ADVERTISEMENT

ಗೇರು ಬೆಳೆಗಾರರಿಗೆ ಹೊಸ ಆ್ಯಪ್‌

ಬೆರಳ ತುದಿಯಲ್ಲಿ ಗೇರು ಕೃಷಿಯ ಮಾಹಿತಿ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2020, 7:41 IST
Last Updated 2 ಆಗಸ್ಟ್ 2020, 7:41 IST
ಕ್ಯಾಶು ಇಂಡಿಯಾ ಆ್ಯಪ್‌ನ ಮುಖಪುಟ
ಕ್ಯಾಶು ಇಂಡಿಯಾ ಆ್ಯಪ್‌ನ ಮುಖಪುಟ   

ಮಂಗಳೂರು: ಪುತ್ತೂರಿನ ಐಸಿಎಆರ್‌ನ ಗೇರು ಸಂಶೋಧನಾ ನಿರ್ದೇಶನಾಲಯವು, ಗೇರು ಬೆಳೆಗಾರರಿಗೆ ಸಂಪೂರ್ಣ ಮಾಹಿತಿ ನೀಡುವ ಹೊಸ ಆ್ಯಪ್‌ ‘ಕ್ಯಾಶು ಇಂಡಿಯಾ’ ಹೊರತಂದಿದೆ. ಈ ಮೂಲಕ ಗೇರು ಬೆಳೆಗಾರರು ಹಾಗೂ ಗೇರು ಉದ್ಯಮವನ್ನು ಸಂಪರ್ಕಿಸುವ ಕೊಂಡಿಯನ್ನು ರೂಪಿಸಿದೆ.

ಭಾರತದ 11 ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿರುವ ಈ ಆ್ಯಪ್‌ನಲ್ಲಿ ಗೇರು ಕೃಷಿಗೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿ ಲಭ್ಯವಾಗಲಿದೆ. ಗೇರು ಸಸಿಯ ಕಸಿ, ನರ್ಸರಿ, ಗೇರು ಗಿಡದ ಬೆಳವಣಿಗೆ, ಗಿಡದ ಸಂರಕ್ಷಣೆ, ಕೊಯ್ಲು, ಸಂಸ್ಕರಣೆ, ಮಾರುಕಟ್ಟೆ, ಇ–ಮಾರುಕಟ್ಟೆಯಂತಹ ಮಾಹಿತಿಗಳನ್ನು ಗೇರು ಕೃಷಿಕರಿಗೆ ಒದಗಿಸಲಾಗಿದೆ.

ಈ ಆ್ಯಪ್ ಅನ್ನು ಡೌನ್‌ಲೋಡ್‌ ಮಾಡುವ ಕೃಷಿಕರು ತಮ್ಮ ಬೆಳೆಯ ಚಿತ್ರಗಳು ಹಾಗೂ ವಿಡಿಯೊಗಳನ್ನು ಸಂಗ್ರಹ ಮಾಡಬಹುದು. ಜತೆಗೆ ಗೇರು ಬೆಳೆಯ ಪ್ರತಿ ಹಂತದ ಖರ್ಚು–ವೆಚ್ಚ, ನಿರ್ವಹಣೆಯಂತಹ ವಿಷಯಗಳನ್ನೂ ಸಂಗ್ರಹ ಮಾಡಬಹುದಾಗಿದೆ. ಕಸಿ ಮಾಡಿದ ಸಸಿಗಳನ್ನು ಆನ್‌ಲೈನ್‌ನಲ್ಲಿಯೇ ತರಿಸಿಕೊಳ್ಳಬಹುದು. ಮಾರ್ಕೆಟ್‌ ಇನ್ಫೋ ಮೂಲಕ ಗೇರು ಬೆಳೆಗಾರರು ತಮ್ಮ ಉತ್ಪನ್ನಗಳ ಮಾರಾಟವನ್ನೂ ಮಾಡಬಹುದು. ಅಲ್ಲದೇ ತಮಗೆ ಅಗತ್ಯವಿರುವ ಸಾಮಗ್ರಿಗಳನ್ನೂ ಕೊಂಡುಕೊಳ್ಳಬಹುದು.

ADVERTISEMENT

ಹಿಂದಿ, ಇಂಗ್ಲಿಷ್, ಗುಜರಾತಿ, ಮರಾಠಿ, ಕನ್ನಡ, ಮಲಯಾಳ, ತಮಿಳು, ತೆಲಗು, ಒರಿಯಾ, ಬೆಂಗಾಲಿ, ಗಾರೊ ಭಾಷೆಗಳಲ್ಲಿ ಈ ಆ್ಯಪ್‌ ಲಭ್ಯವಾಗಿದೆ. ಈ ಆ್ಯಪ್‌ನ ಪರಿಕಲ್ಪನೆ, ವಿನ್ಯಾಸ ಹಾಗೂ ಅಭಿವೃದ್ಧಿಯನ್ನು ಪುತ್ತೂರಿನ ಐಸಿಎಆರ್‌ನ ಸಂಶೋಧನಾ ನಿರ್ದೇಶನಾಲಯದ ಹಿರಿಯ ವಿಜ್ಞಾನ ಡಾ.ಮೋಹನ ಜಿ.ಎಸ್‌. ಹಾಗೂ ಅವರ ತಂಡ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.