ಲಿ ಈ ಘಟನೆ ನಡೆದಿದೆ.

ಹಗ್ಗದ ಕಿರಿಯ ವಿಭಾಗದಲ್ಲಿ ಬಿಳಿಯೂರು ಪೆರ್ನೆ ವಿಷ್ಣುಮೂರ್ತಿ ದೇವತಾ ಗಣಪ ಭಂಡಾರಿ ಅವರ ಕೋಣಗಳನ್ನು ಉಡುಪಿ ಹಿರೇಬೆಟ್ಟು ಆಕಾಶ್ ಭಂಡಾರಿ ಓಡಿಸುತ್ತಿದ್ದರು. ಕರೆಯ ಮುಕ್ಕಾಲು ಭಾಗ ತಲುಪಿದಾಗ ಅವರು ಬಿದ್ದರು. ಆದರೆ, ಹಗ್ಗ ಕೈಬಿಡದೆ ಕೋಣಗಳು ಕೆಸರು ನೀರಿನಲ್ಲಿ ಎಳೆದೊಯ್ದರೂ ಅವರು ಹಗ್ಗ ಹಿಡಿದು ಗುರಿ ಮುಟ್ಟಿದರು. ಈ ಎದೆಗಾರಿಕೆ ಅವರನ್ನು ವಿಜಯಿಯನ್ನಾಗಿಸಿತು. ಆಕಾಶ್ ಭಂಡಾರಿ ಸಾಹಸ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ADVERTISEMENT

ಪುನೀತ್ ರಾಜ್ ಕುಮಾರ್ ನೆನಪು: ವೀರ ವಿಕ್ರಮ ಜೋಡುಕರೆ ಬಯಲು ಕಂಬಳದಲ್ಲಿ ಬೆಂಗಳೂರು ದೊಡ್ಮನೆ ಪುನೀತ್ ರಾಜ್ ಕುಮಾರ್ ಅಭಿಮಾನಿ ಬಳಗ ಹೆಸರಿನಲ್ಲಿ ಪಾಲ್ಗೊಂಡ ಓಟದ ಕೋಣಗಳು ಗಮನ ಸೆಳೆದವು. ಸ್ಥಳೀಯ ನಿವಾಸಿ ಕಿರಣ್ ಕುಮಾರ್ ಮಂಜಿಲ ಮತ್ತು ಯಶೋಧರ ಮಹಾಬಲ ಪೂಜಾರಿ ಸಹೋದರರು ನೇತೃತ್ವ ವಹಿಸಿದ್ದರು.

ಅರಿಬೈಲು ಕಂಬಳ ಸಂಪನ್ನ

ಕಾಸರಗೋಡು: ಅರಿಬೈಲು ನಾಗಬ್ರಹ್ಮ ದೇವರ ಕಂಬಳ ಭಾನುವಾರ ಸಾಂಪ್ರದಾಯಿಕ ವಿಧಾನಗಳೊಂದಿಗೆ ಜರುಗಿತು. ಕ್ಷೇತ್ರದ ತಂತ್ರಿ, ರಾಧಾಕೃಷ್ಣ ಅರಿನಾಯರು ಚಾಲನೆ ನೀಡಿದರು. ಗೋಪಾಲ ಶೆಟ್ಟಿ ಅರಿಬೈಲು ಕಂಬಳ ನಿರ್ವಹಣೆ ಮಾಡಿದರು. ಪಕೀರ ಮೂಲ್ಯ ಕಟ್ಟೆ, ರಮೇಶ ಮೂಲ್ಯ ಕಟ್ಟೆ ತೀರ್ಪುಗಾರರಾಗಿದ್ದರು.

ಕಂಬಳದಲ್ಲಿ ತಲಪಾಡಿ ಪಂಜಾಲ ಕೀರ್ತನ್ ರವೀಂದ್ರ ಪಕಳರ ಕೋಣಗಳು ಪ್ರಥಮ, ಕಡಂಬಾರು ಕೆಳಗಿನಮನೆ ಸಂಜೀವ ಮಾಧವ ಮಡಿವಾಳರ ಕೋಣ ದ್ವಿತೀಯ, ಕಾಜೂರು ಪಾಪಿಲ ಇಸುಬು ಬ್ಯಾರಿ ಕೋಣ ತೃತೀಯ, ನೇಗಿಲು ವಿಭಾಗದಲ್ಲಿ ಮುಳ್ಳೇರಿಯ ಎಡಪಾಡಿ ನಾರಾಯಣ ಶೆಟ್ಟಿ ಅವರ ಕೋಣ ಪ್ರಥಮ, ಕಾಡೂರು ಬೀಡು ಮಾರಪ್ಪ ಭಂಡಾರಿ ಅವರ ಕೋಣ ದ್ವಿತೀಯ, ಪಟ್ಟತ್ತ ಮುಗೇರು ಕೃಷ್ಣ ಶೆಟ್ಟಿ ಅವರ ಕೋಣ ತೃತೀಯ, ಆರೀಸ್ ಸೊಂಕಾಲ್, ಮುಳ್ಳೇರಿಯ ಕರ್ಲ ಕಟ್ಟದಮನೆ ಬಾಲಕೃಷ್ಣ ಶೆಟ್ಟಿ, ಪಜಿಂಗಾರು ಕಾಡಂಬೆಟ್ಟು ಆನಂದ ಮೊಗೇರ, ಕುಂಜತ್ತೂರು ಹೊಸಮನೆ ನಾಂಞ್ಞಿ ಶೆಟ್ಟಿ, ಪಾವೂರು ಪೊಯ್ಯೆ ಫ್ರೆಂಡ್ಸ್, ಉಪವಾಸದ ಕೋಣಗಳು ಪಾವೂರು ಮೋನು ಬ್ಯಾರಿ ಬಹುಮಾನಗಳನ್ನು ಪಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.