ಬಂಟ್ವಾಳ: ಇಲ್ಲಿನ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ಬಳಿ 100 ವರ್ಷಗಳ ಹಿಂದೆ ಆರಂಭಗೊಂಡ ಶ್ರೀರಾಮ ಮಂದಿರದಲ್ಲಿ ‘ಶತಾಬ್ದಿ ಸಂಭ್ರಮ’ ಪ್ರಯುಕ್ತ ಇದೇ 22ರಂದು ವಿದ್ಯಾಗಣಪತಿ ದೇವರ ಪ್ರಾಣ ಪ್ರತಿಷ್ಠೆ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಡಾ.ಕೆ.ಪ್ರಭಾಕರ ಭಟ್ ಹೇಳಿದರು.
ಇಲ್ಲಿನ ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗ ಬೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ವಿದ್ಯಾಗಣಪತಿ ವಿಗ್ರಹದ ಪ್ರಾಣಪ್ರತಿಷ್ಠೆ ನೆರವೇರಿಸುವರು. ಇದೇ 21ರಂದು ಬೆಳಿಗ್ಗೆ 8.30ಕ್ಕೆ ಬಂಟ್ವಾಳ ವೆಂಕಟರಮಣ ಸ್ವಾಮಿ ದೇವಸ್ಥಾನ ಬಳಿ ನೇತ್ರಾವತಿ ನದಿಯಲ್ಲಿ ಗಂಗಾಪೂಜೆ ನೆರವೇರಿಸಿ, ತೀರ್ಥ ಕಲಶ ತರಲಾಗುವುದು. ಬಳಿಕ ಧ್ವಜಾರೋಹಣ, ಸರಸ್ವತಿ ಪೂಜೆ, ಉಗ್ರಾಣ ಮುಹೂರ್ತ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದರು.
22ರಂದು ಮಧ್ಯಾಹ್ನ 12 ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಕೊಲ್ಲಾಪುರ ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಬೆಳಗಾವಿ ದುರ್ದುಂಡೀಶ್ವರ ಸಿದ್ಧಸಂಸ್ಥಾನ ಮಠದ ನಿಜಲಿಂಗೇಶ್ವರ ಸ್ವಾಮೀಜಿ ಆಶೀರ್ವಚನ ನೀಡುವರು. ಆರ್‌ಎಸ್‌ಎಸ್ ಪ್ರಚಾರಕ ಸು.ರಾಮಣ್ಣ ಉಪನ್ಯಾಸ ನೀಡುವರು. ಅಂದು ಸಂಜೆ 6 ಗಂಟೆಗೆ ಕೊಡಗು ರಂಗಭೂಮಿ ಟ್ರಸ್ಟ್‌ನ ‘ಕರಿನೀರ ವೀರ ವೀರ ಸಾವರ್ಕರ್’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
23ರಂದು ಬೆಳಿಗ್ಗೆ 10.30ಕ್ಕೆ ಸಾಮೂಹಿಕ ಕುಂಕುಮಾರ್ಚನೆ, ಮಧ್ಯಾಹ್ನ 12 ಗಂಟೆಗೆ ‘ಮಾತೃ ಸಂಗಮ’, ಸಂಜೆ ಭಜನೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. 24ರಂದು ರಾಮನಾಮ ತಾರಕ ಜಪಯಜ್ಞ, ಮಧ್ಯಾಹ್ನ 12 ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ, ಕೊಂಡೆವೂರು ಯೋಗಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. 2ಗಂಟೆಗೆ ಹನುಮಗಿರಿ ಮೇಳದಿಂದ ‘ಶ್ರೀರಾಮ ಪಟ್ಟಾಭಿಷೇಕ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ವಿವರಿಸಿದರು.
ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಸಮಿತಿ ಪದಾಧಿಕಾರಿಗಳಾದ ಬಿ.ಗಣೇಶ ಸೋಮಯಾಜಿ, ನಾಗೇಶ ಕಲ್ಲಡ್ಕ, ಆರ್.ಚೆನ್ನಪ್ಪ ಕೊಟ್ಯಾನ್, ಕ.ಕೃಷ್ಣಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.